ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪ : ಗುತ್ತಿಗೆದಾರರ ಸಂಘ ಆರೋಪ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆಗಳಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಹಣ ಬಿಡುಗಡೆಗೆ ಮಧ್ಯವರ್ತಿಗಳು ಕಾಟ ಕೊಡುತ್ತಿದ್ದಾರೆ. ಜೇಷ್ಠತೆ ಪಾಲಿಸದೇ ಸ್ಪೆಷಲ್ ಎಲ್‍ಓಸಿ ಸೃಷ್ಟಿ ಮಾಡಿ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದೆ.
ಸರಕಾರದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ನಾಲ್ಕು ನೀರಾವರಿ ನಿಗಮಗಳ ಎಂ.ಡಿ. ಕರೆಸಿ ಸಭೆ ನಡೆಸಿ ಕಾಣದ ಕೈಗಳ ಬಗ್ಗೆ ಎಂ.ಡಿ.ಗಳ ಜೊತೆ ಚರ್ಚಿಸಿ ಎಂದು ಗುತ್ತಿಗೆದಾರರ ಸಂಘವು ಬರೆದಿರುವ ಪತ್ರದಲ್ಲಿ ಮನವಿ ಮಾಡಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್, ಬಿಜೆಪಿಗಿಂತ ಕಾಂಗ್ರೆಸ್ ಅವಧಿಯಲ್ಲೇ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ. ಸರಕಾರದಲ್ಲಿ ಸಚಿವರ ಸಂಬಂಧಿಕರಿಂದಲೇ ಕಮಿಷನ್ ಪಡೆಯಲಾಗುತ್ತಿದೆ. ಹೆಚ್ಚು ಕಮಿಷನ್ ಕೊಟ್ಟವರಿಗೆ ಕಾಮಗಾರಿಗಳ ಬಾಕಿ ಹಣ ಬಿಡುಗಡೆಯಾಗುತ್ತದೆ ಎಂದು ಆರೋಪಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಕುಟುಂಬಸ್ಥರು ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ ಎನ್.ಎಸ್.ಭೋಸರಾಜು ಅವರ ಕುಟುಂಬಸ್ಥರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಗುತ್ತಿಗೆದಾರರಿಗೆ ನ್ಯಾಯ ಒದಗಿಸಬೇಕು ಎಂದು ಆರ್.ಮಂಜುನಾಥ್ ಪತ್ರದಲ್ಲಿ ಮನವಿ ಮಾಡಿದ್ದಾರೆ.