ʻಕೋವಿಡ್ʻ ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಿರಾಕರಿಸುವಂತಿಲ್ಲ: ರಾಜ್ಯ ಸರಕಾರ ಸುತ್ತೋಲೆ
Update: 2024-01-11 14:44 GMT
ಬೆಂಗಳೂರು: ಕೋವಿಡ್ ಸೋಂಕಿನಿಂದ ಮರಣ ಹೊಂದಿದವರ ಅಂತ್ಯಕ್ರಿಯೆಯನ್ನು ನಡೆಸಲು ಬಿಬಿಎಂಪಿ ಹಾಗೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಚಿತಾಗಾರ, ಸ್ಮಶಾನ ಮತ್ತು ರುದ್ರಭೂಮಿಗಳಲ್ಲಿನ ಸಿಬ್ಬಂದಿಯು ನಿರಾಕರಿಸುವಂತ್ತಿಲ್ಲ ಎಂದು ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.
ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅಂದರೆ, ಮಾಸ್ಕ್, ಗ್ಲೌವ್ಸ್ ಹಾಗೂ ಪಿಪಿಇ ಕಿಟ್ ಧರಿಸುವುದು ಮತ್ತು ಅಂತ್ಯಕ್ರಿಯೆ ನಡೆಸಿದ ನಂತರ ಅವುಗಳನ್ನು ಮಾರ್ಗಸೂಚಿಯಂತೆ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ.
ಈ ನಿಟ್ಟಿನಲ್ಲಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಡಳಿತಗಳು ಅಗತ್ಯ ಕ್ರಮಕೈಗೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಿದೆ.
ಆತಂಕ ಬೇಡ: ಕರ್ನಾಟಕದಲ್ಲಿ ಕೊವಿಡ್ ಸೋಂಕು ನಿಯಂತ್ರಣದಲ್ಲಿದೆ. ಈ ಬಗ್ಗೆ ರಾಜ್ಯದ ಜನ ಆತಂಕಕ್ಕೊಳಗಾಗಬಾರದು. ತೀವ್ರ ಸೋಂಕಿನ ಲಕ್ಷಣ ಇರುವವರಿಗೆ ಪರೀಕ್ಷೆಗೆ ಒಳಪಡಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.