ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ | ಕೇಂದ್ರ ಸರಕಾರ ದೃಢ ನಿರ್ಧಾರ ತೆಗೆದುಕೊಳ್ಳಲಿ : ಜಿ.ಪರಮೇಶ್ವರ್
ಬೆಂಗಳೂರು: ದೇಶದಲ್ಲಿ ಬಹಳ ಶಕ್ತಿಯುತ, ಪರಿಣಾಮಕಾರಿಯಾದ ಗುಪ್ತಚರ ವ್ಯವಸ್ಥೆ ಇದ್ದರೂ ಸಹ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ಹೇಗಾಯ್ತು ಎಂಬುದು ಅತಿದೊಡ್ಡ ಪ್ರಶ್ನೆಯಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸುತ್ತೇನೆ. ಪ್ರಾಣ ಕಳೆದುಕೊಂಡಿರುವ 27ಕ್ಕೂ ಹೆಚ್ಚು ಜನರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಕರ್ನಾಟಕದ ಇಬ್ಬರು ಹತ್ಯೆಯಾಗಿದ್ದಾರೆ ತಿಳಿಸಿದರು.
ನಮ್ಮಲ್ಲಿ ಬಹಳ ಪರಿಣಾಮಕಾರಿಯಾದ, ಶಕ್ತಿಯುತವಾದ ಮಿಲಿಟರಿ ಗುಪ್ತಚರ ವ್ಯವಸ್ಥೆ ಇದೆ. ಅನೇಕ ಸಂದರ್ಭಗಳಲ್ಲಿ ಗುಪ್ತಚರ ಸಂಸ್ಥೆ ಒಳ್ಳೆಯ ಕೆಲಸವನ್ನು ಮಾಡಿದೆ. ಈ ದಾಳಿಯನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಪುಲ್ವಾಮಾ ದಾಳಿ ನಂತರ ಇಲ್ಲಿಯವರೆಗೆ ಇಂತಹ ದುರ್ಘಟನೆಗಳು ನಡೆದಿರಲಿಲ್ಲ. ಹಿಂದೂಗಳನ್ನು ಗುರಿ ಮಾಡಿದ್ದಾರೆ. ದಾಳಿ ವೇಳೆ 'ನೀನು ಹಿಂದು ಅದಕ್ಕಾಗಿ ಕೊಲ್ಲುತ್ತಿದ್ದೇವೆ' ಎಂದು ಭಯೋತ್ಪಾದಕರು ಹೇಳಿಕೊಂಡಿರುವುದು ನಿಜಕ್ಕೂ ಆತಂಕಕಾರಿ ವಿಚಾರ. ಇದು ಹೊಸದು ಅಲ್ಲ ಅನ್ನಿಸುತ್ತದೆ. ದಾಳಿ ಮಾಡುವಾಗ ಅನೇಕ ಸಂದರ್ಭದಲ್ಲಿ ಆ ಮಾತುಗಳನ್ನು ಹೇಳಿದ್ದಾರೆ. ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಸೂಕ್ತವಾದ ಕ್ರಮವನ್ನು ಮುಲಾಜಿಲ್ಲದೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ನಾವೇ ಮಾಡಿರುವುದಾಗಿ ಸಂಘಟನೆಗಳು ಹೇಳಿಕೊಂಡಿವೆ. ಆ ಸಂಘಟನೆ ಎಲ್ಲಿವೆ. ಅವರ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು. ಗುಪ್ತಚರ ವೈಫಲ್ಯ ಆದ ಮೇಲೆ ಭದ್ರತಾ ವೈಫಲ್ಯವೂ ಆಗಲೇಬೇಕು. ಗುಪ್ತಚರ ವ್ಯವಸ್ಥೆಯ ಕಣ್ತಪ್ಪಿಸಿ ಉಗ್ರರು ಬಂದಿದ್ದಾರೆ. ಜನರನ್ನು ಕರೆದು, ಬಟ್ಟೆ ತೆಗೆಸಿ ಬಹಳ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ಕೇಂದ್ರ ಸರಕಾರ ಕೆಲ ಗಂಭೀರವಾದ, ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಕಾಶ್ಮೀರದಲ್ಲಿ ಭದ್ರತೆ ಕಡಿಮೆಯಾಗಿತ್ತು. ಶಾಂತಿ ನೆಲೆಸಿದ್ದರಿಂದ ಭದ್ರತೆಯನ್ನು ವಾಪಸ್ ಪಡೆದಿದ್ದರು ಎಂಬುದರ ಬಗ್ಗೆ ನಮಗೆ ನಿರ್ಧಿಷ್ಟವಾದ ಮಾಹಿತಿಗಳು ಇಲ್ಲ. ಊಹಾಪೋಹಗಳ ಮಾತನಾಡಲು ಆಗುವುದಿಲ್ಲ. ಭದ್ರತೆ ದೃಷ್ಟಿಯಲ್ಲಿ ನಾವು ಫೇಲ್ ಆಗಿದ್ದೇವೆ. ಅದಕ್ಕೆ ಕ್ರಮ ತೆಗೆದುಕೊಳ್ಳವೇಕು. ರಾಜ್ಯ ಸರಕಾರದಿಂದ ಮುಖ್ಯಮಂತ್ರಿಯವರು ವಿಶೇಷ ತಂಡವನ್ನು ಕಾಶ್ಮೀರಕ್ಕೆ ಕಳಿಸಿದ್ದಾರೆ. ಸಚಿವರಾದ ಸಂತೋಷ್ ಲಾಡ್ ಅವರು ಸ್ಥಳಕ್ಕೆ ಹೋಗಿ ಮಾಹಿತಿ ತೆಗೆದುಕೊಂಡ ಮೇಲೆ ಕನ್ನಡಿಗರ ಬಗ್ಗೆ ಮಾಹಿತಿ ಸಿಗುತ್ತದೆ. ಅವರಿಗೆ ಅಗತ್ಯ ರಕ್ಷಣೆ ನೀಡಲು ಸರಕಾರ ಕ್ರಮ ತೆಗೆದುಕೊಂಡಿದೆ ಎಂದು ಹೇಳಿದರು.