‘ಪ್ರತ್ಯೇಕ ರಾಷ್ಟ್ರ’ ಬೇಡಿಕೆ ಇಡುವ ಸ್ಥಿತಿ ಹೇರುತ್ತಿದ್ದಾರೆ: ಕೇಂದ್ರದ ವಿರುದ್ಧ ಡಿ.ಕೆ. ಸುರೇಶ್ ವಾಗ್ದಾಳಿ
ಹೊಸದಿಲ್ಲಿ: ಪ್ರಧಾನಿ ಮೋದಿ ನೇತೃತ್ವದ ಸರಕಾರದ ಪ್ರಸಕ್ತ ಅವಧಿಯ ಕೊನೆಯ ಬಜೆಟ್ ಕುರಿತು ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ‘ಪ್ರತ್ಯೇಕ ರಾಷ್ಟ್ರಕ್ಕೂ ಬೇಡಿಕೆ ಇಡುವಂತಹ ಅನಿವಾರ್ಯ ಪರಿಸ್ಥಿತಿ ನಮ್ಮ ಮೇಲೆ ಹೇರುತ್ತಿದ್ದಾರೆ’ ಎಂದು ಹೇಳಿಕೆ ನೀಡಿರುವುದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮಂಡಿಸಿದ ಮಧ್ಯಂತರ ಬಜೆಟ್ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಸುರೇಶ್, ‘ದಕ್ಷಿಣ ಭಾರತಕ್ಕೆ ಬಹಳಷ್ಟು ಅನ್ಯಾಯ ಆಗುತ್ತಿರುವುದನ್ನು ಪ್ರತಿಯೊಂದು ಹಂತದಲ್ಲಿಯೂ ನೋಡುತ್ತಿದ್ದೇವೆ. ನಮ್ಮ ಪಾಲಿನ ಅಭಿವೃಧಿಯ ಹಣ ಉತ್ತರ ಭಾರತದ ಕಡೆ ಹಂಚುತ್ತಿರುವುದನ್ನು ಕಾಣುತ್ತಿದ್ದೇವೆ’ ಎಂದರು.
‘ನಮಗೆ ಎಲ್ಲ ವಿಚಾರಗಳಲ್ಲೂ ಅನ್ಯಾಯ ಆಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಖಂಡಿಸದಿದ್ದರೆ ಪ್ರತ್ಯೇಕ ರಾಷ್ಟ್ರಕ್ಕೂ ಬೇಡಿಕೆ ಇಡುವಂತಹ ಅನಿವಾರ್ಯ ಪರಿಸ್ಥಿತಿಯನ್ನು ಹಿಂದಿ ಪ್ರದೇಶದವರು ನಮ್ಮ ಮೇಲೆ ಹೇರುತ್ತಿದ್ದಾರೆ ಎಂದು ಹೇಳಬೇಕಾಗುತ್ತದೆ’ ಎಂದು ಸುರೇಶ್ ತಿಳಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ‘ಒಂದು ಕಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದರೆ ಇತ್ತ ರಾಜ್ಯ ಕಾಂಗ್ರೆಸ್ ನಾಯಕ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು ಭಾರತ್ ತೋಡೋ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯ ಫಲವಾಗಿ ಈಗಾಗಲೇ ಒಮ್ಮೆ ದೇಶ ವಿಭಜನೆ ಅನುಭವಿಸಿದ್ದು, ಈಗ ಮತ್ತೂಮ್ಮೆ ಭಾರತವನ್ನ ಒಡೆಯುವ ಮಾತನಾಡುತ್ತಿದ್ದಾರೆ. ದೇಶದ ಅಖಂಡತೆ, ಸಾರ್ವಭೌಮತೆ ಕಾಪಾಡುವ ಪ್ರಮಾಣ ವಚನ ಸ್ವೀಕರಿಸಿದ ಸಂಸದರೊಬ್ಬರು ಈ ರೀತಿ ಮಾತನಾಡುವುದು ಕಾಂಗ್ರೆಸ್ ಪಕ್ಷದ ವಿಭಜನಕಾರಿ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಅವರು ಟೀಕಿಸಿದ್ದಾರೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಟ್ವೀಟ್ ಮಾಡಿ, ‘ಭಾರತ ಜೋಡೋ ಯಾತ್ರೆಯ ಮುಂಚೂಣಿಯಲ್ಲಿದ್ದ ಸಂಸದ ಡಿ.ಕೆ.ಸುರೇಶ್ ಅವರೇ ಭಾರತ ತೋಡೋ ಕೆಲಸಕ್ಕೆ ಮುಂದಾಗಿದ್ದಾರೆ. ದೇಶದ ಅಖಂಡತೆಯನ್ನೆ ಪ್ರಶ್ನಿಸುವ ಮಟ್ಟಕ್ಕೆ ಕಾಂಗ್ರೆಸ್ ನಾಯಕರು ತಲುಪಿರುವುದು ಅಕ್ಷಮ್ಯ ಅಪರಾಧ. ದಕ್ಷಿಣ ಭಾರತದಲ್ಲಿ ಪ್ರತ್ಯೇಕ ರಾಷ್ಟ್ರದ ಕೂಗು ಮೂಡಿಸಬೇಕಾಗುತ್ತದೆ ಎಂಬ ದಾಷ್ಟ್ಯವನ್ನು ಸಹಿಸಲಾಗದು’ ಎಂದು ಹೇಳಿದ್ದಾರೆ.
‘ಡಿ.ಕೆ.ಸುರೇಶ್ ಜನರ ಬೇಸರ ಹಾಗೂ ಅಭಿಪ್ರಾಯವನ್ನು ಹೇಳಿದ್ದಾರೆ ಅಷ್ಟೇ. ನಮಗಾಗುತ್ತಿರುವ ಅನ್ಯಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ಭಾರತ ಮಾತೆಯ ಮಕ್ಕಳು ನಾವು ಒಗ್ಗಟ್ಟಾಗಿರಬೇಕು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಒಂದೇ. ಹಿಂದಿ ಭಾಗಕ್ಕೆ ಹೇಗೆ ಆದ್ಯತೆ ನೀಡಲಾಗುತ್ತಿದೆಯೋ ಅದೇ ರೀತಿ ನಮಗೂ ಆದ್ಯತೆ ನೀಡಬೇಕು’.
-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ