ಹೊಂದಾಣಿಕೆ ರಾಜಕೀಯ, ಕುಟುಂಬ ರಾಜಕಾರಣವೇ ಲೋಕಸಭಾ ಚುನಾವಣೆಯಲ್ಲಿ ಸೋಲಿಗೆ ಕಾರಣ : ಸತ್ಯ ಶೋಧನಾ ಸಮಿತಿಗೆ ಕಾಂಗ್ರೆಸ್ ನಾಯಕರ ದೂರು
ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿನ ಕಾರಣಗಳ ಪರಾಮರ್ಶೆಗೆ ಕಾರಣಗಳನ್ನು ತಿಳಿಯಲು ಎಐಸಿಸಿ ರಚಿಸಿದ ಮಧುಸೂದನ್ ಮಿಸ್ತ್ರಿ ನೇತೃತ್ವದ ಸತ್ಯ ಶೋಧನಾ ಸಮಿತಿ ರಾಜ್ಯಕ್ಕೆ ಆಗಮಿಸಿದ್ದು, ರಾಜ್ಯದಲ್ಲಿ ಸರಕಾರವಿದ್ದೂ, ಗ್ಯಾರಂಟಿ ಬಲ ಇದ್ದೂ, ಎರಡಂಕಿ ಸ್ಥಾನ ಪಡೆಯಲು ವಿಫಲವಾಗಿರುವುದಕ್ಕೆ ಕಾರಣಗಳು ಪಕ್ಷದೊಳಗಿಂದಲೇ ಬಯಲಾಗಿವೆ.
ಲೋಕಸಭೆ ಚುನಾವಣೆ ಹಿನ್ನಡೆಯ ಆತ್ಮಾವಲೋಕನ ಸಂಬಂಧ ನಡೆದ ರಾಜ್ಯ ಕಾಂಗ್ರೆಸ್‌ನ ಸತ್ಯಶೋಧನ ಸಭೆಯಲ್ಲಿ ಹೊಂದಾಣಿಕೆ ರಾಜಕಾರಣ ಮತ್ತು ಸಚಿವ ಸಂಪುಟದ ಸದಸ್ಯರ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹೊಂದಾಣಿಕೆ ರಾಜಕೀಯ, ಪಕ್ಷ ಮತ್ತು ಸರ್ಕಾರ ಮಧ್ಯೆ ಸಮನ್ವಯದ ಕೊರತೆ, ಭ್ರಷ್ಟಾಚಾರ ಆರೋಪ, ಕುಟುಂಬ ರಾಜಕೀಯ, ಇವು ಲೋಕಸಭೆ ಚುನಾವಣೆಯ ಸೋಲಿಗೆ ಪ್ರಮುಖ ಕಾರಣಗಳು ಎಂದು ಸೋಲಿನ ಪರಾಮರ್ಶೆಗೆ ಎಐಸಿಸಿ ನಾಯಕ ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ರಚಿಸಲಾದ ಸತ್ಯ ಶೋಧನಾ ಸಮಿತಿ ಮುಂದೆ ಕಾಂಗ್ರೆಸ್ ನಾಯಕರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.
ಸಚಿವರು, ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು ಗುರುವಾರದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಮುನ್ನಡೆ ತಂದುಕೊಟ್ಟ ಕ್ಷೇತ್ರಗಳಲ್ಲೇ ಪಕ್ಷದ ಅಭ್ಯರ್ಥಿಗಳು ಹಿಂದೆ ಬಿದ್ದಿದ್ದಾರೆ. ಸಚಿವರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿಯೂ ಹಿನ್ನಡೆ ಅನುಭವಿಸಿದ್ದಾರೆ. ಮುನ್ನಡೆ ತಂದುಕೊಡಲು ವಿಫಲರಾದ ಸಚಿವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೆ, ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಜೊತೆ ‘ಹೊಂದಾಣಿಕೆ ರಾಜಕೀಯ’ ಮಾಡಿರುವುದರಿಂದ ನಮ್ಮ ಪಕ್ಷದ ಅಭ್ಯರ್ಥಿಗಳು ಸೋಲು ಕಾಣುವಂತಾಯಿತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ ಎನ್ನಲಾಗಿದೆ.
ಗೆಲ್ಲಲು ಹೆಚ್ಚಿನ ಅವಕಾಶಗಳಿದ್ದ ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಕ್ಷೇತ್ರಗಳನ್ನು ಪಕ್ಷ ಕಳೆದುಕೊಳ್ಳಲು ಕೇವಲ ಒಕ್ಕಲಿಗ– ಲಿಂಗಾಯತ ಜಾತಿ ಸಮೀಕರಣವಷ್ಟೆ ಕಾರಣವಲ್ಲ. ಅದರಲ್ಲೂ ವಿಜಯಪುರ ಮತ್ತು ಕೋಲಾರದಲ್ಲಿ ಸ್ಥಳೀಯ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದರಿಂದಲೇ ಸೋಲು ಉಂಟಾಗಿದೆ ಎಂಬ ವಿಚಾರವನ್ನು ಸಮಿತಿಯ ಮುಂದೆ ಕೆಲವು ಪ್ರಮುಖ ನಾಯಕರು ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಚುನಾವಣೆಯಲ್ಲಿ ‘ಗ್ಯಾರಂಟಿ’ ಯೋಜನೆಗಳ ಲಾಭ ಪಡೆಯಲು ಪಕ್ಷಕ್ಕೆ ಸಾಧ್ಯವಾಗಿಲ್ಲ. ಯೋಜನೆಗಳ ಸಮರ್ಪಕ ಅನುಷ್ಠಾನದ ಬಗ್ಗೆ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಲಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷ ನಾಯಕರಿಗೆ ಕಾರ್ಯಕರ್ತರು ನೆನಪಾಗಿದ್ದಾರೆ. ಉಸ್ತುವಾರಿ ಸಚಿವರು, ಶಾಸಕರ ಮಾತುಗಳಿಗೆ ಬೆಲೆ ಕೊಡುತ್ತಿಲ್ಲ. ಕಾರ್ಯಕರ್ತರ ಮಾತನ್ನೂ ಕೇಳುವವರು ಯಾರೂ ಇಲ್ಲ. ಈ ಎಲ್ಲ ವಿಷಯಗಳು ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿವೆ ಎಂದು ಕೆಲವರು ಅಭಿಪ್ರಾಯ ತಿಳಿಸಿದ್ದಾರೆ .
ಚುನಾವಣೆ ಸಂದರ್ಭದಲ್ಲಿ ಕೆಲವು ಸಚಿವರು, ಶಾಸಕರು, ಮುಖಂಡರು ನೀಡಿದ ಕೆಲವು ಬಹಿರಂಗ ಹೇಳಿಕೆಗಳೂ ಪಕ್ಷದ ಪಾಲಿಗೆ ಮುಳುವಾಗಿವೆ. ಪಕ್ಷದ ವೇದಿಕೆಯಲ್ಲಿ ವ್ಯಕ್ತಪಡಿಸಬೇಕಾದ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿಕೊಂಡ ಕಾರಣ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಯಿತು. ಕೆಲವು ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತಗಳು ಬಾರದಿರಲು ಇಂತಹ ಹೇಳಿಕೆಗಳೂ ಕಾರಣವಾದವು ಎಂದು ಇನ್ನೂ ಕೆಲವರು ಹೇಳಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
‘ವಿಜಯಪುರದಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ’ ಎಂದು ಮಾಜಿ ಶಾಸಕ ಮನೋಹರ್ ಐನಾಪುರ ಆರೋಪಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಇಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಅದೇ ಕ್ಷೇತ್ರದಲ್ಲಿ ಲೋಕಸಭೆಯಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕಿದೆ. ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೂ ಬಿಜೆಪಿಗೆ ಮುನ್ನಡೆ ಬಂದಿದೆ. ಕಾಂಗ್ರೆಸ್ ಪಕ್ಷವನ್ನು ಉಳಿಸಬೇಕಾದರೆ ಈ ಹೊಂದಾಣಿಕೆ ರಾಜಕೀಯ ನಿಲ್ಲಿಸಬೇಕು’ ಎಂದು ಮನೋಹರ್ ಐನಾಪುರ ಹೇಳಿದ್ದಾರೆ.
ಸತ್ಯ ಶೋಧನಾ ಸಮಿತಿ ತಡವಾಗಿಯಾದರೂ ಬಂದು ನಮ್ಮ ಅಭಿಪ್ರಾಯ ಕೇಳಿದೆ. ಲೋಕಸಭೆಯಲ್ಲಿ ನಿರೀಕ್ಷಿತ ಸ್ಥಾನ ಬಂದಿಲ್ಲ. ಕಾರಣ ಹುಡುಕಲು ನಮ್ಮ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಅವರ ಮುಂದೆ ಸವಿಸ್ತಾರವಾಗಿ ನಾನು ಹೇಳಿದ್ದೇನೆ. ಮುಂದೆ ಯಾವ ರೀತಿಯಲ್ಲಿ ಕ್ರಮ ಆಗುತ್ತೆ ಅಂತ ನೋಡೋಣ.ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
‘ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿ ಎಡವಿದೆ ಎಂದು ಪರಾಮರ್ಶೆ ನಡೆಸಿ, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಬಿಜೆಪಿ– ಜೆಡಿಎಸ್ ಮೈತ್ರಿಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದ ಸೋಲಿಗೆ ಪಕ್ಷದಲ್ಲಿನ ಬಣ ರಾಜಕೀಯವೇ ಕಾರಣ ಎಂಬುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಡಾ.ಎಂ.ಸಿ. ಸುಧಾಕರ್, ಶಾಸಕರಾದ ಕೆ.ವೈ. ನಂಜೇಗೌಡ, ಪರಿಷತ್ ಸದಸ್ಯ ಅನಿಲ್ ಕುಮಾರ್, ಪರಾಜಿತ ಲೋಕಸಭೆ ಅಭ್ಯರ್ಥಿ ಕೆ.ವಿ. ಗೌತಮ್ ಅವರಿಂದ ಕೋಲಾರ ಸೋಲಿಗೆ ಕಾರಣಗಳ ಬಗ್ಗೆ ವಿವರಣೆ ಪಡೆಯಲಾಯಿತು. ಬಳಿಕ ಕೆ.ಎಚ್. ಮುನಿಯಪ್ಪ ಅವರಿಂದಲೂ ಪ್ರತ್ಯೇಕ ವಿವರಣೆ ಪಡೆಯಲಾಯಿತು ಎಂದು ಮೂಲಗಳು ತಿಳಿಸಿವೆ.
ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೂಚಿಸಿದವರಿಗೆ ನೀಡಿಲ್ಲ. ಬದಲಿಗೆ ಸಚಿವರ ಆಪ್ತರಾಗಿರುವ ಪ್ರಭಾವಿಗಳಿಗೆ ನೀಡಲಾಗಿದೆ. ಅವರನ್ನೇ ಪಕ್ಷದ ಕಾರ್ಯಕರ್ತರು ಎಂದು ಬಿಂಬಿಸಲಾಗಿದೆ. ಹೀಗಾಗಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಲೋಕಸಭೆ ಚುನಾವಣೆಯಲ್ಲಿ ಅಸಹಾಯಕರಾದರು. ಯಾವ ನೇಮಕಾತಿಗಳಲ್ಲೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಬೆಲೆ ನೀಡಿಲ್ಲ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದು ಸಮಿತಿಗೆ ದೂರು ನೀಡಲಾಗಿದೆ.