ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಜಗಳ ವಿರೋಧಿಗಳಿಗೆ ಅಸ್ತ್ರ ಆಗುತ್ತಿದೆ : ಡಿ.ವಿ.ಸದಾನಂದಗೌಡ
ಬೆಂಗಳೂರು : ದೊಡ್ಡ ಹೋಮದ ಪೂರ್ಣಾಹುತಿ ಮಾಡಿದ ನಂತರ ಪ್ರಸಾದ ನೀಡುವ ಸಂಪ್ರದಾಯವಿದೆ. ಆ ಸಮಯಕ್ಕೆ ನಾವೀಗ ಬಂದಿದ್ದೇವೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಂಡ ದಿಲ್ಲಿಯಲ್ಲಿದ್ದು, ಶಿಸ್ತು ಸಮಿತಿ ಅಧ್ಯಕ್ಷರಿಗೆ ಉತ್ತರ ನೀಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದರು.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದಿಲ್ಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಸಂಸದರ ಸಭೆ ಮಾಡಿದ್ದು, ಯತ್ನಾಳ್, ರಾಜನಾಥ್ ಸಿಂಗ್‍ರನ್ನು ಭೇಟಿ ಮಾಡಿದ್ದಾರೆ. ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಜಗಳ ವಿರೋಧಿಗಳಿಗೆ ಅಸ್ತ್ರ ಆಗುತ್ತಿದೆ ಎಂದು ಅವರು ವಿಶ್ಲೇಷಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ನಿನ್ನೆ ಚರ್ಚೆ ಮಾಡಲು ಅವಕಾಶ ಕೊಡಲಿಲ್ಲ. ನನಗೆ ಯಾವುದೇ ಸಂಬಂಧ ಇಲ್ಲ, ನಾನು ಅದಕ್ಕಾಗಿ ಬಂದಿಲ್ಲ ಅಂದರು. ದಿಲ್ಲಿಗೆ ಈಗಾಗಲೇ ಅಧ್ಯಕ್ಷರು ಹೋಗಿ ಬಂದಿದ್ದಾರೆ. ಆರ್.ಅಶೋಕ್ ದಿಲ್ಲಿಗೆ ಹೋಗಿದ್ದಾರೆ. ಯತ್ನಾಳ್ ಟೀಮ್ ದಿಲ್ಲಿಯಲ್ಲೇ ಇದೆ. ಇದಕ್ಕಿಂತ ಇನ್ನು ಏನು ವರದಿ ಬೇಕು? ಎಲ್ಲರ ಕಡೆಯಿಂದಲೂ ವರದಿಯನ್ನು ಹೈಕಮಾಂಡ್ ಸ್ವೀಕರಿಸಿದೆ. ಇನ್ನು ಎರಡು-ಮೂರು ದಿನಗಳಲ್ಲಿ ಒಂದು ನಿರ್ಧಾರಕ್ಕೆ ಬನ್ನಿ. ಯಾರೇ ತಪ್ಪು ಮಾಡಿದರೂ ಕ್ರಮ ಆಗಲಿ ಎಂದು ಆಗ್ರಹಿಸಿದರು.
ಮುಖಂಡರ ಚಮಚಗಿರಿಯಿಂದ ಪಕ್ಷ ಸಂಘಟನೆ ಆಗುವುದಿಲ್ಲ. ಹಣ ಇಟ್ಟುಕೊಂಡು ಬಂದವರಿಂದ ಪಕ್ಷ ಸಂಘಟನೆ ಆಗುವುದಿಲ್ಲ. ಪಕ್ಷದ ಶಿಸ್ತು ಉಲ್ಲಂಘನೆ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರಿಂದ ಆಗಿದೆ. ತೇಪೆ ಹಾಕುವ ಕೆಲಸ ಈ ಬಾರಿ ಆಗಬಾರದು. ಅದು ಯಾರೇ ಆದರೂ ಕ್ರಮ ಆಗಬೇಕು ಎಂದು ಅವರು ಹೇಳಿದರು.
ಸ್ಥಳೀಯ ಚುನಾವಣೆ ಮೇಲೂ ಇದು ಪರಿಣಾಮ ಬೀರುತ್ತದೆ. ಯತ್ನಾಳ್ ಮಾಡಿರುವುದು ಇಡೀ ಲೋಕಕ್ಕೆ ಗೊತ್ತಿದೆ. ಫೈಟ್ ಮಾಡಲು ಒಂದು ತಂಡ ರಚನೆ ಆಗುವುದು ಸರಿಯಲ್ಲ. ಅವರೆಲ್ಲಾ ದಿಲ್ಲಿಗೆ ಹೋಗಿದ್ದರೆ ಮತ್ತಷ್ಟು ಗೌರವ ಬರುತ್ತಿತ್ತು. ತೊಡೆ ತಟ್ಟಿ ಯತ್ನಾಳ್ ಟೀಮ್ ಹೋಗುವುದು ಸರಿಯಲ್ಲ. ಬಲ ಪ್ರದರ್ಶನ ಮಾಡುವುದಾದರೆ ಹೈಕಮಾಂಡ್ ಬೇಕಾಗಿಲ್ಲ ಅಲ್ವಾ? ಎಂದು ಸದಾನಂದಗೌಡ ಪ್ರಶ್ನಿಸಿದರು.
ಡಿ.7ಕ್ಕೆ ತೀರ್ಮಾನ ಮಾಡಲು ಉಸ್ತುವಾರಿಗಳ ಕೈಯಲ್ಲಿ ಏನೂ ಇಲ್ಲ. ಏನೇ ಆದರೂ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ತೀರ್ಮಾನ ಮಾಡಬೇಕು. ಉಸ್ತುವಾರಿಗಳು ವರದಿ ಪಡೆದು ಹೈಕಮಾಂಡ್‍ಗೆ ಕೊಡಬೇಕು ಅಷ್ಟೇ. ಆರ್.ಅಶೋಕ್ ಜೊತೆ ಮಾತನಾಡಿದ್ದೆ. ದಿಲ್ಲಿಗೆ ಹೋಗುತ್ತಾರೆಂದು ನನಗೆ ಗೊತ್ತಿರಲಿಲ್ಲ. ಪಕ್ಷದಲ್ಲಿ ಪರಿಹಾರವಿದೆ. ಎಲ್ಲರೂ ತಾಳ್ಮೆಯಿಂದ ಇರಬೇಕು ಎಂದು ಸದಾನಂದಗೌಡ ನುಡಿದರು.