ನಾಳೆಯಿಂದ(ಎ.29) ಎರಡನೇ ಹಂತದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ
ಬೆಂಗಳೂರು : ರಾಜ್ಯಾದ್ಯಂತ 2023-24ನೆ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2(ಎರಡನೆ ಹಂತದ ಪರೀಕ್ಷೆ) ನಾಳೆಯಿಂದಎ.29) ನಡೆಯಲಿದ್ದು, 1,49,300 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯು 301 ಕೇಂದ್ರಗಳಲ್ಲಿ ನಡೆಯಲಿದೆ.
ಪರೀಕ್ಷೆಗೆ ನೋಂದಣಿಯಾದ 1,49,300 ವಿದ್ಯಾರ್ಥಿಗಳ ಪೈಕಿ, 84,933 ಬಾಲಕರು, 64,367 ಬಾಲಕಿಯರಿದ್ದಾರೆ. ಕಲಾ ವಿಭಾಗದಲ್ಲಿ 52,492, ವಾಣಿಜ್ಯ ವಿಭಾಗದಲ್ಲಿ 39,427, ವಿಜ್ಞಾನ ವಿಭಾಗದಲ್ಲಿ 57,381 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.
32,848 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ತೆಗೆದ ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ತೆಗೆಯಲು ನೋಂದಣಿ ಮಾಡಿಕೊಂಡಿದ್ದಾರೆ. 27,092 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ.
ಪಿಯುಸಿ ಪರೀಕ್ಷೆ-1ರಲ್ಲಿ ಪಾಸಾಗಲು ಬೇಕಾಗಿದ್ದ ಅಂಕಗಳನ್ನು ತೆಗೆಯದಿರುವ 89,221 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಂಡಿದ್ದಾರೆ. ಶೇ.75ರಷ್ಟು ಹಾಜರಾತಿ ಇಲ್ಲದೆ 17 ವರ್ಷ ತುಂಬಿದ 139 ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಂಡಿದ್ದಾರೆ.
ವೇಳಾಪಟ್ಟಿ: ಎ.29ರಂದು ಕನ್ನಡ, ಅರೇಬಿಕ್, ಎ.30ರಂದು ಇತಿಹಾಸ, ಭೌತಶಾಸ್ತ್ರ ಪರೀಕ್ಷೆಗಳು, ಮೇ 2ರಂದು ಇಂಗ್ಲೀಷ್, ಮೇ 3ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಮೇ 4 ಭೂಗೋಳಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ ಪರೀಕ್ಷೆಗಳು ನಡೆಯಲಿವೆ.
ಮೇ 9ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಗೃಹವಿಜ್ಞಾನ ಮತ್ತು ಶಿಕ್ಷಣ ಶಾಸ್ತ್ರ ಪರೀಕ್ಷೆಗಳು, ಮೇ 11 ಸಮಾಜಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ. ಮೇ 13ರಂದು ಅರ್ಥಶಾಸ್ತ್ರ, ಮೇ 14ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ ಹಾಗೂ ಮೇ 15ರಂದು ಹಿಂದಿ, ಮೇ 16ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಮತ್ತು ಫ್ರೆಂಚ್ ಪರೀಕ್ಷೆಗಳು ನಡೆಯಲಿವೆ.