ಸಹಪಾಠಿಗಳಿಂದ ಹೊಡೆತ ತಿಂದ ಬಾಲಕನ ಗುರುತು ಬಹಿರಂಗಪಡಿಸಿದ ಆರೋಪ: ಆಲ್ಟ್‌ ನ್ಯೂಸ್‌ ಸಹ-ಸ್ಥಾಪಕ ಮೊಹಮ್ಮದ್‌ ಝುಬೇರ್ ವಿರುದ್ಧ ಎಫ್‌ಐಆರ್‌

Update: 2023-08-28 09:23 GMT

ಮೊಹಮ್ಮದ್‌ ಝುಬೇರ್‌

ಹೊಸದಿಲ್ಲಿ: ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಶಿಕ್ಷಕಿಯ ಸೂಚನೆ ಮೇರೆಗೆ ಸಹಪಾಠಿಗಳಿಂತ ಹೊಡೆತ ತಿಂದ ಏಳು ವರ್ಷದ ಮುಸ್ಲಿಂ ಬಾಲಕನ ಗುರುತು ಬಹಿರಂಗಪಡಿಸಿದ್ದಕ್ಕಾಗಿ ಮುಝಫ್ಫರನಗರ್‌ ಪೊಲೀಸರು ಇಂದು ಆಲ್ಟ್‌ ನ್ಯೂಸ್‌ ಸಹ-ಸ್ಥಾಪಕ ಮೊಹಮ್ಮದ್‌ ಝುಬೇರ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಝುಬೇರ್‌ ಅವರ ವಿರುದ್ಧ ಬಾಲ ನ್ಯಾಯ ಕಾಯಿದೆಯ ಸೆಕ್ಷನ್‌ 74 ಅಡಿಯಲ್ಲಿ ಪ್ರಕರಣವನ್ನು ವಿಷ್ಣುದತ್ತ್‌ ಎಂಬ ವ್ಯಕ್ತಿ ದಾಖಲಿಸಿದ್ದ ದೂರಿನ ಅನ್ವಯ ದಾಖಲಿಸಲಾಗಿದೆ.

ಕಾನೂನಿನ ಪ್ರಕಾರ ಯಾವುದೇ ಸಂತ್ರಸ್ತ ಮಕ್ಕಳು ಅಥವಾ ಅಪರಾಧಗಳಿಗೆ ಸಾಕ್ಷಿಯಾದ ಮಕ್ಕಳ ಹೆಸರುಗಳನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಪರಾಧ ಸಾಬೀತಾದವರಿಗೆ ಆರು ತಿಂಗಳ ತನಕ ಜೈಲು ಶಿಕ್ಷೆ ಅಥವಾ ರೂ 2 ಲಕ್ಷ ತನಕ ದಂಡ ವಿಧಿಸಬಹುದಾಗಿದೆ.

ಘಟನೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಝುಬೇರ್‌ ಅವರು ಬಾಲಕನ ಗುರುತು ಬಹಿರಂಗಪಡಿಸಿದ್ದಾರೆಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಈ ಘಟನೆಯ ವೀಡಿಯೋವನ್ನು ಶೇರ್‌ ಮಾಡದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕನೂಂಗೊ ಸೂಚಿಸಿದ ನಂತರ ತಾವು ಈ ವೀಡಿಯೋ ತೆಗೆದುಹಾಕಿದ್ದಾಗಿ ಝುಬೇರ್‌ ಹೇಳಿದ್ದಾರೆ.

ತಮ್ಮನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್‌ ಮಾಡಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ. “ಈ ನಿರ್ದಿಷ್ಟ ವೀಡಿಯೋವನ್ನು ಹಲವು ಸುದ್ದಿ ಸಂಸ್ಥೆಗಳ ಸಹಿತ ಹಲವರು ಪೋಸ್ಟ್‌ ಮಾಡಿದ್ದರೂ ನನ್ನ ಹೆಸರು ಮಾತ್ರ ಎಫ್‌ಐಆರ್‌ನಲ್ಲಿದೆ. ಸಂತ್ರಸ್ತ ಬಾಲಕನ ಗುರುತು ಬಹಿರಂಗಪಡಿಸುವ ಹಾಗೂ ಆತ ತನ್ನ ಸಹಪಾಠಿಗಳನ್ನು ಆಲಂಗಿಸುವ ಕೆಲ ಇತರ ವೀಡಿಯೋಗಳಲ್ಲೂ ಆತನ ಗುರುತು ಬಹಿರಂಗಪಡಿಸಲಾಗಿದೆ,” ಎಂದು ಝುಬೇರ್‌ ಹೇಳಿದ್ದಾರಲ್ಲದೆ ಪೊಲೀಸರು ತಮ್ಮನ್ನು ಇನ್ನೂ ಸಂಪರ್ಕಿಸಿಲ್ಲ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News