ವಿದೇಶದಲ್ಲಿ ನೆಲೆಸಿರುವ ದಂಪತಿ ಭಾರತದ ಮಗು ದತ್ತು ಪಡೆಯಲು ಹೇಗ್ ಒಪ್ಪಂದದ ಅನುಸರಣೆ ಅಗತ್ಯ: ಹೈಕೋರ್ಟ್

Update: 2024-01-25 21:07 IST
ವಿದೇಶದಲ್ಲಿ ನೆಲೆಸಿರುವ ದಂಪತಿ ಭಾರತದ ಮಗು ದತ್ತು ಪಡೆಯಲು ಹೇಗ್ ಒಪ್ಪಂದದ ಅನುಸರಣೆ ಅಗತ್ಯ: ಹೈಕೋರ್ಟ್
  • whatsapp icon

ಬೆಂಗಳೂರು: ಭಾರತದ ಮಗುವನ್ನು ದತ್ತು ಪಡೆಯಲು ಹೇಗ್ ಒಪ್ಪಂದದ ಪ್ರಕಾರ ಅಂತರರಾಷ್ಟ್ರೀಯ ದತ್ತು ಸ್ವೀಕಾರ ನಿಯಮಗಳ ಕಾರ್ಯವಿಧಾನಗಳಿಗೆ ಅನುಗುಣವಾಗಿ ತಾವು ನೆಲೆಸುವ ದೇಶದಿಂದ ದೃಢೀಕರಣ ಪತ್ರ ಪಡೆಯಲು ಅರ್ಜಿ ಸಲ್ಲಿಸುವಂತೆ ವಿದೇಶದಲ್ಲಿ ನೆಲೆಸಿರುವ ಭಾರತೀಯ ದಂಪತಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಮಗು ದತ್ತು ಪಡೆದ ಬಳಿಕ ಮಕ್ಕಳ ರಕ್ಷಣಾ ಘಟಕದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡದ ಕ್ರಮ ಪ್ರಶ್ನಿಸಿ ಜರ್ಮನಿ ಫ್ರಾಂಕ್ಪರ್ಟ್‍ನಲ್ಲಿ ನೆಲೆಸಿರುವ ಭಾರತದ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಸೂಚನೆ ನೀಡಿದೆ.

ವಿದೇಶದಲ್ಲಿ ನೆಲೆಸಿರುವ ದಂಪತಿ ಭಾರತದ ಮಗುವನ್ನು ದತ್ತು ಪಡೆಯಬೇಕಾದರೆ ಹೇಗ್ ಸಮಾವೇಶದ ಒಪ್ಪಂದ 17ನೇ ಪರಿಚ್ಛೇದದ ಪ್ರಕಾರ, ದಂಪತಿ ದತ್ತು ಸ್ವೀಕರಿಸಿದ ಮಗುವಿನೊಂದಿಗೆ ಆ ದೇಶಕ್ಕೆ(ಜರ್ಮನಿ) ಪ್ರಯಾಣಿಸಲು ಹಾಗೂ ಶಾಶ್ವತವಾಗಿ ಅಲ್ಲಿ ನೆಲೆಸಲು ಅಧಿಕಾರ ಪಡೆಯಬೇಕಾಗುತ್ತದೆ. ಹೀಗಾಗಿ, ಈ ದತ್ತು ಸ್ವೀಕಾರ ಪ್ರಕ್ರಿಯೆಯನ್ನು ಭಾರತ ಮತ್ತು ಜರ್ಮನಿ ದೇಶಗಳ ಅಧಿಕಾರಿಗಳ ಒಪ್ಪಿಗೆ ಅತ್ಯಗತ್ಯ. ಎರಡೂ ರಾಷ್ಟ್ರಗಳ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಪೀಠ ತಿಳಿಸಿದೆ.

ಹೇಗ್ ಸಮಾವೇಶದ ಒಪ್ಪಂದದಂತೆ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2015ರ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸಲು ಕೇಂದ್ರ ಸರಕಾರ ಅಧಿಸೂಚನೆ ಮೂಲಕ ನಿಯಮಗಳನ್ನು ಹೊರಡಿಸಿದೆ. ಅದರಂತೆ ಮಗುವನ್ನು ವಿದೇಶಕ್ಕೆ ಅಥವಾ ಸಾಗರೋತ್ತರ ಭಾರತೀಯ ಇಲ್ಲವೇ ಅನಿವಾಸಿ ಭಾರತೀಯರ ನಿರೀಕ್ಷಿತ ದತ್ತು ಪೋಷಕರೊಂದಿಗೆ ಪಡೆಯಲು ಅನುಮತಿ ನೀಡಲು ಪ್ರಾಧಿಕಾರ ಪ್ರಮಾಣ ಪತ್ರ ಪಡೆದುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳು ತನ್ನ ಆದೇಶದಲ್ಲಿ ಹೇಳಿದ್ದಾರೆ.

ಜೊತೆಗೆ, ಅರ್ಜಿದಾರರು ಜರ್ಮನಿ ದೇಶದ ಸಕ್ಷಮ ಪ್ರಾಧಿಕಾರವನ್ನು ಸಂಪರ್ಕಿಸಬೇಕು. ಅವರ ಮೂಲಕ ಭಾರತದಲ್ಲಿನ ಅಧಿಕಾರಿಗಳಿಗೆ ಇ-ಮೇಲ್ ಮೂಲಕ ಸಂವಹನ ನಡೆಸಬೇಕು. ಅದಾದ 10 ದಿನಗಳಲ್ಲಿ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆದುಕೊಳ್ಳಬಹುದಾಗಿದೆ. ಆದರೆ, ಅರ್ಜಿದಾರರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಪರಿಣಾಮ ನಿರಾಕ್ಷೇಪಣಾ ಪತ್ರ ಲಭ್ಯವಾಗಿಲ್ಲ. ಈ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕವೂ ಎನ್‍ಒಸಿ ಲಭ್ಯವಾಗದಿದ್ದಲ್ಲಿ ಸೂಕ್ತ ಪ್ರಾಧಿಕಾರದ ಮುಂದೆ ಮನವಿ ಸಲ್ಲಿಸಲು ಅರ್ಜಿದಾರರ ಸ್ವಾತಂತ್ರ್ಯರಾಗಿರಲಿದ್ದಾರೆ ಎಂದು ಪೀಠ ಹೇಳಿತು.

ಜರ್ಮನಿಯಲ್ಲಿ ನೆಲೆಸಿರುವ ಬೆಂಗಳೂರು ಮೂಲದ ಯು.ಅಜಯ್ ಕುಮಾರ್ ಮತ್ತು ಅವರ ಪತ್ನಿ ಟಿ.ವಿ.ಮೈತ್ರಾ ಅವರು ಚಿಕ್ಕಬಳ್ಳಾಪುರದ ರಶ್ಮಿ ಎಂಬವರಿಂದ ಐದು ತಿಂಗಳ ಹೆಣ್ಣು ಮಗು ದತ್ತು ಪಡೆದಿದ್ದರು. ಚಿಕ್ಕಬಳ್ಳಾಪುರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 2023ರ ಮಾರ್ಚ್ 29ರಂದು ನೋಂದಾಯಿಸಿದ್ದರು. ಆದರೆ, ಮಗು ದತ್ತು ಪಡೆದಿರುವ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುವಂತೆ ಕೋರಿ ದಂಪತಿ ಹಲವು ಬಾರಿ ಮನವಿ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News