ಲೌಡ್ ಸ್ಪೀಕರ್ ಪ್ರಕರಣಕ್ಕೆ ಕೋಮು ಆಯಾಮ: ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಬೆಂಗಳೂರು: ಅಂಗಡಿಯಲ್ಲಿ ಲೌಡ್ ಸ್ಪೀಕರ್ ವಿಚಾರಕ್ಕೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಕೋಮು ಆಯಾಮ ನೀಡಿದ್ದಾರೆಂದು ಆರೋಪಿಸಿ ಬಿಜೆಪಿ ನಾಯಕರ ವಿರುದ್ಧ ಚುನಾವಣಾ ಆಯೋಗ ಮತ್ತು ಪೊಲೀಸರಿಗೆ ದೂರು ನೀಡಲಾಗಿದೆ.
ʼದ್ವೇಷ ಮಾತುಗಳ ವಿರುದ್ಧ ಅಭಿಯಾನʼ ತಂಡದ ಸದಸ್ಯರು ಆಯೋಗದ ಕಛೇರಿ ಹಾಗೂ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಂಸದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಪಿಸಿ ಮೋಹನ್ ಮೊದಲಾದವರ ವಿರುದ್ಧ ದೂರು ಸಲ್ಲಿಸಿದ್ದಾರೆ.
ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಜರತ್ಪೇಟೆ ಹಲ್ಲೆ ಪ್ರಕಣಕ್ಕೆ ಸಂಬಂಧಿಸಿದಂತೆ, ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೋಮು ವಿಭಜಕ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇಂತಹ ಹೇಳಿಕೆಗಳು ವಾಸ್ತವವಾಗಿ ಸುಳ್ಳು ಮತ್ತು ಪ್ರಚೋದನಾಕಾರಿ ಮಾತ್ರವಲ್ಲದೆ, ಮುಸ್ಲಿಂ ಸಮುದಾಯದ ವಿರುದ್ಧ ಹಿಂಸಾಚಾರ ನಡೆಸಲು ನೀಡುವ ಕರೆಯೂ ಆಗಿದೆ. ತೇಜಸ್ವಿ ಸೂರ್ಯ ಮುಸ್ಲಿಮರನ್ನು ಸಮಾಜವಿರೋಧಿ ಶಕ್ತಿಗಳು ಎಂದು ಕರೆದಿದ್ದಾರೆ. ಅವರ ಅಭಿಪ್ರಾಯದ ಪ್ರಕಾರ, ಹಿಂದೂಗಳ ವಿರುದ್ಧ ಇಂತಹ ಹಿಂಸಾಚಾರದ ಘಟನೆಗಳು ರಾಜ್ಯದಲ್ಲಿ ಏರಿಕೆಯಾಗಿವೆ. ಹೀಗಾಗಿ ಅವರು ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ದ್ವೇಷ ಬಿತ್ತಲು ಪ್ರಯತ್ನ ನಡೆಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮುಸ್ಲಿಮರನ್ನು ʼಜಿಹಾದಿಗಳುʼ ಎಂದು ಕರೆಯುವ ಮೂಲಕ ಚುನಾವಣಾ ಸಂದರ್ಭದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ಅವರು ಉಲ್ಲೇಖಿಸುತ್ತಿರುವ ಘಟನೆಯು ಹೊಡೆದಾಟ ಮತ್ತು ವಾಗ್ವಾದಕ್ಕೆ ಸಂಬಂಧಿಸಿದಂತಾಗಿದ್ದು, ಮಾರ್ಚ್ 17, 2024ರಂದು ಧ್ವನಿ ವರ್ಧಕವನ್ನು ಜೋರಾಗಿ ಹಾಕಿದ್ದರಿಂದ ವ್ಯಾಪಾರಿಯ ಮೇಲೆ ಹಲ್ಲೆ ನಡೆದಿದೆ. ಈ ಘಟನೆಯನ್ನು ತನಿಖೆಗೊಳಪಡಿಸಿ, ಸಂತ್ರಸ್ತನು ನೀಡಿರುವ ದೂರಿನನ್ವಯ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ನಂ. 49/2024 ಅನ್ನು ದಾಖಲಿಸಿಕೊಳ್ಳಲಾಗಿದೆ. ಈ ಘಟನೆಯ ತನಿಖೆ ಬಾಕಿ ಇರುವಾಗಲೇ ತೇಜಸ್ವಿ ಸೂರ್ಯ ತಾವೇ ಕಿರು ವಿಚಾರಣೆ ನಡೆಸುತ್ತಿದ್ದು, ತನಿಖಾ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದೂ ದೂರಲಾಗಿದೆ.
ಹೀಗಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಹಾಗೂ ಕೋಮು ಸೌಹಾರ್ದತೆಗೆ ಭಂಗ ತಂದ ಆರೋಪದಲ್ಲಿ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ‘ದ್ವೇಷ ಮಾತುಗಳ ವಿರುದ್ಧ ಅಭಿಯಾನ’ ತಂಡದ ಸದಸ್ಯರು ಆಗ್ರಹಿಸಿದ್ದಾರೆ.