ಕೇಂದ್ರ ಸರ್ಕಾರದ ಬೆಲೆ ಏರಿಕೆ, ರಾಜ್ಯ ಬಿಜೆಪಿಯ ದ್ವಂದ್ವ ನಿಲುವಿನ ವಿರುದ್ಧ ಎ.17ರಂದು ಪ್ರತಿಭಟನೆ : ಡಿ.ಕೆ.ಶಿವಕುಮಾರ್

Update: 2025-04-10 19:30 IST
PHOTO OF DK Shivakumar

ಡಿ.ಕೆ.ಶಿವಕುಮಾರ್

  • whatsapp icon

ಬೆಂಗಳೂರು : ಕೇಂದ್ರದ ಬಿಜೆಪಿ ಸರಕಾರವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದನ್ನು ರಾಜ್ಯ ಬಿಜೆಪಿಯು ಖಂಡಿಸದೆ, ರಾಜ್ಯದ ಬಡವರಿಗೆ ಗ್ಯಾರೆಂಟಿ ಯೋಜನೆಗಳನ್ನು ನೀಡಿರುವ ರಾಜ್ಯ ಸರಕಾರದ ವಿರುದ್ಧ ‘ಜನಾಕ್ರೋಶ ಯಾತ್ರೆ’ ಮಾಡುತ್ತಿದೆ. ಹೀಗಾಗಿ ಕೇಂದ್ರದ ಬೆಲೆ ಏರಿಕೆ ಹಾಗೂ ರಾಜ್ಯ ಬಿಜೆಪಿಯ ದ್ವಂದ್ವ ನಿಲುವಿನ ವಿರುದ್ಧ ಎ.17ರಂದು ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಈ ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಭಾಗವಹಿಸಲಿದ್ದಾರೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಹೋರಾಟದ ಸ್ವರೂಪವನ್ನು ಶೀಘ್ರ ತಿಳಿಸಲಾಗುತ್ತದೆ ಎಂದು ಹೇಳಿದರು.

ಬಿಜೆಪಿಯವರು ಯಾತ್ರೆ ಹೊರಟ ದಿನವೇ ಕೇಂದ್ರ ಬಿಜೆಪಿ ಸರಕಾರ ಪೆಟ್ರೋಲ್, ಡೀಸೆಲ್‍ಗೆ ತಲಾ 2 ರೂಪಾಯಿ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂಪಾಯಿ ಹೆಚ್ಚಳ ಮಾಡಿದೆ. ಈ ಮೂಲಕ ರಾಜ್ಯ ಬಿಜೆಪಿಯ ಯಾತ್ರೆಗೆ ಉಡುಗೊರೆ ಕಳಿಸಿದ್ದಾರೆ. ಇದರ ಬಗ್ಗೆ ಜನಸಾಮಾನ್ಯರು ಮಾಡುತ್ತಿರುವ ಗುಣಗಾನವನ್ನು ರಾಜ್ಯ ಬಿಜೆಪಿ ನಾಯಕರು ಕೇಳಬೇಕು ಎಂದು ಅವರು ತಿಳಿಸಿದ್ದಾರೆ.

ಬಿಜೆಪಿಯು ರಾಜ್ಯದಲ್ಲಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಮಾಡುತ್ತಿರುವ ಯಾತ್ರೆಯಾಗಿದೆ. ಕೇಂದ್ರ ಸರಕಾರದ ವಿರುದ್ಧ ಮಾಡುತ್ತಿರುವ ಜನಾಕ್ರೋಶ ಯಾತ್ರೆ ಎಂದು ಬಿಜೆಪಿಯವರು ಬೋರ್ಡ್ ಹಾಕಿಕೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಕೇವಲ ರಾಜ್ಯ ಸರಕಾರ ಏರಿಸಿದ ಹಾಲಿನ ದರ ಮಾತ್ರ ಕಣ್ಣಿಗೆ ಕಾಣುತ್ತಿದೆಯೇ ಎಂದು ಪ್ರಶ್ನಿಸಿದರು.

ಬುಧವಾರದಂದು ಕಚ್ಚಾ ತೈಲದ ಬೆಲೆ ಶೇ.4.23ರಷ್ಟು ಇಳಿಕೆಯಾಗಿದೆ. ಆದರೂ ಕೇಂದ್ರ ಸರಕಾರ ಬೆಲೆ ಇಳಿಕೆ ಮಾಡಿಲ್ಲ. ಪೆಟ್ರೋಲ್‍ನ ಮೂಲ ದರ ಪ್ರತಿ ಲೀಟರ್‍ಗೆ 42.60 ಪೈಸೆ ಇದೆ. ದೇಶದಾದ್ಯಂತ ಪ್ರತಿ ಲೀಟರ್ ಪೆಟ್ರೋಲ್ 103 ರೂಪಾಯಿಗೆ ಮಾರಾಟ ಮಾಡಲಾಗುತ್ತಿದ್ದು, ಒಂದು ಲೀಟರ್‍ಗೆ 60 ರೂಪಾಯಿ ಲಾಭ ಸರಕಾರಕ್ಕೆ ಸಿಗುತ್ತಿದೆ. ಡೀಸಲ್ ಬೆಲೆ ಪ್ರತಿ ಲೀಟರ್‍ಗೆ 91 ರೂಪಾಯಿ ಇದ್ದು, 43 ರೂ. ಲಾಭ ಪಡೆಯುತ್ತಿದ್ದಾರೆ. ಶೇ.60ರಷ್ಟು ತೆರಿಗೆ ಪೆಟ್ರೋಲ್, ಡೀಸೆಲ್ ಮೇಲೆ ಹಾಕಿದ್ದಾರೆ ಎಂದು ಅವರು ತಿಳಿಸಿದರು.

ನಮ್ಮ ಸರಕಾರ ರೈತರ ಬದುಕನ್ನು ಉಳಿಸಲು ಹಾಲಿನ ದರ ಏರಿಕೆ ಮಾಡಿದ್ದೇವೆ. ಶಾಸಕ ವಿನಯ್ ಕುಲಕರ್ಣಿ ಪಶುಸಂಗೋಪನೆ ಮಾಡುತ್ತಿದ್ದಾರೆ. ಎಷ್ಟು ಖರ್ಚು ವೆಚ್ಚಗಳು ಹೆಚ್ಚಾಗಿವೆ ಎಂದು ಅವರನ್ನೇ ಕೇಳಬೇಕು. ಬಿಜೆಪಿಯವರು ಜಾನುವಾರುಗಳ ಬೂಸಾ, ಹಿಂಡಿ ಬೆಲೆಯನ್ನು ಏಕೆ ಕಡಿಮೆ ಮಾಡಿಸಲಿಲ್ಲ ಎಂದು ಅವರು ಪ್ರಶ್ನಿಸಿದರು.

ಅತ್ಯಂತ ಕಡಿಮೆ ಪ್ರಮಾಣದಲ್ಲಿ ನೀರಿನ ಬೆಲೆಯನ್ನು ಏರಿಕೆ ಮಾಡಿದ್ದೇವೆ. ಕಸ ಸಂಗ್ರಹಣೆ ಶುಲ್ಕವನ್ನು ಈ ಹಿಂದಿನ ಬಿಜೆಪಿ ಸರಕಾರ ನಿಗದಿ ಮಾಡಿದ್ದಕ್ಕಿಂತ ಕಡಿಮೆ ನಿಗದಿ ಮಾಡಿ ಬಡವರ ಪರವಾಗಿ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನರ ಬದುಕು ಹಸನಾಗಲಿ ಎಂದು ಗ್ಯಾರಂಟಿ ಯೋಜನೆ ಮೂಲಕ 52 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ ಎಂದು ಅವರು ತಿಳಿಸಿದರು.

ಕೇಂದ್ರದಲ್ಲಿ ಯುಪಿಎ ಸರಕಾರ ಇದ್ದಾಗ ಚಿನ್ನದ ಬೆಲೆ 28 ಸಾವಿರ ರೂ.ಇತ್ತು ಈಗ 92 ಸಾವಿರ ರೂ.ಆಗಿದೆ. 10 ಸಾವಿರ ರೂ.ಇದ್ದ ಮೊಬೈಲ್ ದರ 30 ಸಾವಿರ ರೂ.ಗೆ ಏರಿಕೆಯಾಗಿದೆ. 13 ಸಾವಿರ ರೂ.ಇದ್ದ 32 ಇಂಚಿನ ಟಿವಿ 36 ಸಾವಿರ ರೂ.ಆಗಿದೆ. ಎಸಿ ಬೆಲೆ 25 ಸಾವಿರ ರೂ.ನಿಂದ 44 ಸಾವಿರ ರೂ.ಗೆ ಏರಿಕೆಯಾಗಿದೆ. ಫ್ರಿಡ್ಜ್ ಬೆಲೆ 10 ಸಾವಿರ ರೂ.ನಿಂದ 25 ಸಾವಿರ ರೂ.ಗೆ ಹೆಚ್ಚಾಗಿದೆ. 59 ರೂ.ಗಳಿದ್ದ ಡಾಲರ್ ಬೆಲೆ ಈಗ 89 ರೂ.ಗಳಾಗಿದೆ. ಸಿಮೆಂಟ್ ಬೆಲೆ 268 ರೂ. ಇದ್ದಿದ್ದು ಈಗ 410 ರೂ.ಗೆ ಹೆಚ್ಚಳವಾಗಿದೆ. ಈ ಬೆಲೆಯನ್ನೆಲ್ಲಾ ಯಾರೂ ನಿಯಂತ್ರಣ ಮಾಡುವವರು ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಕಬ್ಬಿಣದ ಬೆಲೆ 16 ಸಾವಿರ ರೂ., ಕಾರಿನ ಬೆಲೆಗಳಲ್ಲಿ ಊಹೆಗೂ ನಿಲುಕದ ಜಿಗತವಾಗಿದೆ. 1.5 ಲಕ್ಷ ರೂ.ಗೆ ಸಿಗುತ್ತಿದ್ದ ಮಿನಿ ಟ್ರಾಕ್ಟರ್ ಬೆಲೆ 5 ಲಕ್ಷ ರೂ.ಗೆ ಏರಿಕೆಯಾಗಿದೆ. ಫಾರ್ಚೂನರ್ ಕಾರಿನ ಬೆಲೆ 25 ಲಕ್ಷ ರೂ.ನಿಂದ 45 ಲಕ್ಷ ರೂ.ಗೆ ಏರಿಕೆಯಾಗಿದೆ. 80 ರೂ. ಇದ್ದ ಹೆದ್ದಾರಿ ಟೋಲ್ ಬೆಲೆ 250 ರೂ.ಗೆ ಹೆಚ್ಚಾಗಿದೆ. ಇದೆಲ್ಲವು ಅಶೋಕ್ ಅವರಿಗೆ ಕಾಣಿಸುತ್ತಿಲ್ಲವೇ? ಬ್ಯಾಂಕ್‍ಗಳಲ್ಲಿ ಹಣ ಕಟ್ಟಲು, ಬಿಡಿಸಲು, ಚೆಕ್ ಬುಕ್ ತೆಗೆದುಕೊಳ್ಳಲು ಹೀಗೆ ಎಲ್ಲದಕ್ಕೂ ಶುಲ್ಕ ವಿಧಿಸಿ ಸುಲಿಗೆ ಮಾಡಲಾಗುತ್ತಿದ್ದು, ಇದು ದೊಡ್ಡ ಹಗರಣವಾಗಿದೆ. ಆದರೆ ರಾಜ್ಯ ಸರಕಾರ ಹಾಲಿನ ದರ ಏರಿಕೆ ಮಾಡಿ ರೈತರಿಗೆ ಪ್ರೋತ್ಸಾಹಧನ ನೀಡುವುದನ್ನು ವಿರೋಧಿಸುವ ಬಿಜೆಪಿಯವರು ರೈತ ವಿರೋಧಿಗಳಾಗಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿಯವರ ಫೊಟೋ ಹಾಕಿಕೊಳ್ಳಲಿ: ಬಿಜೆಪಿಯವರು ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆಯಲ್ಲಿ ನನ್ನ ಹಾಗೂ ಸಿದ್ದರಾಮಯ್ಯ ಫೊಟೋಗಳನ್ನು ಹಾಕುವ ಬದಲು ಕೇಂದ್ರ ನಾಯಕರ ಫೊಟೋಟೋ ಹಾಕಿಕೊಳ್ಳಬೇಕು. ನಮ್ಮ ಬೆಲೆ ಏರಿಕೆ ಬದಲು ಬಿಜೆಪಿ ಬೆಲೆ ಏರಿಕೆಯನ್ನು ಪ್ರಶ್ನಿಸಬೇಕು ಎಂದು ಅವರು ತಿಳಿಸಿದರು.

ಕೇಂದ್ರ ಬಿಜೆಪಿ ಸರಕಾರದ ಜನಾಕ್ರೋಶ ಎಂದು ಬಿಜೆಪಿಯವರು ಯಾತ್ರೆ ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಇದನ್ನು ನಿಲ್ಲಿಸಬಾರದು. ಅಮೇರಿಕಾದ ಸುಂಕ ನೀತಿಯಿಂದ ದೇಶದ ಜನರಿಗೆ ಆಗಿರುವ ನಷ್ಟದ ಬಗ್ಗೆ ಏಕೆ ಯಾರೂ ಮಾತನಾಡುತ್ತಿಲ್ಲ. ಷೇರು ಪೇಟೆ ಮುಳುಗಿ ಹೋಗಿದೆ, ಆದರೂ ಏಕೆ ಮಾತನಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಅಹಮದಾಬಾದ್ ಎಐಸಿಸಿ ಅಧಿವೇಶನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿಯ ಅಧಿವೇಶನದಲ್ಲಿ ಈ ವರ್ಷವನ್ನು ಸಂಘಟನೆಯ ವರ್ಷ ಎಂದು ಘೋಷಣೆ ಮಾಡಲಾಗಿತ್ತು. ಸ್ಥಳೀಯ ಮಟ್ಟದ ನಾಯಕರಿಗೆ ಹೆಚ್ಚಿನ ಅಧಿಕಾರ ಕೊಡಬೇಕು ಎನ್ನುವ ಚರ್ಚೆ ನಡೆಸಲಾಯಿತು. ಬಡ, ಹಿಂದುಳಿದ ವರ್ಗಗಳ ರಕ್ಷಣೆಗೆ ಹೊಸ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡಲಾಯಿತು. ಪಕ್ಷಕ್ಕೆ ಹೊಸದಿಕ್ಕು ನೀಡುವುದಕ್ಕೆ ಹೆಚ್ಚಿನ ಒತ್ತು ನೀಡಲಾಯಿತು ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಇತರೇ ಚರ್ಚೆಗಳ ಬಗ್ಗೆ ಕೇಳಿದಾಗ, ‘ಯಾವುದೇ ಬದಲಾವಣೆಯಿಲ್ಲ. ಒಂದಷ್ಟು ಪದಾಧಿಕಾರಿಗಳನ್ನು ನೇಮಕ ಮಾಡುತ್ತಾರೆ. ಒಂದಷ್ಟು ಜಿಲ್ಲಾ ಅಧ್ಯಕ್ಷರನ್ನು ಬದಲಾವಣೆ ಮಾಡುತ್ತಾರೆ. ಇದು ಹೊರತಾಗಿ ಯಾರೂ ಸಹ ಯಾವುದೇ ವಿಷಯವನ್ನು ನನ್ನ ಬಳಿ ಚರ್ಚೆ ಮಾಡಿಲ್ಲ’ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ, ಶಾಸಕ ಎನ್.ಎ.ಹಾರಿಸ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News