‘ವರುಣನ ಕೃಪೆ’ಯಿಂದ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೋರ್ಟ್ ಆದೇಶ ಪಾಲನೆ, ರೈತರ ಹಿತ ರಕ್ಷಣೆ ಸಾಧ್ಯವಾಗಿದೆ: ಡಿ.ಕೆ.ಶಿವಕುಮಾರ್

Update: 2024-07-20 14:50 GMT

ಬೆಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ವರುಣ ದೇವನ ಕೃಪೆಯಿಂದ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೋರ್ಟ್ ಆದೇಶ ಪಾಲನೆ ಹಾಗೂ ರಾಜ್ಯದ ರೈತರ ಹಿತ ರಕ್ಷಣೆ ಸಾಧ್ಯವಾಗುತ್ತಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶನಿವಾರ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಇನ್ನೆರಡು ಮೂರು ದಿನಗಳಲ್ಲಿ ಕೆಆರ್‍ಎಸ್ ಅಣೆಕಟ್ಟು ತುಂಬಲಿದ್ದು, ತಮಿಳುನಾಡಿನ ಪಾಲಿನ ನೀರನ್ನು ಹರಿಸಬಹುದಾದ ಸೂಚನೆ ವ್ಯಕ್ತವಾಗಿವೆ. ಇದರ ಜತೆಗೆ ನಮ್ಮ ರೈತರ ಹಿತಕಾಯಲು ಕೆರೆ ತುಂಬಿಸುವ ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಭತ್ತ ನಾಟಿ ಮಾಡುವ ಮುನ್ನ ಸ್ವಲ್ಪ ತಾಳ್ಮೆ ವಹಿಸಬೇಕು. ನೀರು ಎಷ್ಟು ಪ್ರಮಾಣದಲ್ಲಿ ಬರಲಿದೆ ಎಂಬುದು ಇನ್ನು ತಿಳಿದಿಲ್ಲ. ಹೀಗಾಗಿ ಕೃಷಿ ಇಲಾಖೆಯವರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು. ನಾವು ಮುಂಜಾಗೃತವಾಗಿ ರಂಗನತಿಟ್ಟು ಸೇರಿದಂತೆ ಇತರೆಡೆ ದೋಣಿ ವಿಹಾರ ಸ್ಥಗಿತಗೊಳಿಸಿದ್ದು, ಹೊಳೆಗಳ ಅಕ್ಕಪಕ್ಕದ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದೇವೆ ಎಂದರು.

ಕರಾವಳಿ ಭಾಗದಲ್ಲಿ ಕೇರಳ ಮೂಲದ ಚಾಲಕ ವಾಹನ ಸಮೇತ, ಗುಡ್ಡ ಕುಸಿತಕ್ಕೆ ಸಿಲುಕಿದ್ದಾನೆ. ಮಳೆ ಮುಂದುವರಿದಿರುವ ಕಾರಣ ತೆರವು ಕಾರ್ಯಕ್ಕೆ ಅಡ್ಡಿಯುಂಟಾಗಿದೆ. ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಸಚಿವರು, ಶಾಸಕರು ಸ್ಥಳದಲ್ಲಿದ್ದು, ಅವರ ಕರ್ತವ್ಯ ನಿಭಾಯಿಸುತ್ತಿದ್ದಾರೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.

ಎಚ್‍ಡಿಕೆ ಭೇಟಿಗೆ ಆಕ್ಷೇಪವಿಲ್ಲ: ಮಳೆ ಹಾನಿಯಾಗಿರುವ ಅಂಕೋಲಾ ಸೇರಿದಂತೆ ಇತರ ಕಡೆಗಳಿಗೆ ಕುಮಾರಸ್ವಾಮಿ ಫೀಲ್ಡಿಗೆ ಇಳಿದಿದ್ದಾರೆ? ಅವರು ಸಿಆರ್‍ಪಿಎಫ್ ಪಡೆ ಕರೆಸಿ, ತೆರವು ಕಾರ್ಯಕ್ಕೆ ನೆರವಾಗಿದ್ದರೆ, ಫೀಲ್ಡಿಗೆ ಇಳಿದಿದ್ದಾರೆಂದು ಹೇಳಬಹುದಿತ್ತು. ಅನಾಹುತ ನಡೆದ ಒಂದೇ ತಾಸಿನಲ್ಲಿ ನಮ್ಮ ಸಚಿವರನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ಸಚಿವರಾದ ಮಂಕಳಾ ವೈದ್ಯ, ಕೃಷ್ಣ ಭೈರೇಗೌಡರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಅಲ್ಲದೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ. ರಾಜ್ಯ ಸರಕಾರ ತನ್ನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದೆ. ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಅವರು ಭೇಟಿ ನೀಡಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಈ ವಿಚಾರದಲ್ಲಿ ಈಗ ರಾಜಕಾರಣ ಮಾಡುವುದು ಬೇಡ. ಮೊದಲು ಜನರ ರಕ್ಷಣೆ ಮಾಡೋಣ ಎಂದು ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News