ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆ

Update: 2024-03-28 13:34 GMT
ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆ
  • whatsapp icon

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಗುರುವಾರ ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಅವಿನಾಶ್ ಮೆನನ್ ಅವರಿಗೆ ಎರಡು ನಾಮಪತ್ರಗಳನ್ನು ಸಲ್ಲಿಸಿದರು.

ಡಿ.ಕೆ.ಸುರೇಶ್ ಒಟ್ಟು 593 ಕೋಟಿ ರೂ.ಗಳ ಆಸ್ತಿಯ ಒಡೆಯರಾಗಿದ್ದು, ಇದರಲ್ಲಿ ಸ್ಥಿರಾಸ್ತಿ 486 ಕೋಟಿ ರೂ. ಹಾಗೂ ಚರಾಸ್ತಿ 106.71 ಕೋಟಿ ರೂ.ಗಳಿದೆ. 150.06 ಕೋಟಿ ರೂ.ಸಾಲವಿದ್ದು, ಈ ಪೈಕಿ 57.27 ಕೋಟಿ ರೂ.ಗಳಿಗೆ ಸಂಬಂಧಿಸಿದಂತೆ ವ್ಯಾಜ್ಯವಿದೆ ಎಂದು ಪ್ರಮಾಣಪತ್ರದಲ್ಲಿ ಅವರು ತಿಳಿಸಿದ್ದಾರೆ.

ವಿವಿಧ ನ್ಯಾಯಾಲಯಗಳಲ್ಲಿ ಮೂರು ಕ್ರಿಮಿನಲ್ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. 21.35 ಲಕ್ಷ ರೂ.ಮೌಲ್ಯದ 1260 ಗ್ರಾಂ ಚಿನ್ನಾಭರಣ, 2.10 ಲಕ್ಷ ರೂ.ಮೌಲ್ಯದ 4860 ಗ್ರಾಂ ಬೆಳ್ಳಿ ಆಭರಣ, 73.58 ಲಕ್ಷ ರೂ.ಮೌಲ್ಯದ ಗೃಹಪಯೋಗಿ ವಸ್ತುಗಳು, 32.75 ಕೋಟಿ ರೂ.ಮೌಲ್ಯದ ಕೃಷಿ ಭೂಮಿ, 210.47 ಕೋಟಿ ರೂ.ಮೌಲ್ಯದ ಕೃಷಿಯೇತರ ಭೂಮಿಯನ್ನು ಡಿ.ಕೆ.ಸುರೇಶ್ ಹೊಂದಿದ್ದಾರೆ.

211.91 ಕೋಟಿ ರೂ.ಮೌಲ್ಯದ ವಾಣಿಜ್ಯ ಕಟ್ಟಡಗಳು, ಕನಕಪುರ ತಾಲೂಕಿನ ರಾಮಪುರದೊಡ್ಡಿ, ಸದಾಶಿವನಗರ ಹಾಗೂ ಕೆಂಗೇರಿ ಬಳಿಯ ಪಂತರಪಾಳ್ಯದಲ್ಲಿರುವ ಮನೆಗಳ ಮೌಲ್ಯ 27.13 ಕೋಟಿ ರೂ.ಗಳು ಎಂದು ಘೋಷಿಸಲಾಗಿದೆ.

ನಾಮಪತ್ರ ಸಲ್ಲಿಕೆ ವೇಳೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಎಚ್.ಸಿ.ಬಾಲಕೃಷ್ಣ, ಆನೇಕಲ್ ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News