ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ ಕುರಿತು ಬಿಜೆಪಿಯಿಂದ ಪ್ರಚೋದನಕಾರಿ ಪೋಸ್ಟ್; ಅರಿವುಗೇಡಿ ಎಂದು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

Photo credit: PTI
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯ ಕುರಿತು ಕರ್ನಾಟಕದ ಬಿಜೆಪಿ ಘಟಕ ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ ಅನ್ನು ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಕಾಂಗ್ರೆಸ್, ಕರ್ನಾಟಕದ ಮೂವರು ಸೇರಿದಂತೆ ಕನಿಷ್ಠ 28 ಮಂದಿ ಅಮಾಯಕರು ಜೀವ ಕಳೆದುಕೊಂಡಿರುವ ಕುರಿತು ಇಡೀ ದೇಶ ಕಂಬನಿ ಮಿಡಿಯುತ್ತಿರುವಾಗ, ಇಂತಹ ಪೋಸ್ಟ್ ಮಾಡಿರುವ ಕರ್ನಾಟಕ ಬಿಜೆಪಿಯ ಸಾಮಾಜಿಕ ಮಾಧ್ಯಮದ ಅಡ್ಮಿನ್ ಓರ್ವ ಅರಿವುಗೇಡಿ ಎಂದು ವಾಗ್ದಾಳಿ ನಡೆಸಿದೆ.
ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಕುರಿತು ಬುಧವಾರ ಫೇಸ್ ಬುಕ್ ನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದ BJP Karnataka, “ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋದ ಹಿಂದೂಗಳನ್ನು ನಿಮ್ಮ ಧರ್ಮ ಯಾವುದೆಂದು ಕೇಳಿ ಹತ್ಯೆ ಮಾಡಿರುವುದು ಜಿಹಾದಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ” ಎಂದು ಆ ವಿಡಿಯೊದ ಮೇಲೆ “ಭಯೋತ್ಪಾದಕರು ಗುಂಡು ಹಾರಿಸುವಾಗ ಉಗ್ರರು ಜಾತಿ ಕೇಳಲಿಲ್ಲ, ನಿಮ್ಮ ಧರ್ಮ ಕೇಳಿದರು. ಉಗ್ರರು ರಾಜಕೀಯ ಪಕ್ಷ ಕೇಳಲಿಲ್ಲ. ನಿಮ್ಮ ಧರ್ಮ ಕೇಳಿದರು. ಉಗ್ರರು ಯಾವ ರಾಜ್ಯ ಎಂದು ಕೇಳಲಿಲ್ಲ, ನಿಮ್ಮ ಧರ್ಮ ಕೇಳಿದರು. ಉಗ್ರರು ನಿಮ್ಮ ಭಾಷೆ ಎಂದು ಕೇಳಲಿಲ್ಲ. ನಿಮ್ಮ ಧರ್ಮ ಕೇಳಿದರು. ಹಿಂದೂಗಳು ಒಂದಾಗದಿದ್ದರೆ ಖಂಡಿತವಾಗಿ ನಾಳೆ ಮತ್ತಷ್ಟು ಗುಂಡಿನ ದಾಳಿಗಳು ಕೇಳಲಿದೆ..” ಎಂದು ಟಿಪ್ಪಣಿಯನ್ನೂ ಬರೆದಿತ್ತು.
ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, “ಪಹಲ್ಗಾಮ್ ದಾಳಿ ನಡೆದಾಗ ನಿನ್ನೆ ಮೋದಿ ಎಲ್ಲಿದ್ದರು? ಪುಲ್ವಾಮದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 40 ಮಂದಿ ಸಿಆರ್ಪಿಎಫ್ ಯೋಧರು ಹತ್ಯೆಗೀಡಾದಾಗ ಮೋದಿ ಎಲ್ಲಿದ್ದರು?” ಎಂದು ಪ್ರಶ್ನಿಸಿದೆ.
“ಪುಲ್ವಾಮಾ ದಾಳಿ ಕುರಿತ ತನಿಖೆಗೆ ಏನಾಯಿತು? ಯಾಕೆ ಪುಲ್ವಾಮಾ ಪ್ರಕರಣವನ್ನು ಹೂತು ಹಾಕಲಾಯಿತು? ಗೃಹ ಸಚಿವ ಅಮಿತ್ ಶಾ ಅಡಿಯಲ್ಲಿ ನಡೆದಿರುವ ಪಹಲ್ಗಾಮ್ ಹತ್ಯಾಕಾಂಡವು ಭಾರೀ ಗುಪ್ತಚರ ವೈಫಲ್ಯ ಎಂದು ನಿಮಗನ್ನಿಸುತ್ತಿಲ್ಲವೆ?” ಎಂದೂ ಪ್ರಶ್ನಿಸಿದೆ.
“ಎಪ್ರಿಲ್ 16ರಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಕಾಶ್ಮೀರವನ್ನು ತಮ್ಮ ದೇಶದ ಕಂಠನಾಳ ಎಂದು ಬಣ್ಣಿಸಿದ್ದರು. ಇದು ಭಯೋತ್ಪಾದಕ ದಾಳಿಗೆ ಪ್ರಚೋದನೆ ನೀಡಿದೆ. ಈ ವೇಳೆ, ನಮ್ಮ ಆಂತರಿಕ ಭದ್ರತಾ ಸಚಿವರು ಏನು ಮಾಡುತ್ತಿದ್ದರು? ಮಿನಿ ಸ್ವಿಟ್ಝರ್ ಲ್ಯಾಂಡ್ ಎಂದೇ ಕರೆಯಲಾಗುವ ಪಹಲ್ಗಾಮ್ ಬಳಿ ಸಾವಿರಾರು ಪ್ರವಾಸಿಗರು ನೆರೆದಿದ್ದಾಗ, ಅಲ್ಲಿ ಯಾಕೆ ಭದ್ರತಾ ಸಿಬ್ಬಂದಿಗಳಿರಲಿಲ್ಲ?”, ” ಎಂದೂ ಕಾಂಗ್ರೆಸ್ ಪ್ರಶ್ನಿಸಿದೆ.
“ಭಯೋತ್ಪಾದಕರು ತಪ್ಪಿಸಿಕೊಂಡಿದ್ದು ಹೇಗೆ? 24 ಗಂಟೆ ಕಳೆದರೂ, ಅವರನ್ನು ಪತ್ತೆ ಹಚ್ಚಲು ಏಕೆ ಸಾಧ್ಯಾವಾಗಿಲ್ಲ? ಅಮರನಾಥ ಗುಹಾಂತರ ದೇವಾಲಯದಿಂದ ಪಹಲ್ಗಾಮ್ ಕೇವಲ 48 ಕಿಮೀ ದೂರವಿದ್ದು, ಮುಂದಿನ ತಿಂಗಳಲ್ಲಿ ನಡೆಯಲಿರುವ ಅಮರನಾಥ ಯಾತ್ರೆಗೆ ಸರಕಾರ ಹೇಗೆ ರಕ್ಷಣೆಯನ್ನು ಖಾತರಿಗೊಳಿಸಲಿದೆ? ಗಡಿಯಿಂದ 200 ಕಿಮೀ ದೂರವಿರುವ ಪಹಲ್ಗಾಮ್ ಅನ್ನು ಭಯೋತ್ಪಾದಕರು ತಲುಪಿದ್ದು ಹೇಗೆ? ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಯು ಭಾರಿ ಸಂಘಟಿತ ಕೃತ್ಯಗಳ ಬದಲು ಛಾಯಾ ಸಮರದ ಹಂತಕ್ಕೆ ಇಳಿದಿದೆ ಎಂದು ಅಮಿತ್ ಶಾ ನೀಡಿದ್ದ ಉಡಾಫೆ ಹೇಳಿಕೆಯಿಂದಾಗಿ ಭದ್ರತಾ ಪಡೆಗಳು ಮೈಮರೆತವು ಎಂದು ನಿಮಗನ್ನಿಸುತ್ತಿಲ್ಲವೆ?” ಎಂದು ಕರ್ನಾಟಕ ಕಾಂಗ್ರೆಸ್ ಸರಣಿ ಪ್ರಶ್ನೆಗಳನ್ನು ಎಸೆದಿದೆ.
ನಾವು ಈ ವೈಫಲ್ಯದ ಹೊಣೆಯನ್ನು ಹೊರುವಂತೆ ಸರಕಾರವನ್ನು ಆಗ್ರಹಿಸಬಹುದಾದರೂ, ಅದಕ್ಕೀಗ ಸೂಕ್ತ ಸಮಯವಲ್ಲ. ಇಂತಹ ದುರಂತಮಯ ಘಟನೆಗಳು ಯಾರ ಅಧಿಕಾರಾವಧಿಯಲ್ಲಿ ನಡೆದಿದ್ದವು ಎಂಬುದರತ್ತ ಒಮ್ಮೆ ನೋಡಿ ಎಂದು ಭಯೋತ್ಪಾದಕ ದಾಳಿಯ ಪಟ್ಟಿಯನ್ನು ನೀಡಿದೆ.
“ಉರಿ ದಾಳಿ ನಡೆದಾಗ ಬಿಜೆಪಿ ಸರಕಾರವಿತ್ತು. ಕಾರ್ಗಿಲ್ ದಾಳಿಯು ಬಿಜೆಪಿ ಸರಕಾರದ ಅವಧಿಯಲ್ಲಿ ನಡೆಯಿತು. ಪುಲ್ವಾಮಾ ದಾಳಿ ನಡೆದಾಗ ಬಿಜೆಪಿ ಸರಕಾರವಿತ್ತು. ಅಮರನಾಥ ದಾಳಿ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆಯಿತು. ಪಠಾಣ್ ಕೋಟ್ ದಾಳಿ ನಡೆದಾಗ ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಸಂಸತ್ ಮೇಲಿನ ದಾಳಿ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆಯಿತು. ಅಕ್ಷರಧಾಮ ದಾಳಿಯು ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ನಡೆಯಿತು. ಕಂದಹಾರ್ ಐಸಿ814 ವಿಮಾನ ಅಪಹರಣ ನಡೆದಾಗ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಲ್ಲಿತ್ತು. ಕಾಶ್ಮೀರಿ ಹಿಂದೂಗಳ ವಲಸೆಯು ಬಿಜೆಪಿ ಸರಕಾರದ ಅವಧಿಯಲ್ಲಿ ನಡೆಯಿತು. ಈಗ ನಡೆದ ಪೆಹಲ್ಗಾಮ್ ದಾಳಿಯೂ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ನಡೆದಿದೆ”, ಎಂದು ಪಟ್ಟಿ ನೀಡಿದೆ.
“BJP Karnataka, ನಿಮಗೆ ಮೃತದೇಹಗಳೊಂದಿಗೆ ರಾಜಕೀಯದಾಟ ಆಡುವ ಅಭ್ಯಾಸವಿದ್ದು, ಈ ಬಗ್ಗೆ ಕರ್ನಾಟಕದ ಜನತೆಗೆ ಚೆನ್ನಾಗಿ ತಿಳಿದಿದೆ. ಅವರು ನಿಮ್ಮನ್ನು 64 ಸ್ಥಾನಗಳಿಗೆ ಕುಗ್ಗಿಸಿದ್ದು, ಒಂದು ವೇಳೆ ನೀವೇನಾದರೂ ಸುಳ್ಳು ಹಾಗೂ ಅಪ್ರಚಾರಗಳನ್ನು ಹರಡುವುದನ್ನು ನಿಲ್ಲಿಸದಿದ್ದರೆ, ನಿಮ್ಮ ಸ್ಥಾನ ಇನ್ನೂ 15ರಿಂದ 20ರಷ್ಟು ಕಡಿಮೆಯಾಗಲಿದೆ. ನಿಮ್ಮ ಬೆಂಬಲಿಗರ ಮಿದುಳಿಗೆ ನಂಜು ತುಂಬುವುದನ್ನು ಇನ್ನಾದರೂ ನಿಲ್ಲಿಸಿ” ಎಂದು ಕರ್ನಾಟಕ ಕಾಂಗ್ರೆಸ್ ಕಿವಿಮಾತು ಹೇಳಿದೆ.
ನಿಮ್ಮ ಬಾಯಿ ಮುಚ್ಚಿಕೊಂಡಿರಿ. ವಿರೋಧ ಪಕ್ಷಗಳೊಂದಿಗೆ ಕೇಂದ್ರ ಸರಕಾರ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ, ದುಃಖತಪ್ತ ಕುಟುಂಬಗಳು ಹಾಗೂ ಭಾರತೀಯರಿಗೆ ನ್ಯಾಯವೊದಗಿಸಲಿ. ಒಂದಿಷ್ಟು ಸಭ್ಯತೆಯನ್ನಾದರೂ ಕಲಿಯಿರಿ ಎಂದು ಕಾಂಗ್ರೆಸ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.