‘ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ವಿರುದ್ಧ ನಿಂದನೆಗೆ ಖಂಡನೆ’: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ರಾಜ್ಯಪಾಲರಿಗೆ ದೂರು

Update: 2024-11-11 15:33 GMT

ಪ್ರಹ್ಲಾದ್ ಜೋಶಿ

ಬೆಂಗಳೂರು: ಕೋವಿಡ್ ಭ್ರಷ್ಟಾಚಾರಗಳ ಕುರಿತು ನ್ಯಾ.ಮೈಕಲ್ ಡಿ.ಕುನ್ಹಾ ಆಯೋಗದ ವರದಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಿರುವ ಬೆನ್ನಲ್ಲೇ ಕುನ್ಹಾ ಅವರನ್ನ ಕಾಂಗ್ರೆಸ್ ಏಜೆಂಟ್ ಎಂದು ಕರೆದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ರಾಜ್ಯಪಾಲರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ದೂರು ಸಲ್ಲಿಸಿದ್ದಾರೆ.

ಸೋಮವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್‍ರನ್ನು ಭೇಟಿ ಮಾಡಿ ದೂರು ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ನಿವೃತ್ತ ನ್ಯಾಯಮೂರ್ತಿ ಕುನ್ಹಾ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದವರು. ಅವರ ಬಗ್ಗೆ ಕೇಂದ್ರ ಸಚಿವರಾಗಿ ಪ್ರಹ್ಲಾದ್ ಜೋಶಿ ವೈಯಕ್ತಿಕ ನಿಂದನೆ ಮಾಡಿ ಮಾತನಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಪ್ರಹ್ಲಾದ್ ಜೋಶಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ತಮ್ಮ ಹೇಳಿಕೆಗೆ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿದರು.

ಕೇಂದ್ರ ಸಚಿವರು ಎಂದಾಕ್ಷಣ ಏನು ಬೇಕಾದರು ಮಾತನಾಡಬಹುದು ಎಂಬ ಅಹಂಕಾರ ಪ್ರವೃತ್ತಿಯಲ್ಲಿ ಪ್ರಹ್ಲಾದ್ ಜೋಶಿಯಿದ್ದಾರೆ. ಇತ್ತೀಚಿಗಿನ ಅವರ ಹೇಳಿಕೆಗಳು ಅಹಂಕಾರದಿಂದ ಕೂಡಿವೆ. ನ್ಯಾಯಮೂರ್ತಿ ಆಗಿದ್ದವರನ್ನ ಕಾಂಗ್ರೆಸ್ ಏಜೆಂಟ್ ಎಂದರೆ ಏನರ್ಥ?. ಕುನ್ಹಾ ಅವರ ಆಯೋಗ ಅಂತಿಮ ವರದಿ ಸಲ್ಲಿಸುವ ಮುನ್ನವೆ ಅವರ ಮೇಲೆ ಒತ್ತಡ ತರುವ ಪ್ರಯತ್ನವನ್ನು ಪ್ರಹ್ಲಾದ್ ಜೋಶಿ ನಡೆಸುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

 

ಕುನ್ಹಾ ಅವರನ್ನು ಕಾಂಗ್ರೆಸ್ ಏಜೆಂಟ್ ಎಂದಿರುವುದು ಒತ್ತಡ ತಂತ್ರದ ಒಂದು ಭಾಗ. ವರದಿಯನ್ನು ವಿಮರ್ಷಿಸಲಿ. ಆದರೆ ಕುನ್ಹಾ ಅವರ ವೈಯಕ್ತಿಕ ನಿಂದನೆ ಸರಿಯಲ್ಲ. ಪ್ರಹ್ಲಾದ್ ಜೋಶಿ ಒಬ್ಬ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದವರು, ನಮ್ಮ ತನಿಖಾ ಆಯೋಗಗಳು, ವ್ಯವಸ್ಥೆಗಳ ವಿರುದ್ಧ ಮಾತನಾಡುತ್ತಿರುವುದು ದುರಂತ. ಈ ರೀತಿ ನಿಂದನೆಗಳನ್ನ ಮಾಡಿದರೆ ಮುಂದೆ ಯಾರು ಕೂಡ ತನಿಖೆ ನಡೆಸುವ ಜವಾಬ್ದಾರಿ ತೆಗೆದುಕೊಳ್ಳಲು ಮುಂದೆ ಬರದಿರುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಆಯೋಗ ತನಿಖಾ ಕಾಯ್ದೆ 1952ರ ಪ್ರಕಾರ ಪ್ರಹ್ಲಾದ್ ಜೋಶಿ ಹೇಳಿಕೆ ಕಾನೂನು ಬಾಹಿರವಾಗಿದೆ. 6 ತಿಂಗಳ ವರೆಗೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಈ ವಿಚಾರವನ್ನ ರಾಷ್ಟ್ರಪತಿ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ರಾಜ್ಯಪಾಲರು ನಮ್ಮ ಅಹಾವಾಲುಗಳನ್ನ ತಾಳ್ಮೆಯಿಂದ ಆಲಿಸಿದ್ದು, ಈ ರೀತಿಯ ವೈಯಕ್ತಿಕ ಹೇಳಿಕೆಗಳನ್ನ ನೀಡುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಇದೇ ವೇಳೆ ದಿನೇಶ್ ಗುಂಡೂರಾವ್ ಹೇಳಿದರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News