ದಾವಣಗೆರೆ | ಎಸ್‍ಬಿಐ ಬ್ಯಾಂಕ್ ದರೋಡೆ ಪ್ರಕರಣ ಬೇಧಿಸಿದ ಪೊಲೀಸರು : ಆರೋಪಿಗಳಿಂದ 13 ಕೋಟಿ ಮೌಲ್ಯದ ಚಿನ್ನಾಭರಣ ವಶ

ದಾವಣಗೆರೆ : ನ್ಯಾಮತಿ ಪಟ್ಟಣದ ಎಸ್‍ಬಿಐ ಬ್ಯಾಂಕ್ ದರೋಡೆ ಪ್ರಕರಣ ಬೇಧಿಸಿ ದಾವಣಗೆರೆ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಮಾಹಿತಿ ನೀಡಿದರು.
ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನ್ಯಾಮತಿ ಪಟ್ಟಣದ ಎಸ್‍ಬಿಐ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ
13 ಕೋಟಿ ರೂ. ಮೌಲ್ಯದ 17.5 ಕೆ.ಜಿ. ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಮಧುರೈನ ವಿಜಯಕುಮಾರ್(30), ಅಜಯ್‍ಕುಮಾರ್(28), ಪರಮಾನಂದ (30), ಸುರಹೊನ್ನೆಯ ಅಭಿಷೇಕ (23), ಚಂದ್ರು (23), ಮಂಜುನಾಥ್ (32) ಬಂಧಿತ ಆರೋಪಿಗಳು. ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ಐದು ತಂಡವನ್ನು ರಚಿಸಲಾಗಿತ್ತು. ಚನ್ನಗಿರಿ ಉಪವಿಭಾಗದ ಎಎಸ್ಪಿ ಶ್ಯಾಮ್ ವರ್ಗೀಸ್ ಅವರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು ಎಂದು ಹೇಳಿದರು.
ಮೊದಲ ದಿನ ಪ್ರತಿ ತಂಡಕ್ಕೂ ಪ್ರತ್ಯೇಕ ಕೆಲಸ ವಹಿಸಲಾಗಿತ್ತು. ಆರಂಭದಲ್ಲಿ ಎಲ್ಲಾ ರೀತಿಯ ತಾಂತ್ರಿಕ ಮತ್ತು ಭೌತಿಕ ಸಾಕ್ಷಿಗಳನ್ನು ಪರಿಶೀಲಿಸಿದರೂ ಯಾವುದೇ ಉಪಯುಕ್ತ ಮಾಹಿತಿ ಲಭ್ಯವಾಗಲಿಲ್ಲ.
ಈ ಹಿಂದೆ ನಡೆದ ಬ್ಯಾಂಕ್ ದರೋಡೆ, ಎಟಿಎಂ ಕಳ್ಳತನ ಪ್ರಕರಣಗಳ ವಿವರ, ಹಳೆಯ ಆರೋಪಿಗಳ ವಿವರ, ಅಂತರ್ ರಾಜ್ಯ ಗ್ಯಾಂಗ್ ವಿವರ ಪಡೆದು ತನಿಖೆಯನ್ನು ನಡೆಸಲಾಗಿದೆ.
ಪೊಲೀಸ್ ಅಧಿಕಾರಿಗಳ ತಂಡ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.
ತಾಂತ್ರಿಕ ಮೂಲಗಳಿಂದ ದೊರೆತ ಸುಳಿವಿನಿಂದ ಉತ್ತರಪ್ರದೇಶದ ಬದಾಯ ಜಿಲ್ಲೆಯ ಕಕ್ರಾಳ ಗ್ಯಾಂಗ್ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ತನಿಖಾ ತಂಡ ಕಕ್ರಾಳಕ್ಕೆ ಹೋಗಿ 15ಕ್ಕೂ ಹೆಚ್ಚು ಅಂತರ್ ರಾಜ್ಯ ಸಂಶಯಾತ್ಮಕ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು ಆದರೆ ಆರೋಪಿಗಳು ಪತ್ತೆಯಾಗಿರಲಿಲ್ಲ ಎಂದು ಹೇಳಿದರು.
2024ರಲ್ಲಿ ವಿವಿಧ ರಾಜ್ಯಗಳಲ್ಲಿ ನಡೆದ ಬ್ಯಾಂಕ್ ಕಳ್ಳತನ, ದರೋಡೆ ಪ್ರಯತ್ನ ಪ್ರಕರಣವನ್ನು ಪರಿಶೀಲಿಸಲಾಯಿತು.
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಠಾಣೆ ವ್ಯಾಪ್ತಿಯ ಎಸ್‍ಬಿಐ ಬ್ಯಾಂಕ್ ಕಳ್ಳತನ ಪ್ರಯತ್ನ ಪ್ರಕರಣ ಪರಿಶೀಲಿಸಿದಾಗ ನ್ಯಾಮತಿಗೆ 30 ಕಿ.ಮೀ. ಹತ್ತಿರವಿರುವುದು ಮತ್ತು ಬ್ಯಾಂಕ್ ಪ್ರಕರಣಕ್ಕೆ ಸಾಮ್ಯತೆ ಇತ್ತು. ಹೀಗಾಗಿ ತನಿಖಾ ತಂಡ ಮತ್ತೆ ಯುಪಿಯ ಕಕ್ರಾಳ ಗ್ಯಾಂಗ್ ಕಡೆಗೆ ಹೋಯಿತು. ಹೀಗೆ ಆರು ತಿಂಗಳ ಕಾಲ ತನಿಖೆ ಬಳಿಕ
ಸ್ಥಳೀಯರಿಂದಲೇ ಈ ಕೃತ್ಯ ನಡೆದಿದೆ ಎನ್ನುವುದು ಕಂಡು ಬಂದಿದೆ ಎಂದು ಐಜಿಪಿ ರವಿಕಾಂತೇಗೌಡ ಹೇಳಿದರು.
ಈ ಪ್ರಕರಣದ ಆರೋಪಿಗಳ ಪತ್ತೆ ಪೊಲೀಸ್ ಇಲಾಖೆಗೆ ದೊಡ್ಡ ಸಾವಾಲಾಗಿತ್ತು. ಏಕೆಂದರೆ ಒಂದೇ ಒಂದು ಸುಳಿವು ಸಿಗದಂತೆ ಬಹಳ ಚಾಣಾಕ್ಷತನದಿಂದ ಆರೋಪಿಗಳು ಬ್ಯಾಂಕ್ ದರೋಡೆ ಮಾಡಿದ್ದರು. ಕಳ್ಳರು ಒಂದೇ ಒಂದು ಸುಳಿವು ಸಿಗದಂತೆ ಬ್ಯಾಂಕ್ ದರೋಡೆ ಮಾಡಿದ್ದು, ಇಲಾಖೆಗೆ ಇದೊಂದು ವಿಶೇಷ ಪ್ರಕರಣವಾಗಿತ್ತು. ಈ ಪ್ರಕರಣ ಬೇಧಿಸಿದ ಇಡೀ ತಂಡಕ್ಕೆ ಇದೇ ಸಂದರ್ಭದಲ್ಲಿ ಐಜಿಪಿ ರವಿಕಾಂತೇಗೌಡ ಅಭಿನಂದನೆ ಸಲ್ಲಿಸಿದರು.
ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ್ ಸಂತೋಷ್, ಬಿ.ಮಂಜುನಾಥ್, ತನಿಖಾಧಿಕಾರಿಗಳಾದ ಶ್ಯಾಮ್ ವರ್ಗೀಸ್, ಬಿ.ಎಸ್.ಬಸವರಾಜ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
15 ಅಡಿ ನೀರಿನಲ್ಲಿ ಚಿನ್ನ ಬಚ್ಚಿಟ್ಟಿದ್ದ ಖದೀಮರು!
ಬ್ಯಾಂಕ್ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ವಿಜಯಕುಮಾರ್ ಯೂಟ್ಯೂಬ್ ನಲ್ಲಿ ಧಾರವಾಹಿ, ಸಿನಿಮಾ ನೋಡಿಕೊಂಡು ದರೋಡೆಗೆ ತಂತ್ರ ರೂಪಿಸಿದ್ದ. 6 ಜನರ ತಂಡ ದರೋಡೆಗೆ ಮೊದಲೇ ಬ್ಯಾಂಕ್‍ನ ಎಲ್ಲ ಮಾಹಿತಿ ಸಂಗ್ರಹಿಸಿ ದರೋಡೆ ಮಾಡಿದ್ದರು. ಕದ್ದ ಬಂಗಾರವನ್ನು ವಿಜಯಕುಮಾರ್ ಪತ್ಯೇಕವಾಗಿ ತಯಾರಿಸಿದ ಲಾಕರ್ ನಲ್ಲಿಟ್ಟು
ಮಧುರೈನ ತನ್ನ ಗ್ರಾಮದ ತೋಟದ ಮನೆಯ 15 ಅಡಿ ನೀರಿರುವ ಬಾವಿಯೊಳಗೆ ಬಚ್ಚಿಟ್ಟಿದ್ದ.
10 ಪೊಲೀಸರಿಗೆ ಚಿನ್ನದ ಪದಕ:
ಬ್ಯಾಂಕ್ ದರೋಡೆ ಪ್ರಕರಣ ಭೇದಿಸಿದ ಪೊಲೀಸ್ ತಂಡದಲ್ಲಿನ 10 ಪೊಲೀಸರಿಗೆ ಗೃಹ ಸಚಿವರು ಮುಖ್ಯಮಂತ್ರಿಗಳ ಪದಕವನ್ನು ಘೋಷಿಸಿದರು. ಇದಲ್ಲದೆ ತಂಡದಲ್ಲಿದ್ದ ಇತರ ಅಧಿಕಾರಿಗಳಿಗೆ ನಗದು ಬಹುಮಾನ ಘೋಷಿಸಿದರು.
ಅಲ್ಲದೆ ಡಿಜಿ, ಐಜಿಪಿ ಅವರು ಇಡೀ ತಂಡಕ್ಕೆ ನಗದು ಬಹುಮಾನ, ಪ್ರಶಂಸನಾ ಪತ್ರ ನೀಡಿದರು.
ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ್ ಸಂತೋಷ್, ಎಂ.ಮಂಜುನಾಥ್ ಮಾರ್ಗದರ್ಶನದಲ್ಲಿ ಎಎಸ್ಪಿ ಶ್ಯಾಮ್ ವರ್ಗೀಸ್, ಡಿವೈಎಸ್ಪಿ ಬಿ.ಎಸ್.ಮಂಜುನಾಥ್, ಎನ್.ಎಸ್.ರವಿ, ಸುನೀಲ್ ಹುಲ್ಮನಿ, ಲಿಂಗನಗೌಡ, ದೇವಾನಂದ್, ಸುರೇಶ್ ಸಗರಿ, ಮಂಜುನಾಥ ಕುಪ್ಪೆಲೂರು, ಸಂಜೀವ್‍ಕುಮಾರ್, ಸಾಗರ್ ಅತ್ತಾರ್ ವಾಲ್, ರವಿನಾಯ್ಕ್, ಹರೋನ್ ಅಕ್ತರ್, ಮಹದೇವ ಭತ್ತೆ, ಶ್ರೀಪತಿ ಗಿನ್ನಿ, ಗಾಧಿಲಿಂಗಪ್ಪ, ಜಗದೀಶ್, ಅಬ್ದುಲ್ ಖಾದರ್ ಜಿಲಾನಿ, ಜೋವಿತ್ ರಾಜ್, ಜಯ್ಯಪ್ಪ ನಾಯ್ಕ್, ಮಜೀದ್, ರಾಘವೇಂದ್ರ, ಆಂಜನೇಯ, ಬಾಲಾಜಿ, ರಮೇಶ್ ನಾಯ್ಕ್, ಶಿವರಾಜ್, ಮಲ್ಲಿಕಾರ್ಜುನ್, ಶಿವರಾಜ್, ಆನಂದ, ಮಾರುತಿ, ಸತೀಶ್, ಮಹೇಶ್ ನಾಯ್ಕ್, ವೀರಭದ್ರಪ್ಪ, ರುದ್ರೇಶ್, ಇಬ್ರಾಹಿಂ, ಅಣ್ಣಪ್ಪ, ಯೂಸುಫ್, ರವಿ, ಸಿದ್ದೇಶ್, ಯೋಗೀಶ್, ಗಿರೀಶ್, ಶಾಂತರಾಜ್, ರಾಮಚಂದ್ರ ಬಿ.ಜಾಧವ್, ಕೆ.ಕೆ.ರಾಘವೇಂದ್ರ, ಎಚ್.ವಿ.ಅರುಣ್‍ಕುಮಾರ್, ಎಂ.ಎಚ್.ಪ್ರಶಾತ್‍ಕುಮಾರ್, ಮಲ್ಲೇಶ್, ದೇವರಾಜ್, ರಾಘು, ಚನ್ನೇಶ್, ಅಸ್ಗರ್ ತಂಡದಲ್ಲಿದ್ದರು.