ನಾಲ್ಕು ರಾಜ್ಯಗಳ ಚುನಾವಾಣಾ ಫಲಿತಾಂಶ; ಕರ್ನಾಟಕ ಕಾಂಗ್ರೆಸ್‍ಗೂ ಎಚ್ಚರಿಕೆ ಗಂಟೆ: ಬೊಮ್ಮಾಯಿ

Update: 2023-12-03 12:07 GMT

ಬೆಂಗಳೂರು: ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಲೋಕಸಭೆ ಚುನಾವಣೆಯ ದಿಕ್ಸೂಚಿಯಾಗಿದ್ದು, ಪ್ರಧಾನಿ ಮೋದಿಯವರ ವರ್ಚಸ್ಸು ಮತ್ತಷ್ಟು ಹೆಚ್ಚಾಗಿದ್ದು, ಕರ್ನಾಟಕ ಕಾಂಗ್ರೆಸ್ ಗೂ ಎಚ್ಚರಿಕೆಯ ಗಂಟೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರವಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆ ಲೋಕಸಭೆ ಚುನಾವಣೆಗಿಂತ ಮೊದಲು ಬಂದಿರುವುದರಿಂದ ಇದನ್ನು ಸೆಮಿ ಫೈನಲ್ ಅಂತ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅಂತೂ ಮೇಲಿಂದ ಮೇಲೆ ಹೇಳಿದ್ದಾರೆ. ಈ ಫಲಿತಾಂಶ ಲೋಕಸಭೆ ಚುನಾವಣೆಗೆ ಸ್ಪಷ್ಟ ಸಂದೇಶ ನೀಡಿದೆ ಎಂದು ಹೇಳಿದರು.

ಮಧ್ಯಪ್ರದೇಶ ಮೂರನೇ ಎರಡರಷ್ಟು ಬಹುಮತ ಪಡೆದಿದ್ದೇವೆ. ಛತ್ತೀಸ್ ಗಡ, ರಾಜಸ್ತಾನದಲ್ಲೂ ಸ್ಪಷ್ಟ ಬಹುಮತ ಪಡೆದಿದ್ದೇವೆ. ತೆಲಂಗಾಣದಲ್ಲಿ ನಮ್ಮ ಸಂಖ್ಯೆ 1 ರಿಂದ 11 ಕ್ಕೆ ಏರಿದ್ದೇವೆ. ಈ ಫಲಿತಾಂಶಕ್ಕೆ ಕಾರಣವಾಗಿರುವ ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಅಮಿತ್ ಶಾ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹ್ವಾನ್ ಸೇರಿದಂತೆ ಎಲ್ಲ ನಾಯಕರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಇಂಡಿಯಾ ಒಕ್ಕೂಟದ ಪರಿಸ್ಥಿತಿ ಈಗ ನಡೆದ ಚುನಾವಣೆಗಳನಲ್ಲಿ ಛಿದ್ರವಾಗಿದೆ. ಕಾಂಗ್ರೆಸ್ ಅದರಿಂದ ದೂರವಾಗುತ್ತಿದೆ. ಲೊಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಸಂಪೂರ್ಣ ನೆಲ ಕಚ್ಚಲಿದೆ ಎಂದು ಹೇಳಿದರು.

ಇನ್ನು ಈ ಫಲಿತಾಂಶ ಕರ್ನಾಟಕದ ಮೇಲೂ ಆಗಲಿದ್ದು, ಕರ್ನಾಟಕದಲ್ಲಿ ಇಷ್ಟೊಂದು ಬರ ಇದೆ. ಡಿಸಿ ಅಕೌಂಟ್ ನಲ್ಲಿ 400 ಕೋಟಿ ರೂ.ಗೂ ಅಧಿಕ ರೂ. ಹಣ ಇದ್ದರೂ, ಅದನ್ನು ಬಿಡುಗಡೆ ಮಾಡದೇ ಕೇಂದ್ರದ ಕಡೆಗೆ ಬೆರಳು ಮಾಡುತ್ತಿದ್ದಾರೆ. ಹಿಂದಿನ ಯಾವುದೇ ಸರ್ಕಾರ ಈ ರೀತಿ ಮಾಡಿಲ್ಲ. ಮೊದಲು ತನ್ನ ಬಳಿ ಇರುವ ಹಣವನ್ನು ರೈತರಿಗೆ ಪರಿಹಾರ ನೀಡಬೇಕು. ನಾವು ಪ್ರವಾಹ ಬಂದಾಗ ಮೊದಲು ಪರಹಾರ ನೀಡಿದ್ದೇವು ಎಂದರು.

ಜನಾಂದೋಲನ: ರಾಜ್ಯ ಸರಕಾರದ ಗ್ಯಾರೆಂಟಿಗಳು ಕೇವಲ ಶೇ.25ರಷ್ಟು ಜನರಿಗೆ ಮಾತ್ರ ತಲುಪಿದೆ. ಅಧಿವೇಶನ ಮುಗಿದ ಮೇಲೆ ಬಿಜೆಪಿಯಿಂದ ಗ್ಯಾರೆಂಟಿಯ ಸರಿಯಾದ ಅನುಷ್ಠಾನಕ್ಕಾಗಿ ಬೃಹತ್ ಚಳುವಳಿ ನಡೆಸಲು ತೀರ್ಮಾನ ಮಾಡಿದ್ದೇವೆ. ಗ್ಯಾರೆಂಟಿ ದೊರೆಯದ ಫಲಾನುಭವಿಗಳ ಮುಂದಾಳತ್ವದಲ್ಲಿ ಹೋರಾಟ ರೂಪಿಸಲಾಗುವುದು ಎಂದರು.

ಮೋದಿ ವರ್ಚಸ್ಸು ಹೆಚ್ಚಾಗಿದೆ: ದೇಶದಲ್ಲಿ ಈಗಿನ ವಾತಾವರಣ ನೋಡಿದರೆ, ಮತ್ತೆ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಾರೆ. ರಾಜ್ಯದಲ್ಲಿ 25 ಎಂಪಿ ಸ್ಥಾನ ಗೆಲ್ಲುತ್ತೇವೆ. ಜೆಡಿಎಸ್ ಜೊತೆಗಿನ ಹೊಂದಾಣಿಕೆ ನಮಗೆ ಹೆಚ್ಚು ಅನುಕೂಲವಾಗಲಿದೆ. ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಗೆದ್ದರೆ ಇಡೀ ದೇಶ ಗೆದ್ದಂತೆ ಅಂತ ಹೇಳುತ್ತಾರೆ. ಪ್ರಧಾನಿ ಮೊದಿಯವರ ವರ್ಚಸ್ಸು ಈಗ ಮತ್ತೆ ಹೆಚ್ಚಾಗಿದೆ. ಕಾಂಗ್ರೆಸ್ ನ ಯಾವ ನಾಯಕರಿಗೂ ಮೋದಿಯವರ ಶೇ.1ರಷ್ಟೂ ವರ್ಚಸ್ಸಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News