ಅನ್ಯಾಯ ನಡೆದರೂ ‘ಸನಾತನ’ವೇ ಶ್ರೇಷ್ಟವೆನ್ನುತ್ತಿದ್ದಾರೆ: ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ

Update: 2023-09-16 16:50 GMT

ಮೂಡ್ನಾಕೂಡು ಚಿನ್ನಸ್ವಾಮಿ

ಬೆಂಗಳೂರು, ಸೆ.16: ‘ಸಮಾಜದಲ್ಲಿ ಇಷ್ಟೊಂದು ಅನ್ಯಾಯ ನಡೆಯುತ್ತಿದ್ದರೂ, ಸನಾತನವನ್ನೇ ಶ್ರೇಷ್ಟ ಎಂದು ಕೆಲವರು ಬಿಂಬಿಸುತ್ತಿದ್ದಾರೆ. ಅಂತವರಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ’ ಎಂದು ಹಿರಿಯ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಜೈ ಭೀಮ್ ಭವನದಲ್ಲಿ ಆಯೋಜಿಸಿದ್ದ ಲೇಖಕ ಡಾ.ರಂಗನಾಥ ಕಂಟನಕುಂಟೆ ಅವರ ‘ಪ್ರೇಮಬಿಕ್ಕು ಮತ್ತು ಬಾಪುಚಿಟ್ಟೆ, ಓದಿನ ಒಕ್ಕಲು’ ಪುಸ್ತಕಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ‘ಉತ್ತರ ಪ್ರದೇಶದಲ್ಲಿ ಕೂಲಿ ಕೇಳಲು ಹೋದ ದಲಿತ ಯುವಕನ್ನು ಮೇಲ್ವರ್ಗದವರು ಕೊಲೆ ಮಾಡಿದ್ದಾರೆ. ಉತ್ತರ ಭಾರತ ಸೇರಿದಂತೆ ತಮಿಳುನಾಡಿನಲ್ಲೂ ಜಾತಿ ಅಸಮಾನತೆ ಹೆಚ್ಚಾಗಿದೆ. ಆದರೂ ಜಾತಿ ವ್ಯವಸ್ಥೆಯನ್ನು ಪ್ರತಿಪಾಧಿಸುವ ಸನಾತನವನ್ನು ಶ್ರೇಷ್ಟ ಎಂಬಂತೆ ಸಮರ್ಥಿಸಿಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಮಾಜವನ್ನು ಸಮಸ್ಥಿತಿಗೆ ತರಬೇಕಾಗಿದೆ. ಹಾಗಾಗಿ ‘ದ್ವಿಜರನ್ನು’ ಬೇರೆ ಧರ್ಮವಾಗಿ, ಶೂದ್ರರನ್ನು ಬೇರೆ ಧರ್ಮವನ್ನಾಗಿ ಮಾಡಬೇಕಾಗಿದೆ. ಆದರೆ ಇದಕ್ಕೂ ಅವರು ಅವಕಾಶವನ್ನು ನೀಡುತ್ತಿಲ್ಲ’ ಎಂದ ಅವರು, ‘ಯಾವುದೇ ಪಕ್ಷದ ಸರಕಾರ ಅಧಿಕಾರಕ್ಕೆ ಬಂದರೂ ಶಿಕ್ಷಣ ಪದ್ಧತಿಯನ್ನು ಸರಿಪಡಿಸಲಿಲ್ಲ. ಜಾತಿ ಪದ್ಧತಿಯು ಮೇಲ್ವರ್ಗದ ಹುಡುಗರಿಗೆ ಸಮಸ್ಯೆಯೇ ಅನಿಸುತ್ತಿಲ್ಲ’ ಎಂದು ಅವರು ನುಡಿದರು.

‘ಇಂದು ಸಮಾಜ ಸಾಂಸ್ಕೃತಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಲೇಖಕನ ಪ್ರಜ್ಞೆ ಬಹಳ ಮುಖ್ಯವಾದದು. ಲೇಖಕ ಡಾ.ರಂಗನಾಥ ಕಂಟನಕುಂಟೆ ಅವರು ಕಾವ್ಯ ಮತ್ತು ವಿಮರ್ಶೆ ಎರಡರನ್ನು ಬರೆದಿರುವುದು ವಿಶೇಷವಾಗಿದೆ. ಏಕೆಂದರೆ ಕಾವ್ಯ ಮತ್ತು ವಿಮರ್ಶೆಯನ್ನು ಒಬ್ಬರೇ ಬರೆಯುವುದು ವಿರಳವಾಗಿರುತ್ತದೆ. ಅಲ್ಲದೆ, ತಳ ಸಮುದಾಯದ ಲೇಖಕರು ವಿಮರ್ಶೆಯನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಡಾ.ರಂಗನಾಥ ಕಂಟನಕುಂಟೆ ಬರೆದಿರುವ ಪ್ರೇಮಬಿಕ್ಕು ಮತ್ತು ಬಾಪುಚಿಟ್ಟೆ ಹಾಗೂ ಓದಿನ ಒಕ್ಕಲು ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ವಿಮರ್ಶಕ ಡಾ.ಗಂಗರಾಜು ಜಿ.ಡಾ. ದೇವರಾಜು ಡಿ.ಆರ್., ಕಾ.ತ.ಚಿಕ್ಕಣ್ಣ, ರಂಗನಾಥ ಕಂಟನಕುಂಟೆ, ಡಾ.ರವಿಕುಮಾರ್ ಬಾಗಿ ಸೇರಿದಂತೆ ಮತ್ತಿತತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News