ಬಳ್ಳಾರಿ ಜೈಲಿಗೆ ಸ್ಥಳಾಂತರ ವೇಳೆ ದರ್ಶನ್ ಕೂಲಿಂಗ್ ಗ್ಲಾಸ್ ಧರಿಸಿದ್ದ ವಿಚಾರ : ಕ್ರಮಕ್ಕೆ ಡಿಐಜಿ ಪತ್ರ

Update: 2024-08-29 15:06 GMT

PC :x/@dasadarshan

ಬೆಂಗಳೂರು/ಬೆಳಗಾವಿ : ಬಳ್ಳಾರಿ ಜೈಲಿಗೆ ಸ್ಥಳಾಂತರವಾಗುವ ವೇಳೆ ನಟ ದರ್ಶನ್ ಕೂಲಿಂಗ್ ಗ್ಲಾಸ್ ಧರಿಸಿದ್ದ ವಿಚಾರವಾಗಿ ಸಂಬಂಧಿಸಿದ ಬೆಂಗಾವಲು ಪೊಲೀಸ್ ಪಡೆ ವಿರುದ್ಧ ಶಿಸ್ತುಕ್ರಮ ಜರುಗಿಸಲು ಕೋರಿ ರಾಜ್ಯ ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಿಗೆ ಬೆಳಗಾವಿ ಉತ್ತರ ವಲಯ ಕಾರಾಗೃಹಗಳ ಉಪ ಮಹಾನಿರೀಕ್ಷಕ ಟಿ.ಪಿ.ಶೇಷ ಅವರು ಪತ್ರ ಬರೆದಿದ್ದಾರೆ.

ಬಳ್ಳಾರಿ ಜೈಲಿಗೆ ತೆರಳುತ್ತಿರುವಾಗ ದರ್ಶನ್ ಕೂಲಿಂಗ್ ಗ್ಲಾಸ್ ಧರಿಸಿರುವ ಬಗ್ಗೆ ಸುದ್ದಿ ವಾಹಿನಿಗಳಲ್ಲಿ ವರದಿ ಪ್ರಸಾರವಾಗಿದೆ. ಇದಕ್ಕೆ ಬೆಂಗಾವಲಿಗೆ ನಿಯೋಜಿತರಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯು ಅನುಮತಿಸಿರುವುದು ಕಂಡುಬಂದಿದೆ. ಇದರಿಂದಾಗಿ ದರ್ಶನ್‍ಗೆ ಪೊಲೀಸರು ರಾಜಾತಿಥ್ಯ ನೀಡುತ್ತಿರುವುದಾಗಿ ಸಾರ್ವಜನಿಕರು ಹಾಗೂ ರಾಜ್ಯದ ಜನತೆಗೆ ತಪ್ಪು ಕಲ್ಪನೆಗಳು ಬಿಂಬಿತವಾಗುತ್ತಿದೆ. ಇದರಿಂದ ಇಲಾಖೆಯ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಪತ್ರದಲ್ಲಿ ಡಿಐಜಿ ಟಿ.ಪಿ.ಶೇಷ ತಿಳಿಸಿದ್ದಾರೆ.

ಬೆಂಗಾವಲಿಗೆ ನಿಯೋಜಿತರಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯು ದರ್ಶನ್ ಅವರ ಸ್ವಂತ ವಸ್ತುಗಳನ್ನು ನಿಯಮಾನುಸಾರ ಕಾರಾಗೃಹದ ಮುಖ್ಯದ್ವಾರದಲ್ಲಿಯೇ ಒಪ್ಪಿಸಬೇಕು. ಆದರೆ, ಸಿಬ್ಬಂದಿಯು ನಿಯಮಬಾಹಿರವಾಗಿ ಕೂಲಿಂಗ್ ಗ್ಲಾಸ್ ಧರಿಸಲು ಅನುಮತಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಸೂಕ್ತ ಶಿಸ್ತುಕ್ರಮ ಜರುಗಿಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ಕೋರುವ ಪತ್ರ ಬರೆದಿದ್ದಾರೆ.

ಅಲ್ಲದೆ, ಬಳ್ಳಾರಿ ಜೈಲಿನಲ್ಲಿ ದರ್ಶನ್‍ರನ್ನು ಹೇಗೆ ನೋಡಿಕೊಳ್ಳಬೇಕೆಂದು ಬಳ್ಳಾರಿ ಕಾರಾಗೃಹದ ಅಧಿಕ್ಷಕರಿಗೆ ಪತ್ರದಲ್ಲಿ ತಿಳಿಸಿರುವ ಡಿಐಜಿ ಟಿ.ಪಿ.ಶೇಷ ಅವರು, ದರ್ಶನ್‍ರನ್ನು ಪ್ರತ್ಯೇಕ ಕೊಠಡಿಯಲ್ಲಿರುವುದು, ಈ ಕೊಠಡಿಗೆ 24 ಗಂಟೆಗಳಲ್ಲಿಯೂ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಇರಿಸಬೇಕು. ಪ್ರತಿನಿತ್ಯ ಸಿಸಿ ಕ್ಯಾಮರಾ ದೃಶ್ಯಾವಳಿ ಶೇಖರಿಸಬೇಕು. ದರ್ಶನ್ ಇರುವ ಸೆಲ್‍ನ ಕರ್ತವ್ಯಕ್ಕೆ ಮುಖ್ಯವೀಕ್ಷಕ ಅಧಿಕಾರಿ ನಿಯೋಜಿಸಬೇಕು. ಈ ಸೆಲ್‍ಗೆ ಪ್ರತಿನಿತ್ಯ ಜೈಲರ್ ಭೇಟಿ ನೀಡಿ ಭದ್ರತೆ ಪರಿಶೀಲಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಕಾರಾಗೃಹದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಬೀಗ ಹಾಕಬೇಕು ಹಾಗೂ ತೆರೆಯಬೇಕು. ಕರ್ತವ್ಯ ನಿರ್ವಹಿಸುವ ಮುನ್ನ ಪ್ರತಿನಿತ್ಯ ದರ್ಶನ ಸೆಲ್ ತಪಾಸಣೆ ಮಾಡಬೇಕು. ಸೆಲ್‍ಗೆ ನಿಯೋಜಿಸುವ ಸಿಬ್ಬಂದಿ ಬಾಡಿವಾರ್ನ್ ಕ್ಯಾಮರಾ ಧರಿಸಬೇಕು. ದರ್ಶನ ಭೇಟಿಗೆ ಧರ್ಮಪತ್ನಿ, ರಕ್ತಸಂಬಂಧಿ, ವಕಾಲತ್ತು ವಹಿಸಿದ ವಕೀಲರಿಗೆ ಭೇಟಿಗೆ ಮಾತ್ರ ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.

ಸಾಮಾನ್ಯ ಬಂಧಿಯಂತೆ ಪರಿಗಣಿಸಿ: ಚಿತ್ರರಂಗದ ಕಲಾವಿದರು, ಅಭಿಮಾನಿಗಳು ಹಾಗೂ ರಾಜಕೀಯ ನಾಯಕರ ಭೇಟಿಗೆ ಅವಕಾಶವಿಲ್ಲ. ನಟ ದರ್ಶನ್ ಅವರನ್ನು ಸಾಮಾನ್ಯ ಬಂಧಿಯಂತೆ ಪರಿಗಣಿಸಿ, ಸಾಮಾನ್ಯ ಬಂಧಿಗೆ ಕೊಡುವ ಸೌಲಭ್ಯ ಮಾತ್ರ ನೀಡಬೇಕು. ಜೈಲಿನಲ್ಲಿ ಬೇರೆ ಕೈದಿಗಳ ಜೊತೆಗೆ ದರ್ಶನ್ ಬೆರೆಯುವಂತಿಲ್ಲ, ಅಧಿಕಾರಿಗಳು ಸರ್ಪೈಸ್ ವಿಸಿಟ್ ಮಾಡಬೇಕು. ಕಾರಾಗೃಹ ಸುತ್ತಲೂ ಸೂಕ್ತ ಭದ್ರತೆ ಒದಗಿಸಬೇಕು ಎಂದು ಬೆಳಗಾವಿ ಉತ್ತರ ವಲಯ ಕಾರಾಗೃಹಗಳ ಉಪ ಮಹಾನಿರೀಕ್ಷಕ ಟಿ.ಪಿ.ಶೇಷ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News