ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅನರ್ಹತೆ: ಹೈಕೋರ್ಟ್ ನ ಆದೇಶ ಓದದೆ ಪ್ರತಿಕ್ರಿಯಿಸುವುದಿಲ್ಲ: ಹೆಚ್.ಡಿ ದೇವೇಗೌಡ
ಹಾಸನ: ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನ ಅನರ್ಹತೆ ಕುರಿತು ಹೈಕೋರ್ಟ್ ಆದೇಶದ ಪ್ರತಿ ನನಗಿನ್ನೂ ಸಿಕ್ಕಿಲ್ಲ. ಅದನ್ನು ನೋಡದೇ ಕಾಮೆಂಟ್ ಮಾಡಲು ಹೋಗಲ್ಲ ಎಂದು ಮಾಜಿ ಪ್ರಧಾನಿ ಹೆಚ್ .ಡಿ.ದೇವೇಗೌಡರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಸದಸ್ಯತ್ವ ಅಸಿಂಧು ಎಂದು ತೀರ್ಪು ಬಂದಿದೆ. ಆದೇಶ ಓದದೆ ಮಾಜಿ ಪ್ರಧಾನಿಯಾಗಿ ರಿಯಾಕ್ಟ್ ಮಾಡುವುದು ಸಮಂಜಸವಲ್ಲ. ಸುಪ್ರೀಂಕೋರ್ಟ್ ಮೊರೆ ಹೋಗಿ ತಡೆ ತರುವ ಪ್ರಕ್ರಿಯೆ ಸ್ವಾಭಾವಿಕವಾಗಿ ನಡೆಯಲಿದೆ. ಅಲ್ಲಿ ಏನಾಗಲಿದೆ ಎಂದು ನಾನು ಹೇಳಬಾರದು ಎಂದರು.
ನನಗೆ 93 ವರ್ಷ ತುಂಬಿದೆ. ಪಕ್ಷದ ಕೆಲಸಕ್ಕಾಗಿ ಶಕ್ತಿ ಇರುವುಷ್ಟು ಹೋರಾಟ ಮಾಡುತ್ತೇನೆ. ಕಾವೇರಿ ವಿಚಾರದಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ನೀರಾವರಿ ಮಂತ್ರಿಗಳು ಒಂದೊಂದು ಸಾರಿ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ ಎಂದರು.
ಬಿಜೆಪಿ, ಕಾಂಗ್ರೆಸ್ ಪಕ್ಷಗಳು ರಾಜ್ಯದ ಹಿತ ಕಾಪಾಡಬೇಕು. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡುತ್ತಿವೆ. ಅವರಿಂದ ನಾವು ಕಲಿಯಬೇಕು. ಮಾಧ್ಯದವರೂ ಸಹ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.