ಚನ್ನಪಟ್ಟಣ ಬಡವರ ನಿವೇಶನಕ್ಕಾಗಿ 120ಎಕರೆ ಜಮೀನು ಗುರುತು : ಡಿ.ಕೆ.ಶಿವಕುಮಾರ್

Update: 2024-08-08 15:39 GMT

PC : x/@DKShivakumar

ಬೆಂಗಳೂರು : ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದ ಬಡವರಿಗೆ ಮನೆ ಹಾಗೂ ನಿವೇಶನ ಹಂಚಿಕೆಗಾಗಿ ಸರಕಾರದಿಂದ 120 ಎಕರೆಯಷ್ಟು ಜಮೀನು ಗುರುತಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ತಾಲೂಕಿನಲ್ಲಿ ನಡೆದ ‘ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ’ ಸರಣಿ ಕಾರ್ಯಕ್ರದಲ್ಲಿ ಮನೆ, ನಿವೇಶನ ಹಂಚಿಕೆ ಬಗ್ಗೆ ನಾಗರಿಕರಿಗೆ ಶಿವಕುಮಾರ್ ಈ ಹಿಂದೆ ಭರವಸೆ ನೀಡಿದ್ದರು. ಅದರಂತೆ ನಿವೇಶನಗಳಿಗಾಗಿ ಸ್ಥಳ ವೀಕ್ಷಣೆಗೆ ತಾಲೂಕಿನ ಹನುಮಂತನಗರ, ಪಟ್ಲು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ವಿವಿಧ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ನಡೆಸಲಾಗಿತ್ತು. ಸುಮಾರು 22 ಸಾವಿರ ಜನರು ಅಹವಾಲು ಸಲ್ಲಿಸಿದ್ದರು. ಇದರಲ್ಲಿ ಸುಮಾರು 15 ಸಾವಿರ ಮಂದಿ ನಿವೇಶನ ಹಾಗೂ ಮನೆಗಾಗಿ ಬೇಡಿಕೆ ಇಟ್ಟಿದ್ದರು’ ಎಂದು ತಿಳಿಸಿದರು.

‘ಜನರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈಗ ಇರುವ ಜಮೀನುಗಳ ಅಕ್ಕಪಕ್ಕ ಖಾಸಗಿಯವರು ಜಮೀನು ನೀಡಿದರೆ ಖರೀದಿಸಲಾಗುವುದು. ಈಗಾಗಲೇ ತಾಲೂಕು ಸೇರಿದಂತೆ ಒಟ್ಟು ಮೂರು ಕ್ಷೇತ್ರಗಳಿಗೆ ಸಿಎಂ ಮೂಲಸೌಕರ್ಯ ಅಭಿವೃದ್ದಿಗೆ ತಲಾ 100 ಕೋಟಿ ರೂ.ವಿಶೇಷ ಅನುದಾನ ಮಂಜೂರು ಮಾಡಿದ್ದಾರೆ. ಬಡವರಿಗೆ ನಿವೇಶನ, ಮನೆ ಹಂಚಲಾಗುವುದು. ಅರ್ಜಿ ನೀಡಿರುವವರ ಮನೆಗೆ ತೆರಳಿ ಅಧಿಕಾರಿಗಳು ಸತ್ಯಾಸತ್ಯತೇ ಪರಿಶೀಲನೆ ಮಾಡುತ್ತಾರೆ. ಈಗಲೂ ಮನೆಗೆ ಅರ್ಜಿ ನೀಡಬಹುದು ಎಂದು ಅವರು ತಿಳಿಸಿದರು.

‘ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ. ಇಲ್ಲದಿದ್ದರೆ ಸ್ಥಳ ವೀಕ್ಷಣೆ ಸೇರಿದಂತೆ ಇಷ್ಟೆಲ್ಲಾ ಕೆಲಸ ಏಕೆ ಮಾಡಬೇಕಿತ್ತು? ಯಾರ ಬಗ್ಗೆಯೂ ದೂಷಣೆ ಮಾಡುವುದಿಲ್ಲ. ಜನರಿಗೆ, ಬಡವರಿಗೆ ಒಳ್ಳೆಯದಾಗಬೇಕು. ನಿವೇಶನ ಮಂಜೂರು ಆದವರ ಪಟ್ಟಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದು. ದೊಡ್ಡ ಮನೆ ಇರುವವರು, ಸ್ಥಿತಿವಂತರಿಗೆ ಈ ಅವಕಾಶವಿಲ್ಲ ಎಂದು ಅವರು ತಿಳಿಸಿದರು.

ಕನಕಪುರದಲ್ಲಿ ನೂರಾರು ಎಕರೆ ಹಂಚಿದ್ದೇನೆ. ನಾನೇ ಖುದ್ದಾಗಿ ವಾರ್ಡ್‍ಮಟ್ಟದಲ್ಲಿ ನಿವೇಶನ ಹಂಚಿಕೆ ಮಾಡಿದ್ದೇನೆ. ಇಲ್ಲಿಯೂ ಇದೇ ರೀತಿ ಹಂಚಿಕೆ ಮಾಡಲಾಗುವುದು. ಉತ್ತಮ ದರ್ಜೆಯ ಲೇಔಟ್‍ಗಳನ್ನು ನಿರ್ಮಾಣ ಮಾಡಿ, ಒಳಚರಂಡಿ, ಕುಡಿಯುವ ನೀರು, ಶಾಲೆ, ಅಂಗನವಾಡಿ, ದೇವಸ್ಥಾನ, ರಸ್ತೆ ಸೇರಿದಂತೆ ಎಲ್ಲ ಸೌಕರ್ಯ ನೀಡಲಾಗುವುದು. ಒಂದಷ್ಟು ಭೂಮಿಗಳು ಚನ್ನಪಟ್ಟಣಕ್ಕೆ ಹತ್ತಿರದಲ್ಲಿವೆ. ಇನ್ನೊಂದಷ್ಟು 5ಕಿಮೀ ದೂರದಲ್ಲಿವೆ. ಖಾಸಗಿಯವರು ಜಮೀನು ನೀಡಿದರೆ ಮಾರುಕಟ್ಟೆ ದರದಲ್ಲಿಯೇ ಖರೀದಿ ಮಾಡಲಾಗುವುದು ಎಂದು ಅವರು ಹೇಳಿದರು.

ಚನ್ನಪಟ್ಟಣ ನಗರ ಮಾತ್ರವಲ್ಲ, ಆಯಾಯ ಹಳ್ಳಿಗಳಲ್ಲಿ ಅಲ್ಲಲ್ಲಿಯೇ ನಿವೇಶನ ಹಂಚಿಕೆ ಮಾಡಲಾಗುವುದು. ಅವೇರಗಳ್ಳಿ, ಸುಳ್ಳೇರಿ, ಶಿಬನಹಳ್ಳಿ, ವಂದಾರಗುಪ್ಪೆ, ಅಲ್ಲಾಳುಸಂದ್ರ ಸೇರಿದಂತೆ ಬ್ರಹ್ಮಿಣೀಪುರದಲ್ಲಿ 9 ಎಕರೆ, ಪಟ್ಲು ಗ್ರಾಮದಲ್ಲಿ 22ಎಕರೆ ಸೇರಿದಂತೆ ಆಯಾಯ ಗ್ರಾಮಮಟ್ಟದಲ್ಲಿ ಎಷ್ಟು ಭೂಮಿ ಲಭ್ಯತೆ ಇದೆಯೋ ಅವುಗಳನ್ನು ಗುರುತಿಸಲಾಗಿದೆ ಎಂದರು.

ನಾನೇ ಪಕ್ಷದ ಅಧ್ಯಕ್ಷ: ‘ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿ. ಹಿಂದುಳಿದ ವರ್ಗದ ನಾಯಕ ಎಂದು ಗುರಿ ಮಾಡಲಾಗುತ್ತಿದೆ. ಇಲ್ಲಿ ನನ್ನ ಅವಶ್ಯಕತೆ ಏನಿಲ್ಲ. ನಮ್ಮ ಸರಕಾರದ ನಾಯಕರು ಅವರು, ನಾನು ಪಕ್ಷದ ಅಧ್ಯಕ್ಷ ಇದರಲ್ಲಿ ಸಮಸ್ಯೆ ಏನಿದೆ? ಎಂದು ಶಿವಕುಮಾರ್, ಮೈಸೂರಿನ ಜನಾಂದೋಲನ ಸಮಾವೇಶನದ ಪೋಸ್ಟರ್‌ನಲ್ಲಿ ತಮ್ಮ ಫೋಟೊ ಇಲ್ಲ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News