ಅಪಘಾತದಲ್ಲಿ ಮೃತಪಟ್ಟ ಕೆಎಸ್ಸಾರ್ಟಿಸಿ ಸಿಬ್ಬಂದಿಗಳ ಕುಟುಂಬಕ್ಕೆ 1ಕೋಟಿ ರೂ.ಪರಿಹಾರ ಮೊತ್ತ ವಿತರಣೆ

Update: 2024-01-01 16:48 GMT

ಬೆಂಗಳೂರು: ‘ಮೃತರನ್ನು ಕಳೆದುಕೊಂಡು ಕುಟುಂಬದವರಿಗೆ ಯಾವ ರೀತಿಯಿಂದಲೂ ನಷ್ಟ ಭರಿಸಲು ಸಾಧ್ಯವಿಲ್ಲ. ಆದರೆ ಆರ್ಥಿಕವಾಗಿ ಅವರಿಗೆ ಶಕ್ತಿ ಮತ್ತು ಭದ್ರತೆಯನ್ನು ಒದಗಿಸುವ ಜವಾಬ್ದಾರಿಯನ್ನು ನಾವು ಮಾಡುತ್ತಿದ್ದೇವೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿರುವ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಅಪಘಾತದಿಂದ ಮೃತಪಟ್ಟ ಕೆಎಸ್ಸಾರ್ಟಿಸಿಯ ಸಿಬ್ಬಂದಿಗಳ ಅವಲಂಬಿತ ಕುಟುಂಬಗಳಿಗೆ 1 ಕೋಟಿ ರೂ.ಪರಿಹಾರ ಮೊತ್ತವನ್ನು ವಿತರಿಸಿ ಮಾತನಾಡಿದ ಅವರು, ‘ಈ ಹಿಂದೆ ಅಪಘಾತ ಸೇರಿದಂತೆ ಇತರ ಕಾರಣಗಳಿಂದ ಮೃತಪಟ್ಟ ಸಿಬ್ಬಂದಿಗಳ ಕುಟುಂಬದವರಿಗೆ 3ಲಕ್ಷ ರೂ.ಗಳನ್ನು ಮಾತ್ರ ನೀಡಲಾಗುತ್ತಿತ್ತು. ಈಗ ಪರಿಹಾರ ಮೊತ್ತವನ್ನು ಒಂದು ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದರು.

ಒಂದು ವರ್ಷದಲ್ಲಿ ಅಪಘಾತದಿಂದ ಮೃತಪಟ್ಟಿದ್ದ ಕೆಎಸ್ಸಾರ್ಟಿಸಿಯ ಒಟ್ಟು 12 ಸಿಬ್ಬಂದಿಗಳ ಅವಲಂಬಿತರಿಗೆ ತಲಾ 1ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ಪಾವತಿಸಲಾಗಿದೆ. ಇದರಲ್ಲಿ ಇಂದು 3 ಸಿಬ್ಬಂದಿಗಳ ಅವಲಂಬಿತ ಕುಟುಂಬಕ್ಕೆ ತಲಾ 1ಕೋಟಿ ರೂ.ನಂತೆ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಸಾರಿಗೆ ಸುರಕ್ಷಾ ಅಪಘಾತ ವಿಮಾ ಪರಿಹಾರ ಯೋಜನೆ ಅಡಿಯಲ್ಲಿ ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟ ನೌಕರರ ನಾಮನಿರ್ದೇಶಿತರಿಗೆ ಒಟ್ಟು 1 ಕೋಟಿ ರೂ.ಗಳ ಅಪಘಾತ ವಿಮಾ ಮೊತ್ತವನ್ನು ನೀಡಲಾಗುತ್ತದೆ. ಈ ಹಣದಿಂದ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆಗೆ ಯಾರನ್ನು ಅವಲಂಬಿಸದೆ ಬದುಕು ನಡೆಸಬಹುದಾಗಿದೆ ಎಂದು ಅವರು ಹೇಳಿದರು.

ಇದೇ ವೇಳೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಸೇರಿದಂತೆ ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಗಳ ಕುಟುಂಬ ವರ್ಗ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News