108 ಆಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ವೇತನ ಬಾಕಿ ಉಳಿಸಿಕೊಂಡಿಲ್ಲ : ದಿನೇಶ್ ಗುಂಡೂರಾವ್

Update: 2024-11-14 15:32 GMT

ದಿನೇಶ್ ಗುಂಡೂರಾವ್

ಬೆಂಗಳೂರು : 108 ಆರೋಗ್ಯ ಕವಚದ ಆಂಬ್ಯುಲೆನ್ಸ್ ಚಾಲಕರಿಗೆ ಸರಕಾರದ ಕಡೆಯಿಂದ ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಆಂಬ್ಯುಲೆನ್ಸ್ ಚಾಲಕರಿಗೆ ನ್ಯಾಯಯುತವಾಗಿ ಸಿಗಬೇಕಾದ ವೇತನವನ್ನು ಕಾಲ ಕಾಲಕ್ಕೆ ಸರಿಯಾಗಿ ಸಂಬಂಧಿಸಿದ ಏಜೆನ್ಸಿಯವರಿಗೆ ಸರಕಾರ ನೀಡುತ್ತಾ ಬಂದಿದೆ ಎಂದರು.

ಚಾಲಕರ ವೇತನ ಬಾಕಿ ಉಳಿಸಿಕೊಳ್ಳದಂತೆ ಇ.ಎಂ.ಆರ್ ಏಜೆನ್ಸಿಯವರಿಗೂ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ. ಆಗಸ್ಟ್, ಸೆಪ್ಟೆಂಬರ್ ತಿಂಗಳ ವೇತನವನ್ನು ಏಜೆನ್ಸಿಯವರು ಚಾಲಕರಿಗೆ ಪಾವತಿ ಮಾಡಿದ್ದಾರೆ. ಅಕ್ಟೋಬರ್ ತಿಂಗಳ ವೇತನ ಪಾವತಿ ಪ್ರಗತಿಯಲ್ಲಿದ್ದು ಶೀಘ್ರದಲ್ಲಿ ಪಾವತಿಸುವಂತೆ ಸೂಚಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

ವಿಪಕ್ಷ ನಾಯಕ ಆರ್.ಅಶೋಕ್ ಅರೆಬರೆ ಮಾಹಿತಿ ಪಡೆದು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಒಬ್ಬ ವಿಪಕ್ಷ ನಾಯಕರಾಗಿ ವಾಸ್ತವಾಂಶಗಳನ್ನು ಅರಿತು ಮಾತನಾಡಬೇಕು. 108 ಸಮಸ್ಯೆ ಆರಂಭವಾಗಿದ್ದೆ ಬಿಜೆಪಿ ಸರಕಾರದ ಅವಧಿಯಲ್ಲಿ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಏಜೆನ್ಸಿ ಹಾಗೂ ಚಾಲಕರ ನಡುವಿನ ಸಮಸ್ಯೆಯನ್ನು ಇಲಾಖೆ ಮಧ್ಯಸ್ಥಿಕೆ ವಹಿಸಿ ಸರಿಪಡಿಸುತ್ತಿದೆ ಎಂದು ಅವರು ತಿರುಗೇಟು ನೀಡಿದರು.

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ 108 ವ್ಯವಸ್ಥೆಯಲ್ಲಿ ಒಂದಿಷ್ಟು ಲೋಪದೋಷಗಳು ಆಗಿರುವುದು ನಿಜ. 108 ಸಿಬ್ಬಂದಿಗಳಿಗೆ ಕನಿಷ್ಠ ವೇತನ ಜಾರಿಗೊಳಿಸಿದ್ದಲ್ಲದೇ ಸರಕಾರದ ಅನುಮತಿ ಇಲ್ಲದೇ ನಿಯಮಬಾಹಿರವಾಗಿ ಶೇ.45ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು ಎಂದು ದಿನೇಶ್ ಗೂಂಡೂರಾವ್ ದೂರಿದರು.

ಇದೀಗ 108 ಸಿಬ್ಬಂದಿಗಳು ಶೇ.45ರಷ್ಟು ವೇತನ ಹೆಚ್ಚಳ ಮಾಡಿರುವುದನ್ನು ಕಡಿತಗೊಳಿಸದಂತೆ ಬೇಡಿಕೆ ಇಡುತ್ತಿದ್ದಾರೆ. ನಮ್ಮ ಸರಕಾರ ನಿಯಮಾನುಸಾರ ಕನಿಷ್ಠ ವೇತನ ನೀಡಲು ಬದ್ಧವಾಗಿದ್ದು, ಅದರಂತೆ ಅನುದಾನವನ್ನು ನೀಡುತ್ತಾ ಬಂದಿದೆ ಎಂದು ಅವರು ಹೇಳಿದರು.

ಪ್ರತಿಯೊಬ್ಬ ಆಂಬ್ಯುಲೆನ್ಸ್ ಚಾಲಕರಿಗೆ 35 ಸಾವಿರಕ್ಕೂ ಹೆಚ್ವು ವೇತನ ದೊರೆಯುತ್ತಿದೆ. ಇದರ ಮೇಲೂ ಮೂಲ ವೇತನದಲ್ಲಿ ಶೇ.45ರಷ್ಟು ಹೆಚ್ಚಳ ಮಾಡುವ ಬಗ್ಗೆ ಸಿಬ್ಬಂದಿಗಳು ಬೇಡಿಕೆ ಇಟ್ಟಿದ್ದು, ನಿಯಮಬಾಹಿರವಾಗಿ ಈ ಕ್ರಮ ಕೈಗೊಳ್ಳಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಹಣಕಾಸಿನ ತೊಂದರೆ ಇಲ್ಲ:

2024-25ನೇ ಸಾಲಿನಲ್ಲಿ 108-ಆರೋಗ್ಯ ಕವಚ ಯೋಜನೆಗೆ ಆರ್ಥಿಕ ಇಲಾಖೆಯಿಂದ ಆರೋಗ್ಯ ಇಲಾಖೆಗೆ 260.33 ಕೋಟಿ ರೂ.ಗಳ ಅನುದಾನವನ್ನು ಆಯವ್ಯಯದಲ್ಲಿ ಅನುಮೋದನೆಯಾಗಿದೆ. ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ವಾರ್ಷಿಕ 162.40 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಆರೋಗ್ಯ ಇಲಾಖೆ ಹಾಗೂ ಇ.ಎಂ.ಆರ್.ಐ ಗ್ರೀನ್ ಹೆಲ್ತ್ ಸಂಸ್ಥೆಯವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ಪ್ರತಿ ತ್ರೈಮಾಸಿಕಕ್ಕೆ 40.60 ಕೋಟಿ ರೂ.ಗಳಂತೆ ವಾರ್ಷಿಕ 162.40 ಕೋಟಿ ರೂ.ಗಳ ಅನುದಾನವನ್ನು ಕಾಲ ಕಾಲಕ್ಕೆ ಬಿಡುಗಡೆಗೊಳಿಸಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಈ ಬಗ್ಗೆ 108 ಸಿಬ್ಬಂದಿಗಳನ್ನು ಕರೆದು ಚರ್ಚಿಸಿ ಮನವರಿಕೆ ಮಾಡಿಕೊಡಲಾಗಿದೆ. ನ್ಯಾಯಯುತ ಕನಿಷ್ಢ ವೇತನ ಸರಕಾರ ನೀಡುತ್ತಿದ್ದು, ಸರಕಾರದಲ್ಲಿ ಯಾವುದೇ ಹಣಕಾಸಿನ ಕೊರತೆಯಿಲ್ಲ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

ಹಿಂದಿನ ಸರಕಾರದ ಅವಧಿಯಲ್ಲಿ ವ್ಯವಸ್ಥೆಯಲ್ಲಾದ ಲೋಪವನ್ನು ನಮ್ಮ ಸರಕಾರ ಸರಿಪಡಿಸುತ್ತಿದೆ. ಟೆಂಡರ್ ಗಳನ್ನು ಕರೆಯದೇ ಜಿವಿಕೆ ಇಎಂಆರ್ ಸಂಸ್ಥೆಯೊಂದಿಗೆ ಒಡಂಬಡಿಕೆಯ ಮೂಲಕವೇ 108 ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಬರಲಾಗಿದೆ. ನಮ್ಮ ಸರಕಾರ ಬಂದ ಬಳಿಕ ನಿಯಮಾನುಸಾರ ಟೆಂಡರ್ ಕರೆಯಲು ಕ್ರಮ ಕೈಗೊಳ್ಳುತ್ತಿದೆ. ವ್ಯವಸ್ಥೆಯಲ್ಲಾದ ಲೋಪಗಳನ್ನು ಸರಿಪಡಿಸುತ್ತಿರುವಾಗ ಸಿಬ್ಬಂದಿಗಳು ಸಹಕರಿಸಬೇಕು ಎಂದು ದಿನೇಶ್ ಗುಂಡೂರಾವ್ ಇದೇ ವೇಳೆ ಮನವಿ ಮಾಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News