ಸಿಎಂ ದರ್ಪ, ಡಿಸಿಎಂ ಧಮ್ಕಿ ಎಲ್ಲೆ ಮೀರಿದೆ: ಪ್ರಹ್ಲಾದ್ ಜೋಶಿ

ಪ್ರಹ್ಲಾದ್ ಜೋಶಿ (PTI)
ಬೆಂಗಳೂರು: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯರ ದರ್ಪ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಧಮ್ಕಿ ಎಲ್ಲೆ ಮೀರಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆs ದುರಾಡಳಿತ ಮತ್ತು ದುರಹಂಕಾರದ ಪರಮಾವಧಿ ಮೀರಿದೆ. ಬೆಳಗಾವಿಯಲ್ಲಿ ಸಿಎಂ-ಡಿಸಿಎಂ ಈರ್ವರೂ ದುರಹಂಕಾರದ ಪರಮಾವಧಿ ಮೀರಿ ವರ್ತಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರಿಗೆ ಅಧಿಕಾರದ ಮದ ನೆತ್ತಿಗೇರಿದೆ. ಹಾಗಾಗಿಯೇ ಕರ್ತವ್ಯ ನಿರತ ರಕ್ಷಣಾ ಅಧಿಕಾರಿ ಮೇಲೆಯೇ ಕೈ ಎತ್ತುವ ಹಂತ ತಲುಪಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಸಾರ್ವಜನಿಕವಾಗಿ ಹೀಗೆ ಪೊಲೀಸ್ ಅಧಿಕಾರಿಯನ್ನು ಅವಮಾನಿಸುವುದು, ಪ್ರತಿಭಟನಾಕಾರರನ್ನು ಹತ್ತಿಕ್ಕುವುದು ಅಧಿಕಾರದ ಮದವೇ ಹೊರತು ಮತ್ತೇನೂ ಅಲ್ಲ. ಸಿದ್ದರಾಮಯ್ಯ ಅವರು ವೇದಿಕೆ ಮೇಲೆಯೇ ಬಹಿರಂಗವಾಗಿ ಎಎಸ್ಪಿ ಮೇಲೆ ಕೈ ಎತ್ತಿ ದರ್ಪ ಮೆರೆದಿದ್ದಾರೆ. ಇನ್ನು, ಶಿವಕುಮಾರ್, ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಗೆ ತಡೆವೊಡ್ಡಿದ್ದಲ್ಲದೆ, ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ, ಸಭೆ, ಸಮಾರಂಭ ನಡೆಸಲು ಬಿಡುವುದಿಲ್ಲವೆಂದು ರೌಡಿಗಳ ರೀತಿ ಧಮ್ಕಿ, ಬೆದರಿಕೆವೊಡ್ಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಚರ್ಚೆ, ಮಾತುಕತೆ ಮತ್ತು ಅಭಿಪ್ರಾಯ ವ್ಯಕ್ತಪಡಿಸಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಕೆಲಸ ಮಾಡಬೇಡಿ. ಪ್ರಜಾಪ್ರಭುತ್ವದಲ್ಲಿ ಪ್ರಜಾವಿರೋಧಿ ಸರಕಾರದ ವಿರುದ್ಧ ಅಭಿಪ್ರಾಯ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ನಮ್ಮ ಸಂವಿಧಾನ ಪ್ರತಿ ನಾಗರಿಕನಿಗೂ ನೀಡಿದೆ. ಈ ಸಂವಿಧಾನಾತ್ಮಕ ಹಕ್ಕನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ ಎಂದು ಜೋಶಿ ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.