ಯಲಹಂಕದಲ್ಲಿ ಸುಸಜ್ಜಿತ ಕ್ರೀಡಾ ಸಿಟಿ ನಿರ್ಮಾಣ: ಸಚಿವ ಬಿ.ನಾಗೇಂದ್ರ

Update: 2024-02-14 13:03 GMT

ಬೆಂಗಳೂರು: ಬೆಂಗಳೂರಿನ ಯಲಹಂಕ ತಾಲೂಕು ಹೆಸರಘಟ್ಟ ಹೋಬಳಿಯ ಮಾವಳ್ಳಿಪುರ ಬಳಿ 100 ಎಕರೆ ಪ್ರದೇಶದಲ್ಲಿ ಕ್ರೀಡಾಸಿಟಿ (ಸ್ಪೋರ್ಟ್ಸ್ ಸಿಟಿ) ನಿರ್ಮಿಸಲಾಗುವುದು ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಎಸ್.ಆರ್.ವಿಶ್ವನಾಥ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಾವಳ್ಳಿಪುರ ಬಳಿ 60 ಎಕರೆ ಜಮೀನು ನೀಡಲು ಕಂದಾಯ ಇಲಾಖೆ ಒಪ್ಪಿಕೊಂಡಿದ್ದು, ಇದರ ಜೊತೆಗೆ ಇನ್ನೂ ಹೆಚ್ಚುವರಿಯಾಗಿ 40 ಎಕರೆ ಜಾಗ ನೀಡುವಂತೆ ಕೇಳಿಕೊಳ್ಳಲಾಗಿದೆ ಎಂದರು.

ಇನ್ನೂ, ಅದನ್ನು ಪಡೆದುಕೊಂಡು ಸಂಪುಟ ಸಭೆ ಒಪ್ಪಿಗೆ ಪಡೆದುಕೊಂಡು ಸರಕಾರದಿಂದ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಯಾವುದಾದರೂ ಸರಿ ಈ ಪ್ರದೇಶದಲ್ಲಿ ಸುಸಜ್ಜಿತವಾದ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಹಾಗೂ ಎಲ್ಲ ಕ್ರೀಡೆಗಳು ಒಂದೇ ವೇದಿಕೆಯಡಿ ಬರುವಂತ ಕ್ರೀಡಾ ಸಿಟಿ ನಿರ್ಮಾಣ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಈ ವೇಳೆ ವಿಶ್ವನಾಥ್, ಕ್ರೀಡಾ ಸಿಟಿ ನಿರ್ಮಿಸಿದರೇ ನಿಮ್ಮನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಿಸುವುದಾಗಿ ನುಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಾಗೇಂದ್ರ, ಉದ್ಘಾಟನೆ ದಿನದಂದು ನಾವು ಕಬ್ಬಡ್ಡಿ ಆಡೋಣ ಎಂದಾಗ ಕೆಲಕಾಲ ಸದನ ನಗೆಗಡಲಲ್ಲಿ ತೇಲಿತು. ಆನಂತರ ಸಚಿವರು, ಇಲಾಖೆಯ ವತಿಯಿಂದ ಜಿಲ್ಲಾ ಮತ್ತು ತಾಲೂಕುಮಟ್ಟದಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗುವುದು ಎಂದು ಕಾಂಗ್ರೆಸ್ ಸದಸ್ಯ ಬಿ.ಶಿವಣ್ಣ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News