ʼಜಾತಿಗಣತಿʼ ವಿಚಾರವಾಗಿ ಎದ್ದಿರುವ ಅನುಮಾನಗಳನ್ನು ಬಗೆಹರಿಸುವ ಶಕ್ತಿ ಸರಕಾರಕ್ಕಿದೆ : ಡಿ.ಕೆ. ಸುರೇಶ್

Update: 2025-04-22 17:16 IST
ʼಜಾತಿಗಣತಿʼ ವಿಚಾರವಾಗಿ ಎದ್ದಿರುವ ಅನುಮಾನಗಳನ್ನು ಬಗೆಹರಿಸುವ ಶಕ್ತಿ ಸರಕಾರಕ್ಕಿದೆ : ಡಿ.ಕೆ. ಸುರೇಶ್

ಡಿ.ಕೆ.ಸುರೇಶ್

  • whatsapp icon

ಬೆಂಗಳೂರು : “ಜಾತಿಗಣತಿ ವಿಚಾರವಾಗಿ ಎದ್ದಿರುವ ಅನುಮಾನಗಳನ್ನು ಬಗೆಹರಿಸುವ ದೊಡ್ಡ ಜವಾಬ್ದಾರಿ ಸರಕಾರದ ಮುಂದಿದೆ. ಈ ಅನುಮಾನಗಳಿಗೆ ತೆರೆ ಎಳೆಯುವ ಶಕ್ತಿ ಸರಕಾರಕ್ಕಿದೆ.  ಮುಖ್ಯಮಂತ್ರಿಗಳು ಹಾಗೂ ಅವರ ಸಚಿವ ಸಂಪುಟ ಸುದೀರ್ಘವಾಗಿ ಚರ್ಚಿಸಿ ಈ ಕೆಲಸ ಮಾಡಲಿದ್ದಾರೆ” ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಗರ ಪ್ರದೇಶದಲ್ಲಿ ಸರಿಯಾದ ಮಾಹಿತಿ ಸಿಕ್ಕಿಲ್ಲ ಎಂದು ಆಯೋಗ ಹೇಳಿದ್ದು, ಕಳೆದ 15 ವರ್ಷಗಳಲ್ಲಿ ಸಾಕಷ್ಟು ಜನ ನಗರ ಪ್ರದೇಶಗಳಿಗೆ ವಲಸೆ ಬಂದಿದ್ದಾರೆ. ಇವರನ್ನು ವರದಿಯಲ್ಲಿ ಸೇರಿಸಲಾಗಿದೆಯೇ ಇಲ್ಲವೇ ಎಂಬ ಗೊಂದಲವಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಸಿಎಂ ಆಗಿದ್ದು, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದು, ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ನಂಬಿಕೆ ಇದೆ. ಎಲ್ಲರಿಗೂ ಸರಿಯಾದ ರೀತಿ ನ್ಯಾಯ ಒದಗಿಸುವುದು ಅವರ ಜವಾಬ್ದಾರಿಯೂ ಆಗಿದೆ. ಈ ಪ್ರಕ್ರಿಯೆಯಲ್ಲಿ ಅನುಮಾನಗಳನ್ನು ನಿವಾರಿಸುವುದು ಮೊದಲ ಕೆಲಸವಾಗಬೇಕು” ಎಂದು ಅಭಿಪ್ರಾಯಪಟ್ಟರು.

ಕಾಂತರಾಜು ಆಯೋಗ ವರದಿ ಒಪ್ಪಿದ್ದ ಬಿಜೆಪಿ ಸರಕಾರ:

“ಕಾಂತರಾಜು ಆಯೋಗವು ಯಾವುದೇ ರೀತಿಯ ಜಾತಿಗಣತಿಯನ್ನು ಮಾಡಿಲ್ಲ. ಆ ಸಮಿತಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಿ ಸರಕಾರದ ಮುಂದಿಟ್ಟಿದೆ. ನಂತರ ಬಂದ ಜಯಪ್ರಕಾಶ್ ಹೆಗ್ಡೆ ಅವರು ವರದಿಯನ್ನು ಪೂರ್ಣಗೊಳಿಸಿ ಅಂಕಿ ಅಂಶಗಳನ್ನು ಸರಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಈ ಮಧ್ಯೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಕಾಂತರಾಜು ಅವರು ಮಧ್ಯಂತರ ವರದಿಯನ್ನು ಸಲ್ಲಿಕೆ ಮಾಡಿದ್ದರು. ಈ ಮಧ್ಯಂತರ ವರದಿ ಒಪ್ಪಿಕೊಂಡ ಬಿಜೆಪಿ ಇದು ಸರಿ ಇದೆ ಎಂದು ಒಳಮೀಸಲಾತಿ ಗೆಜೆಟ್ ನೋಟಿಫಿಕೇಶನ್ ಮಾಡಿತ್ತು” ಎಂದು ತಿಳಿಸಿದರು.

ಜಯಪ್ರಕಾಶ್ ಹೆಗ್ಡೆ ಅವರನ್ನು ನೇಮಕ ಮಾಡಿದ್ದು ಕೂಡ ಬಿಜೆಪಿ ಸರಕಾರ. ಇಂದು ಈ ವಿಚಾರವಾಗಿ ಸಾಕಷ್ಟು ಚರ್ಚೆಯಾಗುತ್ತಿದೆ. 2015-16ರಲ್ಲಿ ಆರಂಭವಾದ ಸಮೀಕ್ಷೆ ರಾಜ್ಯದಲ್ಲಿ ಸರಕಾರಿ ನೌಕರರು ಮನೆ ಮನೆಗೆ ಹೋಗಿ ಮಾಹಿತಿ ಕಲೆಹಾಕಿದ್ದಾರೆ. ಕೆಲವರು ಮಾಹಿತಿ ಕೊಟ್ಟರೆ ಮತ್ತೆ ಕೆಲವರು ಮಾಹಿತಿ ಕೊಟ್ಟಿಲ್ಲ. ಸಮಾಜದ ಬಗ್ಗೆ ಕಾಳಜಿ ಇರುವವರು ಈ ಬಗ್ಗೆ ಪೇಪರ್ ನೋಟಿಫಿಕೇಶನ್ ಕೂಡ ನೀಡಿದ್ದರು. ಇದರಲ್ಲಿ ತಮ್ಮ ಸಮುದಾಯದವರು ಇಂತಹ ಜಾತಿ, ಇಂತಹುದೇ ಉಪಜಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದ್ದರು.

ಜಾತಿಗಳ ಸಂಖ್ಯೆಗಿಂತ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಚರ್ಚೆಯಾಗಬೇಕು:

“ವರದಿ ಸಿದ್ಧವಾಗಿ 10 ವರ್ಷಗಳಾಗಿರುವುದರಿಂದ ಸಾಕಷ್ಟು ಗೊಂದಲಗಳಿವೆ. 1.34 ಕೋಟಿ ಕುಟುಂಬಗಳ ಸಮೀಕ್ಷೆ ಮಾಡಲಾಗಿದೆ ಎಂದು ವರದಿಯಲ್ಲಿ ಸಲ್ಲಿಸಲಾಗಿದೆ. ಅಂದಿನ ಸಮೀಕ್ಷೆ ಅನೇಕ ಮಾನದಂಡಗಳನ್ನು ಆಧರಿಸಿ ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಾಗಿತ್ತು. ಈ ವರದಿ ಅಂಕಿ ಅಂಶಗಳು ಬಹಿರಂಗವಾದ ನಂತರ ಜಾತಿ ವಿಚಾರ ಚರ್ಚೆಯಾಗುತ್ತಿದೆಯೇ ಹೊರತು, ಯಾರು ಎಷ್ಟು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಮಾಜಿಕವಾಗಿ ಪ್ರಗತಿ ಸಾಧಿಸಿವೆ, ಯಾರು ಪ್ರಗತಿ ಸಾಧಿಸಿಲ್ಲ ಎಂಬ ಚರ್ಚೆಯಾಗುತ್ತಿಲ್ಲ. ಉದಾಹರಣೆಗೆ ಬ್ರಾಹ್ಮಣರಲ್ಲಿ, ಲಿಂಗಾಯತರು, ಒಕ್ಕಲಿಗರು ಸೇರಿದಂತೆ ಆರ್ಥಿಕವಾಗಿ ಕೆಳಗಿರುವವರು. ಇನ್ನು ಗೊಲ್ಲ ಸಮುದಾಯದವರು ಎಸ್ ಟಿ ಪ್ರವರ್ಗದಲ್ಲಿ ಸೇರಲು ಹೋರಾಟ ಮಾಡುತ್ತಿದ್ದಾರೆ. ಅವರ ಬಗ್ಗೆ ಪೂರ್ಣ ಪ್ರಮಾಣದ ವರದಿ ಇಲ್ಲ, ಇನ್ನು ಈ ಭಾಗದಲ್ಲಿ ಬೆಸ್ತರು ಎಂದು ಕರೆಯಲ್ಪಡುವ ಸಮುದಾಯವನ್ನು ಉತ್ತರ ಕರ್ನಾಟಕ ಭಾಗದಲ್ಲಿ ಅಂಬಿಗರು ಎಂದು ಕರೆಯುತ್ತಾರೆ, ಕರಾವಳಿ ಭಾಗದಲ್ಲಿ ಮೊಗವೀರರು ಎಂದು ಕರೆಯಲಾಗುತ್ತದೆ. ಈ ಸಮುದಾಯವೂ ಎಸ್ ಟಿ ಪ್ರವರ್ಗಕ್ಕೆ ಸೇರಲು ಪಟ್ಟು ಹಿಡಿದಿದ್ದಾರೆ. ಈ ಸಮುದಾಯದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಚರ್ಚೆ ಇಲ್ಲ” ಎಂದು ತಿಳಿಸಿದರು.

“ಕಾಂತರಾಜು ಅವರ ವರದಿ ಹಾಗೂ ಜಯಪ್ರಕಾಶ್ ಹೆಗ್ಡೆ ಅವರ ವರದಿ ಸಚಿವರ ಬಳಿ ಇದೆಯೇ ಹೊರತು ಸಾರ್ವಜನಿಕರ ಬಳಿ ಇಲ್ಲ. ಈ ಮಧ್ಯೆ ಕೆಲವು ಮಾಧ್ಯಮಗಳು ನಿತ್ಯ ಅರ್ಧರ್ಧ ಪುಟ ಮಾಹಿತಿ ಕೊಡುತ್ತಿವೆ. ಈ ವರದಿಗಳು ಗೊಂದಲಗಳನ್ನು ಸೃಷ್ಟಿಸುತ್ತಿವೆ. ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಸ್ವಾತಂತ್ರ್ಯ ಪೂರ್ವದಿಂದ ಸ್ವಾತಂತ್ರ್ಯ ಬಂದ ನಂತರ ನೆಹರೂ ಅವರ ಕಾಲದಿಂದ ಮಲ್ಲಿಕಾರ್ಜುನ ಖರ್ಗೆ ಅವರ ಕಾಲದವರೆಗೂ ಶೋಷಿತರು, ರೈತರು, ದೀನದಲಿತರ ಪರವಾಗಿದ್ದು, ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ” ಎಂದರು.

“ಈ ವರದಿಯನ್ನು ಯಾರೂ ವಿರೋಧ ಮಾಡುತ್ತಿಲ್ಲ. ಬಿಜೆಪಿಯವರಂತು ಅಧಿಕಾರದಲ್ಲಿದ್ದಾಗಲೇ ಒಪ್ಪಿಕೊಂಡಿದ್ದಾರೆ. ಅಶೋಕ್ ಅವರು ರಾಜಕೀಯವಾಗಿ ಏನೇ ಟೀಕೆ ಮಾಡಬಹುದು. ಅಶೋಕ್ ಹಾಗೂ ಸುನೀಲ್ ಅವರು ತಮ್ಮ ಸರಕಾರದ ಸಚಿವ ಸಂಪುಟದಲ್ಲಿ ಕಾಂತರಾಜು ಆಯೋಗದ ವರದಿ ಎಲ್ಲಿ ಎಂದು ಕೇಳಬೇಕಿತ್ತು. ಈ ವರದಿ ಸರಿಯಿಲ್ಲವಾಗಿದ್ದರೆ ಅಂದೇ ಅವರು ತಿರಸ್ಕರಿಸಬಹುದಿತ್ತು. ಈಗ ವಿರೋಧ ಪಕ್ಷದಲ್ಲಿದ್ದೇವೆ ಎಂದು ಟೀಕೆ ಮಾಡುವುದು ಸರಿಯಲ್ಲ.  ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳಾದಿಯಾಗಿ ಎಲ್ಲಾ ಸಚಿವರು, ಸಾರ್ವಜನಿಕ ವಲಯದಲ್ಲಿರುವ ಅನುಮಾನಗಳನ್ನು ನಿವಾರಣೆ ಮಾಡಬೇಕು” ಎಂದು ಹೇಳಿದರು.

ಪಡಿತರ ಕಾರ್ಡುದಾರರ ಕುಟುಂಬಗಳ ಸಂಖ್ಯೆಯೇ 1.50 ಕೋಟಿ ಇದೆ :

“ಈ ಸಮೀಕ್ಷೆಯಲ್ಲಿ ಒಳಪಟ್ಟಿರುವ ಕುಟುಂಬಗಳ ಸಂಖ್ಯೆ 1.34 ಕೋಟಿ ಇದೆ. ನಮ್ಮಲ್ಲಿ ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡುಗಳೇ 1.50 ಕೋಟಿಗಳಿವೆ. ನಮ್ಮ ಸರಕಾದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಕಾರ್ಯಕ್ರಮ ಈ ಕುಟುಂಬಗಳಿಗೆ ತಲುಪುತ್ತಿವೆ. 10,78,106 ಅಂತ್ಯೋದಯ ಕಾರ್ಡ್, 1,17,49,098 ಬಿಪಿಎಲ್ ಕಾರ್ಡ್‌, 25,48,458 ಎಪಿಲ್ ಕಾರ್ಡ್‌ಗಳು ಸೇರಿ ರಾಜ್ಯದಲ್ಲಿ ಒಟ್ಟು 1,50,90,534 ಪಡಿತರ ಚೀಟಿಗಳಿವೆ. ಎಂದರು.

ನಮ್ಮ ಸರಕಾರದ ಪ್ರಮುಖ ಗ್ಯಾರಂಟಿ ಗೃಹಜ್ಯೋತಿಯಲ್ಲಿ ಸುಮಾರು 1.60 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. 1.22 ಕೋಟಿ ಕುಟುಂಬದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಸರಕಾರಿ ನೌಕರರು, ತೆರಿಗೆ ಪಾವತಿದಾರರು ಸೇರಿದಂತೆ ಅನೇಕರು ಪಡೆಯುತ್ತಿದ್ದಾರೆ. ಈ ಯೋಜನೆಗಳಿಂದ ವಂಚನೆಯಾಗಿರುವವರೂ ಅನೇಕರಿದ್ದಾರೆ. ಇಂತಹ ಅಂಕಿಅಂಶಗಳು ನಮ್ಮ ಬಳಿ ಇರುವಾಗ ಸಾರ್ವಜನಿಕರಲ್ಲಿ ಅನುಮಾನ ಬರುವುದು ಸಹಜ. ಹೀಗಾಗಿ ಜಾತಿಗಣತಿ ವರದಿಯಲ್ಲಿ ಸಮೀಕ್ಷೆ ಮಾಡಿಲ್ಲ ಎಂದು ಹೇಳಲಾಗುವುದಿಲ್ಲ. ಸಮೀಕ್ಷೆಯಲ್ಲಿ ಕೆಲವರನ್ನು ಬಿಟ್ಟಿರುವುದರಿಂದ ಅವರನ್ನು ಸೇರಿಸಿಕೊಳ್ಳಬೇಕು. ಕೆಲವರು ಉಪಜಾತಿಗಳನ್ನು ನೋಂದಣಿ ಮಾಡಿದ್ದು, ನಮ್ಮ ಸಂಖ್ಯೆ ಕಮ್ಮಿಯಾಗಿದೆ, ಅವರ ಸಂಖ್ಯೆ ಜಾಸ್ತಿಯಾಗಿದೆ ಎಂಬ ವಾದಗಳು ಸೃಷ್ಟಿಯಾಗಿವೆ. ಇದೆಲ್ಲದಕ್ಕೂ ಕೊನೆಯಾಡುವ ಶಕ್ತಿ ಮುಖ್ಯಮಂತ್ರಿಗಳಿಗಿದೆ. ಮುಖ್ಯಮಂತ್ರಿಗಳು ಹಾಗೂ ಅವರ ಸಚಿವ ಸಂಪುಟ ಈ ವಿಚಾರವಾಗಿ ಸುದೀರ್ಘವಾಗಿ ಚರ್ಚೆ ಮಾಡಿ 7 ಕೋಟಿ ಕನ್ನಡಿಗರಿಗೆ ನ್ಯಾಯ ಕೊಡಿಸಬೇಕು” ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News