ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ಕಾರ್ಯಕರ್ತರ ಅಹವಾಲು ಸ್ವೀಕಾರ
ಬೆಂಗಳೂರು: ಎರಡನೇ ಬಾರಿ ಮುಖ್ಯಮಂತ್ರಿಗಳಾದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಅವರ ಮೊದಲ ಕಾರ್ಯಕರ್ತರ ಅಹವಾಲು ಸ್ವೀಕಾರ ಅಭಿಯಾನ ಆರಂಭಗೊಂಡಿದೆ.
ವಿಕಲಚೇತನರ ಬಳಿಗೇ ಹೋಗಿ ಅಹವಾಲುಗಳನ್ನು ಸ್ವೀಕರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ʼಅಹವಾಲು ಸ್ವೀಕಾರ ಅಭಿಯಾನʼಕ್ಕೆ ಚಾಲನೆ ನೀಡಿದರು.
ತ್ರಿಚಕ್ರ ವಾಹನ, ಸರಕಾರಿ ಉದ್ಯೋಗ, ನಿಗಮ ಮಂಡಳಿಯಲ್ಲಿ ಅವಕಾಶ, ಗುತ್ತಿಗೆ ನೌಕರಿ, ಸ್ವಂತ ಉದ್ಯೋಗಕ್ಕೆ ಅನುದಾನ, ಸಾಲದ ಸವಲತ್ತು ಸೇರಿ ನಾನಾ ಬೇಡಿಕೆಗಳನ್ನು ವಿಕಲಚೇತನ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿಗಳ ಮುಂದಿಟ್ಟರು.
ಹಾಗೆಯೇ, ಪ್ರತಿಯೊಬ್ಬ ಕಾರ್ಯಕರ್ತರ ಅಹವಾಲು ಮತ್ತು ಪಕ್ಷ ಸಂಘಟನೆಯಲ್ಲಿ ಅವರು ತೊಡಗಿಸಿಕೊಂಡಿರುವ ಬಗ್ಗೆ ಮುಖ್ಯಮಂತ್ರಿಗಳು ಕೇಳಿ ತಿಳಿದುಕೊಂಡರು.
ಬಳಿಕ ತಮ್ಮ ಸಿಬ್ಬಂದಿಗೆ , ಅಹವಾಲುಗಳನ್ನು ಪಟ್ಟಿ ಮಾಡಿಕೊಂಡು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಬೇಡಿಕೆ ಈಡೇರಿಸಬೇಕು. ತಕ್ಷಣ ಬಗೆಹರಿಸಬಹುದಾದ ಬೇಡಿಕೆಗಳನ್ನು ಕೂಡಲೇ ಬಗೆಹರಿಸಲು ತಮ್ಮ ಅಧಿಕಾರಿ ಮತ್ತು ಸಿಬ್ಬಂದಿಗೆ ಸ್ಥಳದಲ್ಲೇ ಸಿಎಂ ಸೂಚನೆ ನೀಡಿದರು.
ಕಾಂಗ್ರೆಸ್ ಕಚೇರಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಮನೆ ಭಾಗ್ಯ :
ನಾವು ಕಾಂಗ್ರೆಸ್ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಇದ್ದೇವೆ ನಮಗೆ ಮನೆ ಕೊಡಿ ಎಂದು ಜಯಂತಿ, ಅರ್ಚನಾ, ಸುಗಂಧಿ, ಆಶಾ, ಸಂಧ್ಯಾ ಅವರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಿಎಂ, "ರಾಜೀವ್ ಗಾಂಧಿ ವಸತಿ ನಿಗಮದಡಿ ಮನೆ ನೀಡುವಂತೆ ಕ್ರಮ ತೆಗೆದುಕೊಳ್ಳಬೇಕು" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯಸಭಾ ಸಂಸದರಾದ ಜಿ. ಸಿ. ಚಂದ್ರಶೇಖರ್, ಶಾಸಕರಾದ ತನ್ವೀರ್ ಸೇಟ್ ಅವರು ಅಹವಾಲು ಸಲ್ಲಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದರು.
ಸಿಇಒಗೆ ಹೇಳುವೆ..!
ನಾನು ಪಕ್ಷಕ್ಕೆ ದುಡಿಯುತ್ತಿದ್ದು, ಒಂದು ಮನೆ ಮಂಜೂರು ಮಾಡಿಕೊಡಿ ಎಂದು ಯಾದಗಿರಿ ಜಿಲ್ಲೆಯ ರಾಮಸಮುದ್ರದ ಚಂದಪಾಷ ಅವರ ಮನವಿಗೆ ಸ್ಪಂದಿಸಿದ ಸಿಎಂ ಅವರು, ನಿಮ್ಮ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಹೇಳುವೆ ಹಾಗೂ ಸಿಎಂ ಪರಿಹಾರ ನಿಧಿ ಮೂಲಕ ನೀಡುತ್ತೇನೆ ಎಂದು ಭರವಸೆ ನೀಡಿದರು.
ಕನ್ನಡ ಏಕಿಲ್ಲ ಎಂದು ಪ್ರಶ್ನಿಸಿದ ಸಿಎಂ..!
ಕೆಎಂಎಫ್ ಸೇರಿದ ವೆಬ್ ಸೈಟ್ ಅಲ್ಲಿನ ಮಾಹಿತಿಯು ಕನ್ನಡ ಹೊರತಾಗಿ ಇಂಗ್ಲಿಷ್, ಗುಜರಾತಿ, ಮರಾಠಿ, ಹಿಂದಿ ಭಾಷೆಯಲ್ಲಿ ಮಾಹಿತಿಯಿದ್ದು ಕನ್ನಡ ಮಾಯವಾಗಿದೆ ಎಂದು ಚಾಮರಾಜನಗರದ ಎಸ್ ಶಿವನಾಗಪ್ಪ ಅವರು ಮನವಿ ಸಲ್ಲಿಸಿದಾಗ ಕೆಎಂಎಫ್ ಅಧಿಕಾರಿಗೆ ಕರೆ ಮಾಡಿ ಕನ್ನಡದಲ್ಲಿ ಮಾಹಿತಿಯನ್ನು ಏಕೆ ಕೊಟ್ಟಿಲ್ಲ, ಕೂಡಲೇ ಕನ್ನಡದಲ್ಲಿ ಮಾಹಿತಿ ದೊರೆಯುವಂತೆ ಮಾಡಿ ಎಂದು ಸೂಚನೆ ನೀಡಿದರು.
ಬೀದಿ ವ್ಯಾಪಾರಿಗಳಿಗೆ ತೊಂದರೆ ಬೇಡ..!
ಬೀದಿ ಬದಿ ವ್ಯಾಪಾರಿಗಳಿಗೆ ಅನಗತ್ಯ ತೊಂದರೆ ಕೊಡುತ್ತಿದ್ದು ಎತ್ತಂಗಡಿ ಮಾಡಿಸುತ್ತಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಬೀದಿ ವ್ಯಾಪಾರಿಗಳ ಕಾಂಗ್ರೆಸ್ ಘಟಕದ ಇಸ್ಮಾಯಿಲ್ ಅವರು ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಿದರು. ಇದಕ್ಕೆ ಗರಂ ಆದ ಸಿಎಂ ಸ್ಥಳದಿಂದಲೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಬೀದಿ ಬದಿ ವ್ಯಾಪಾರಿಗಳ ಜೊತೆ ಮಾನವೀಯವಾಗಿ ವರ್ತಿಸಬೇಕು. ಅವರಿಗೆ ಅನಗತ್ಯ ತೊಂದರೆ ಕೊಡಬಾರದು ಎನ್ನುವ ಸೂಚನೆ ನೀಡಿದರು.