ಸರಕಾರಿ ಗೌರವದೊಂದಿಗೆ ನೆರವೇರಿದ ಇಸ್ರೋ ಮಾಜಿ ಅಧ್ಯಕ್ಷ ಡಾ. ಕಸ್ತೂರಿರಂಗನ್ ಅಂತ್ಯಕ್ರಿಯೆ

Update: 2025-04-27 21:33 IST
ಸರಕಾರಿ ಗೌರವದೊಂದಿಗೆ ನೆರವೇರಿದ ಇಸ್ರೋ ಮಾಜಿ ಅಧ್ಯಕ್ಷ ಡಾ. ಕಸ್ತೂರಿರಂಗನ್ ಅಂತ್ಯಕ್ರಿಯೆ
  • whatsapp icon

ಬೆಂಗಳೂರು: ರವಿವಾರ ನಗರದಲ್ಲಿರುವ ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ಬಾಹ್ಯಾಕಾಶ ವಿಜ್ಞಾನಿ ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್(84) ಪ್ರಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸರಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.

ಅವರು ಶುಕ್ರವಾರದಂದು(ಎ.25) ತಮ್ಮ ನಿವಾಸದಲ್ಲಿ ನಿಧನರಾಗಿದ್ದರು. ಕಸ್ತೂರಿ ರಂಗನ್ ಅವರ ಪಾರ್ಥಿವ ಶರೀರವನ್ನು ರವಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನದ ವರೆಗೆ ಇಲ್ಲಿನ ಸಿ.ವಿ.ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಧಮೇರ್ಂದ್ರ ಪ್ರಧಾನ್, ಇಸ್ರೋ ಮಾಜಿ ಅಧ್ಯಕ್ಷ ಸೋಮನಾಥ್, ಕೆ. ಶಿವನ್ ಹಾಗೂ ಕಿರಣ್ ಕುಮಾರ್ ಸೇರಿದಂತೆ ಇತರೆ ಗಣ್ಯರು ಆಗಮಿಸಿದ್ದರು. ಸರಕಾರ ಆದೇಶದ ಮೇರೆಗೆ ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸೂಚಿಸಲಾಯಿತು.

ವಿಜ್ಞಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ:

‘ಇಸ್ರೋ ಮಾಜಿ ಅಧ್ಯಕ್ಷ ಡಾ. ಕಸ್ತೂರಿ ರಂಗನ್ ನಿಧನದಿಂದ ದೇಶಕ್ಕೆ ಅದರಲ್ಲೂ ವಿಜ್ಞಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಕಸ್ತೂರಿ ರಂಗನ್ ದೇಶ ಕಂಡಂತ ಹೆಸರಾಂತ ವಿಜ್ಞಾನಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ದೀರ್ಘಕಾಲ ಇಸ್ರೋ ಅಧ್ಯಕ್ಷರಾಗಿದ್ದವರು. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಅವರನ್ನು ನಾವು ಮರೆಯಲು ಸಾಧ್ಯವಿಲ್ಲ. ರಾಜ್ಯ ಸರಕಾರ ಕೊಡುವ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.

-ಸಿದ್ದರಾಮಯ್ಯ, ಮುಖ್ಯಮಂತ್ರಿ

‘ನಾಡು ಮತ್ತು ಕಾಡಿನ ಸಂಪತ್ತು ಉಳಿಯಲು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡದ್ದ ಕಸ್ತೂರಿ ರಂಗನ್, ಭಾರತದ ಹಾಗೂ ಪ್ರಪಂಚದ ಶ್ರೇಷ್ಠ ವಿಜ್ಞಾನಿಯಾಗಿದ್ದಾರೆ. ಅವರು ಜ್ಞಾನ ಆಯೋಗದ ಅಧ್ಯಕ್ಷರಾಗಿ, ರಾಜ್ಯಸಭಾ ಸದಸ್ಯರಾಗಿ ಸಮಾಜಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಸಾವು ಖಚಿತ, ಆದರೆ ನಾವು ಏನು ಕೊಡುಗೆಗಳನ್ನು ಬಿಟ್ಟು ಹೋಗುತ್ತೇವೆ ಎನ್ನುವುದು ಮುಖ್ಯ. ವಿಜ್ಞಾನಿ ಡಾ. ಕಸ್ತೂರಿ ರಂಗನ್ ಅವರ ನಿಧನದಿಂದ ಅಪಾರ ಜ್ಞಾನ ಸಂಪತ್ತನ್ನು ಕಳೆದುಕೊಂಡಿದ್ದೇವೆ. ಇವರ ಆತ್ಮಕ್ಕೆ ಶಾಂತಿ ದೊರಕಲಿ’

-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ


Delete Edit


 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News