ರಾಹುಲ್ ಗಾಂಧಿ ವಿರುದ್ಧ ಅವಹೇಳನಾಕಾರಿ ಪೋಸ್ಟ್: ಕರ್ನಾಟಕ ಬಿಜೆಪಿ ಐಟಿ ಸೆಲ್ ವಿರುದ್ಧ ಎಫ್‌ಐಆರ್

ರಾಹುಲ್ ಗಾಂಧಿ
ಬೆಂಗಳೂರು : ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದಡಿ ರಾಜ್ಯ ಬಿಜೆಪಿ ಐಟಿ ಸೆಲ್ ವಿರುದ್ಧ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸಿ.ಎಂ.ಧನಂಜಯ್ ಅವರು ನೀಡಿದ ದೂರಿನನ್ವಯ ರಾಜ್ಯ ಬಿಜೆಪಿ ಐಟಿ ಸೆಲ್ ವಿರುದ್ಧ ಹೈಗ್ರೌಂಡ್ಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿರುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶಗಳಿಗೆ ಹೋದಾಗಲೆಲ್ಲಾ ಕಾಶ್ಮೀರದಲ್ಲಿ ಒಂದಲ್ಲಾ ಒಂದು ದಾಳಿ ನಡೆಯುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಬಿಜೆಪಿ ಐಟಿ ಸೆಲ್ ಪೋಸ್ಟ್ ಮಾಡಿರುವುದಾಗಿ ದೂರುದಾರ ಆರೋಪಿಸಿದ್ದಾರೆ.
ಈ ಪೋಸ್ಟ್ ಶಾಂತಿ, ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ರೀತಿಯಿದೆ. ಇದೊಂದು ಪ್ರಚೋದನಕಾರಿ ಪೋಸ್ಟ್ ಆಗಿದ್ದು, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಹರಡಿ ಅವರ ಘನತೆಗೆ ಧಕ್ಕೆ ತರಲು ಯತ್ನ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಐಟಿ ಸೆಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.