ಬಾಬಾ ಬುಡಾನ್ ದರ್ಗಾದ ಶಾಖಾದ್ರಿ ನಿವಾಸದ ಮೇಲೆ ಅರಣ್ಯ ಅಧಿಕಾರಿಗಳ ದಾಳಿ; ಚಿರತೆ, ಜಿಂಕೆ ಚರ್ಮ ವಶಕ್ಕೆ
ಚಿಕ್ಕಮಗಳೂರು, ಅ.27: ಬಾಬಾ ಬುಡಾನ್ ದರ್ಗಾದ ಶಾಖಾದ್ರಿ ಸೈಯದ್ ಗೌಸ್ ಮೊಹಿನುದ್ದೀನ್ ಅವರ ನಿವಾಸದ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಚಿರತೆ ಹಾಗೂ ಜಿಂಕೆ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.
ಶಾಖಾದ್ರಿ ಗೌಸ್ ಮೊಹಿದ್ದೀನ್ ಅವರ ಕುಟುಂಬಸ್ಥರು ಹುಲಿ ಚರ್ಮದ ಮೇಲೆ ಕುಳಿತಿದ್ದ ಪೊಟೊಗಳು ವೈರಲ್ ಆದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶುಕ್ರವಾರ ಬೆಳಗ್ಗೆ ಶಾಖಾದ್ರಿ ಮನೆಗೆ ದಾಳಿ ನಡೆಸಲು ಮುಂದಾಗಿದ್ದರು. ಆದರೆ ಶಾಖಾದ್ರಿ ಗೌಸ್ ಮಹಿದ್ದೀನ್ ಬೆಂಗಳೂರಿಗೆ ತೆರಳಿದ್ದರಿಂದ ಮನೆಯ ಒಳಗೆ ತೆರಳಲು ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಆದರೆ ಶಾಖಾದ್ರಿ ತಮ್ಮ ಮನೆಯ ಬೀಗದ ಕೀ ಅನ್ನು ಬಸ್ ಮೂಲಕ ಚಿಕ್ಕಮಗಳೂರಿಗೆ ಕಳುಹಿಸಿದ್ದು, ರಾತ್ರಿ 7.30ಕ್ಕೆ ಈ ಕೀ ಪಡೆದ ಅರಣ್ಯಾಧಿಕಾರಿಗಳು ನಗರದ ಮಾರ್ಕೆಟ್ ರಸ್ತೆಯಲ್ಲಿದ್ದ ಶಾಖಾದ್ರಿ ಮನೆಯ ಬೀಗ ತೆಗದು ಹುಲಿ ಚರ್ಮಕ್ಕಾಗಿ ಪರಿಶೀಲನೆ ನಡೆಸಿದ್ದರು. ಮನೆಯಲ್ಲಿ ಇರಿಸಲಾಗಿದ್ದ ಚಿರತೆ ಹಾಗೂ ಜಿಂಕೆ ಚರ್ಮವನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ.
ಶಾಖಾದ್ರಿ ಕುಟುಂಬದ ಹಿರಿಯರು ವನ್ಯಜೀವಿಯೊಂದರ ಚರ್ಮದ ಹಾಸಿನ ಮೇಲೆ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಶ್ರೀರಾಮಸೇನೆ ಮುಖಂಡರು ದೂರು ನೀಡಿದ್ದರು.
ಚಿರತೆ, ಜಿಂಕೆಯ ಚರ್ಮವನ್ನು ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಸಿಬ್ಬಂದಿ, ಚರ್ಮಗಳನ್ನು ಎಫ್ ಎಸ್ ಎಲ್ ಪರೀಕ್ಷೆಗೆ ಕಳಿಸಲು ಮುಂದಾಗಿದ್ದಾರೆ. ಕಳೆದ 10ಗಂಟೆಯಿಂದ ಕಾದು ಕುಳಿತು ಸಿಬ್ಬಂದಿ ಚಿರತೆ ಚರ್ಮ ಮತ್ತು ಜಿಂಕೆ ಚರ್ಮ ವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಚರ್ಮ ವನ್ನು ಇಲಾಖೆಯ ಅನುಮತಿ ಪಡೆದು ಮನೆಯಲ್ಲಿ ಇರಿಸಿಕೊಳ್ಳಲಾಗಿದೆಯೋ ಅಥವಾ ಅಕ್ರಮವಾಗಿ ಇಟ್ಟುಕೊಳ್ಳಲಾಗಿತ್ತೋ ಎಂಬುದು ಅಧಿಕಾರಿಗಳ ತನಿಖೆಯಿಂದ ತಿಳಿದು ಬರಬೇಕಿದೆ.