ಕೇವಲ ಮುಸ್ಲಿಮರಿಗೆ ಮಾತ್ರ ಮೀಸಲಾತಿ ಎಂದು ಹೇಳಿದವರು ಯಾರು?: ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಬೆಂಗಳೂರು: ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಎಂದು ಹೇಳಿದವರು ಯಾರು?. ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರಿಗೆ ನೀಡಲು ಸರಕಾರ ನಿರ್ಧಾರ ಮಾಡಿದೆ. ಅಲ್ಪಸಂಖ್ಯಾತರು ಎಂದರೆ ಕ್ರಿಶ್ಚಿಯನ್, ಜೈನ, ಪಾರ್ಸಿ, ಸಿಖ್ ಹೀಗೆ ಎಲ್ಲರೂ ಸೇರುತ್ತಾರೆ. ಈ ಹಿಂದೆ ಪರಿಶಿಷ್ಟ ಜಾತಿ, ಪಂಗಡವರಿಗೆ ಗುತ್ತಿಗೆ ಮೀಸಲಾತಿ ನೀಡುವಂತೆ ತಿದ್ದುಪಡಿ ಮಾಡಿದ್ದೆವು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ.4 ರಷ್ಟು ಮೀಸಲಾತಿ ನೀಡಲು ಮಾಡಿರುವ ತೀರ್ಮಾನದ ಕುರಿತು ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.
ಕೇವಲ 2 ಕೋಟಿ ರೂ. ಮೊತ್ತಕ್ಕೆ ಮಾತ್ರ ಒಪ್ಪಿಗೆ ನೀಡಲಾಗಿದೆ. ಇದಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ನಾವು ಬೇರೆ ಯಾರ ಹಕ್ಕನ್ನು ಇಲ್ಲಿ ಕಸಿದುಕೊಳ್ಳುಲ್ಲ, ಅವರಿಗೂ ನಾವು ಬದುಕು ಕೊಡಬೇಕಲ್ಲವೇ? ಎಂದು ಅವರು ಹೇಳಿದರು.
ಬಿಜೆಪಿಯು ಗುತ್ತಿಗೆ ಮೀಸಲಾತಿಯನ್ನು ಮತ ಬ್ಯಾಂಕ್ ರಾಜಕಾರಣ ಎನ್ನುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಬಿಜೆಪಿಯವರು ನಮ್ಮನ್ನು ನೆನಪಿಸಿಕೊಳ್ಳುತ್ತಾ ಇರಬೇಕು. ಆಗಲೇ ನಾವು ಗಟ್ಟಿಯಾಗುವುದು ಎಂದರು.
ಬೆಂಗಳೂರಿನ ಕಸ ವಿಲೇವಾರಿ ವಿಚಾರದಲ್ಲಿ ಯಾವ ಶಾಸಕರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲಿ ಕಸ ನಿಂತಿದೆಯೋ ಅಲ್ಲಿಗೆ ಹೋಗಿ ನೀವೆ (ಮಾಧ್ಯಮದವರು) ನೋಡಿ ಗೊತ್ತಾಗುತ್ತದೆ ಎಂದು ಹೇಳಿದರು.
ಬಿಬಿಎಂಪಿ ಚುನಾವಣೆಗೆ ಸರಕಾರ ತಯಾರಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತವಾಗಿ ತಯಾರಿದೆ. ಎಷ್ಟು ದಿನ ನಾವು ತಪ್ಪಿಸಿಕೊಂಡು ಇರಲು ಸಾಧ್ಯ ಎಂದರು.
ಮಾ.22 ರಂದು ತಮಿಳುನಾಡಿಗೆ ಪ್ರಯಾಣ: ತಮಿಳುನಾಡು ಮುಖ್ಯಮಂತ್ರಿ ಆಯೋಜಿಸಿರುವ ಕ್ಷೇತ್ರ ಪುನರ್ ವಿಂಗಡಣೆ ವಿರೋಧಿ ಸಭೆಯಲ್ಲಿ ಭಾಗವಹಿಸುವಿರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಹಾಗೂ ಮುಖ್ಯಮಂತ್ರಿಗೆ ತಮಿಳುನಾಡಿನ ಮುಖ್ಯಮಂತ್ರಿ ಆಹ್ವಾನ ನೀಡಿದ್ದರು. ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.22 ರಂದು ತಮಿಳುನಾಡಿನಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸುವಂತೆ ನನಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿಗೆ ಮೊಣಕಾಲಿನ ನೋವು ಇರುವ ಕಾರಣಕ್ಕೆ ವೈದ್ಯರ ಸಲಹೆಯ ಮೇರೆಗೆ ಅವರು ಬರುತ್ತಿಲ್ಲ. ಪಕ್ಷ ಹಾಗೂ ಸರಕಾರದ ವತಿಯಿಂದ ನಾನು ಸಭೆಯಲ್ಲಿ ಭಾಗವಹಿಸುವೆ. ಕ್ಷೇತ್ರ ಪುನರ್ ವಿಂಗಡಣೆ ವಿಚಾರದಲ್ಲಿ ಪಕ್ಷದ ನಿಲುವನ್ನು ಹೈಕಮಾಂಡ್ ಜೊತೆ ಚರ್ಚಿಸಿ ತಿಳಿಸುವೆ ಎಂದು ಶಿವಕುಮಾರ್ ತಿಳಿಸಿದರು.