ವರ್ಷಪೂರ್ತಿ ರಾಗಿ, ಭತ್ತ ಖರೀದಿ ಕೇಂದ್ರ ಕಾರ್ಯನಿರ್ವಹಿಸಲಿ : ದರ್ಶನ್ ಪುಟ್ಟಣ್ಣಯ್ಯ

ಬೆಂಗಳೂರು : ರಾಜ್ಯದಲ್ಲಿ ರಾಗಿ, ಭತ್ತ ಖರೀದಿ ಕೇಂದ್ರಗಳು ವರ್ಷ ಪೂರ್ತಿ ಕಾರ್ಯ ನಿರ್ವಹಿಸುವಂತೆ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಗ್ರಹಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಪ್ರಸ್ತುತ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಮಾತನಾಡಿದ ಅವರು, ರೈತರು ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಆತ್ಮಹತ್ಯೆಯನ್ನು ತಡೆಯಲು ಸರಳ ರೀತಿಯಲ್ಲಿ ರೈತರಿಗೆ ಸಾಲ ವಿತರಿಸುವ ವ್ಯವಸ್ಥೆಯನ್ನು ಜಾರಿ ಮಾಡಿ ಎಂದು ಒತ್ತಾಯಿಸಿದರು.
ನೀರಾವರಿಗೆ ಈ ಸರಕಾರ ಕಡಿಮೆ ಹಣ ಒದಗಿಸಿದ್ದು, ಹೆಚ್ಚಿನ ಹಣ ಒದಗಿಸಬೇಕು. ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳನ್ನು ರಾಜ್ಯ ಸರಕಾರರ ಕೈ ಬಿಡಬೇಕು.ಹಾಗೇ, ರಾಷ್ಟ್ರೀಯ ಕೃಷಿ ನೀತಿಯನ್ನು ಕೈಬಿಡಬೇಕು. ಆರೋಗ್ಯ ಕ್ಷೇತ್ರಕ್ಕೆ ರಾಜ್ಯ ಸರಕಾರ ಹೆಚ್ಚಿನ ಒತ್ತು ನೀಡಬೇಕು. ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಅವರು ಹೇಳಿದರು.
ಹಿಮಾಚಲ ಪ್ರದೇಶದಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಸಬ್ಸಿಡಿ, ನೆರವು ಒದಗಿಸಲಾಗುತ್ತಿದೆ. ರಾಜ್ಯದಲ್ಲೂ ಸರಕಾರ ಸಾವಯವ ಕೃಷಿಗೆ ಹೆಚ್ಚಿನ ನೆರವು ನೀಡಬೇಕು. ಪ್ರತಿ ಹೋಬಳಿಯಲ್ಲಿ ಒಂದು ಪಂಚಾಯಿತಿಯನ್ನು ಸಹಜ ಕೃಷಿಗೆ ಒಳಪಡುವಂತೆ ಅನುದಾನ ನೀಡಬೇಕು ಎಂದ ಅವರು, ಚಾಮರಾಜನಗರದಲ್ಲಿ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರ ಅಧ್ಯಯನ ಪೀಠವನ್ನು ಸರಕಾರ ರಚಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.