Fact Check | ಕೂಗಿದ್ದು ʼನಾಸಿರ್‌ ಸಾಬ್ ಝಿಂದಾಬಾದ್ʼ, ಮಾಧ್ಯಮಗಳಲ್ಲಿ ವರದಿಯಾಗಿದ್ದು ‘ಪಾಕಿಸ್ತಾನ್ ಝಿಂದಾಬಾದ್’

Update: 2024-02-27 16:27 GMT

ಬೆಂಗಳೂರು : ರಾಜ್ಯಸಭೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ 3 ಅಭ್ಯರ್ಥಿಗಳು ಜಯಭೇರಿ ಬಾರಿಸಿದರೆ, ಬಿಜೆಪಿಯ ಒಬ್ಬರು ರಾಜ್ಯಸಭೆ ಪ್ರವೇಶಿಸಿದರು. ಮೈತ್ರಿ ಅಭ್ಯರ್ಥಿಗೆ ಸೋಲಾಗಿದೆ. ಗೆಲುವಿನ ಬಳಿಕ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಲಿಗರು ಸಂಭ್ರಮಾಚರಣೆ ವೇಳೆ ʼಪಾಕಿಸ್ತಾನ್‌ ಝಿಂದಾಬಾದ್ʼ ಘೋಷಣೆ ಕೂಗಿದ್ದಾರೆ ಎಂದು ಟಿವಿ ಚಾನಲ್‌ ಗಳು ವರದಿ ಮಾಡಿದ್ದವು. ಆದರೆ ವೀಡಿಯೊ ಕೂಲಂಕುಷವಾಗಿ ಪರಿಶೀಲಿಸಿದಾಗ ಸ್ವಷ್ಟವಾಗಿ ‘ನಾಸೀರ್ ಸಾಬ್ ಝಿಂದಾಬಾದ್’ ಎಂದು ಹೇಳುತ್ತಿರುವುದು ಕೇಳಿಸುತ್ತಿದೆ.

ಕನ್ನಡದ ಸುದ್ದಿ ಮಾಧ್ಯಮಗಳಾದ ಟಿವಿ9, ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ, ವಿಸ್ತಾರ ನ್ಯೂಸ್, ನ್ಯೂಸ್ ಫಸ್ಟ್ ಹಾಗೂ ರಿಪಬ್ಲಿಕ್ ಕನ್ನಡ ಸೇರಿದಂತೆ ಬಹುತೇಕ ಮಾಧ್ಯಮಗಳು ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂದು  ಸುಳ್ಳು ಸುದ್ದಿ ಹರಡಿವೆ.

“ನಾಸಿರ್‌ ಹುಸೇನ್‌ ಅವರ ಪಕ್ಕದಲ್ಲೇ ಇದ್ದ ವ್ಯಕ್ತಿ ಪಾಕಿಸ್ತಾನ್‌ ಝಿಂದಾಬಾದ್, ಪಾಕಿಸ್ತಾನ್‌ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಪಕ್ಕದಲ್ಲಿದ್ದ ಕೆಲ ಕಾರ್ಯಕರ್ತರು ಆತನ ಬಾಯಿಮುಚ್ಚಿಸಿರುವ ವಿಡಿಯೋ ವೈರಲ್‌ ಆಗಿದೆ” ಎಂದು ಟಿವಿ ಚಾನಲ್‌ ಗಳು ಸುಳ್ಳು ಸುದ್ದಿ ಹರಡಿವೆ. ಜೊತೆಗೆ ಬಿಜೆಪಿ ನಾಯಕರಿಂದ ಪ್ರತಿಕ್ರಿಯೆಯನ್ನೂ ಕೇಳಿವೆ. ಬಿಜೆಪಿ ನಾಯಕರು ವಿಧಾನ ಸೌಧ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಆದರೆ ವಾಸ್ತವದಲ್ಲಿ ಅಲ್ಲಿ ನಡೆದದ್ದೇ ಬೇರೆ. ನಾಸಿರ್‌ ಹುಸೇನ್‌ ಅವರ ಪಕ್ಕದಲ್ಲೇ ಇದ್ದ ವ್ಯಕ್ತಿ ‘ನಾಸೀರ್ ಸಾಬ್ ಝಿಂದಾಬಾದ್’ ಎಂದು ಘೋಷಣೆ ಕೂಗಿರುವುದು ಇನ್ನೊಂದು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸಿದೆ. ಅಭಿಮಾನಿಗಳು, ಜನರು, ಪತ್ರಕರ್ತರ ಮಧ್ಯೆ ಸಂಭ್ರಮಾಚರಣೆಯಲ್ಲಿ ಹೆಚ್ಚಿನ ಗುಂಪು ಸೇರಿದ್ದರಿಂದ ಅದು ಬೇರೆಯೇ ರೀತಿಯಲ್ಲಿ ವರದಿಯಾಗಿದೆ. ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮುಹಮ್ಮದ್‌ ಝುಬೈರ್‌ ಅವರೂ, ಈ ವೀಡಿಯೊ ವನ್ನು ಸ್ಲೋ ಮೋಷನ್‌ ನಲ್ಲಿ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಸ್ಪಷ್ಟವಾಗಿ ನಾಸಿರ್‌ ಸಾಬ್‌ ಝಿಂದಾಬಾದ್‌ ಎಂದು ಕೂಗುವುದು ಕೇಳಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News