ಡಿಸಿಎಂ ವಿಚಾರ | ಮಾಧ್ಯಮಗಳ ಮುಂದೆ ಮಾತನಾಡುವವರು, ಹೈಕಮಾಂಡ್ ಬಳಿ ಮಾತನಾಡಲಿ : ಡಿಕೆಶಿ

Update: 2024-06-27 10:30 GMT

ಬೆಂಗಳೂರು : “ಹೆಚ್ಚುವರಿ ಡಿಸಿಎಂ ವಿಚಾರವಾಗಿ ಮಾಧ್ಯಮಗಳ ಮುಂದೆ ಮಾತನಾಡುತ್ತಿರುವವರು, ಹೈಕಮಾಂಡ್ ನಾಯಕರ ಬಳಿ ಹೋಗಿ ಮಾತನಾಡಲಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

ಹೆಚ್ಚುವರಿ ಡಿಸಿಎಂ ಚರ್ಚೆ ಬಗ್ಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತನಾಡುತ್ತೀರಾ ಎಂದು ಕೇಳಿದಾಗ, “ಮಾಧ್ಯಮಗಳು ಪ್ರಚಾರ ಮಾಡುತ್ತವೇ ಹೊರತು, ಪರಿಹಾರ ನೀಡುವುದಿಲ್ಲ. ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ನಾನು ಕೂಡ ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ. ಯಾರು ಬೇಕಾದರೂ ಹೈಕಮಾಂಡ್ ನಾಯಕರ ಬಳಿ ಹೋಗಿ ಪರಿಹಾರ ಹುಡುಕಿಕೊಂಡು ಬರಲಿ” ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ರಾಜಣ್ಣ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸದ ಅವರು “ಬಹಳ ಸಂತೋಷ. ಸಮಯ ವ್ಯರ್ಥ ಮಾಡಬಾರದು. ಅವರಿಗೆ ಪರಿಹಾರ ಕಂಡುಕೊಳ್ಳಲು ಎಲ್ಲಿ ಹೋಗಬೇಕೋ ಅಲ್ಲಿ ಹೋಗಲಿ. ಆರೋಗ್ಯ ಸರಿಯಿಲ್ಲ ಎಂದು ವೈದ್ಯರ ಬಳಿ ಹೋದರೆ ಔಷಧಿ ನೀಡುತ್ತಾರೆ. ಅದೇ ರೀತಿ ಅವರು ಎಲ್ಲಾದರೂ ಪರಿಹಾರವನ್ನು ಹುಡುಕಿಕೊಂಡು ಹೋಗಲಿ” ಎಂದು ತಿಳಿಸಿದರು.

ಕೆಂಪೇಗೌಡ ಜಯಂತಿ ವಿಜೃಂಭಣೆಯಿಂದ ಆಚರಿಸಲು ಹೆಚ್ಚಿನ ಅನುದಾನ :

ರಾಜ್ಯ ಎಲ್ಲೆಡೆ ಕೆಂಪೇಗೌಡರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಕನ್ನಡ ಮತ್ತು ಸಂಸ್ಕತಿ ಇಲಾಖೆಯಿಂದ ನೀಡುವ 25 ಸಾವಿರದ ಜತೆಗೆ ಬಿಬಿಎಂಪಿಯಿಂದ 1 ಲಕ್ಷ ಅನುದಾನ ನೀಡಲಾಗುವುದು. ಕೆಂಪೇಗೌಡರು ಎಲ್ಲರ ಆಸ್ತಿ. ಒಂದು ಜಾತಿ ಹಾಗೂ ಧರ್ಮಕ್ಕೆ ಸೇರಿದವರಲ್ಲ. ಇವರ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲು ನಮ್ಮ ಸರಕಾರ ಮುಂದಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News