ಗಿಗ್ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಂಡಳಿ ರಚನೆಗೆ ಸಂಪುಟ ಸಭೆ ಅಸ್ತು

Update: 2025-04-11 20:02 IST
ಗಿಗ್ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಂಡಳಿ ರಚನೆಗೆ ಸಂಪುಟ ಸಭೆ ಅಸ್ತು

ಮುಖ್ಯಮಂತ್ರಿ ಸಿದ್ದರಾಮಯ್ಯ

  • whatsapp icon

ಬೆಂಗಳೂರು: ಕರ್ನಾಟಕ ಪ್ಲಾಟ್‌ಫಾರಂ ಆಧಾರಿತ ಗಿಗ್‌ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಂಡಳಿ ರಚನೆಗೆ ಇಂದು ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಅನುಮೋದನೆ ದೊರೆತಿದೆ. ಸಚಿವ ಸಂಪುಟವು 21 ವಿಷಯಗಳನ್ನು ಪರಿಗಣಿಸಿ ಹಲವು ನಿರ್ಣಯಗಳನು ತೆಗೆದುಕೊಂಡಿದೆ.

ಕರ್ನಾಟಕ ಪ್ಲಾಟ್‌ಫಾರಂ ಆಧಾರಿತ ಗಿಗ್‌ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಂಡಳಿಯ ಮೂಲಕ ನೋಂದಾಯಿತ ಕಾರ್ಮಿಕರಿಗೆ ಸಾಮಾಜಿಕ ಮತ್ತು ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ. ಮಂಡಳಿಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿರಲಿದೆ. ಕಾರ್ಮಿಕ ಇಲಾಖೆಯ ಸಚಿವರು ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.

ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚೆ

ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸುವ ಸಂಬಂಧ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಮತ್ತು ಇತರ ಸಚಿವರು ಭಾಗಿಯಾಗಿದ್ದರು.

ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿಯ ನಿಟ್ಟಿನಲ್ಲಿ ಈ ಮಸೂದೆಯು ಮಹತ್ವದಾಗಿದ್ದು, ಲಕ್ಷಾಂತರ ಕಾರ್ಮಿಕರಿಗೆ ಸಹಾಯವಾಗಲಿದೆ.

ಮಂಡಳಿಯ ಕಾರ್ಯಗಳು

ಗಿಗ್ ಕಾರ್ಮಿಕರ ನೋಂದಣಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಗ್ರಿಗೇಟರ್‌ಗಳು ಅಥವಾ ಪ್ಕಾಟ್‌ಫಾರಂಗಳ ನೋಂದಣಿ ಖಚಿತಪಡಿಸಿಕೊಳ್ಳುವುದು, ಕಲ್ಯಾಣ ಶುಲ್ಕ ಸರಿಯಾಗಿ ಸಂಗ್ರಹಿಸಲಾಗುತ್ತಿದೆ ಎಂಬುದನ್ನು ಪ್ರಮಾಣೀಕರಿಸುವುದು, ಸಾಮಾನ್ಯ ಮತ್ತು ನಿರ್ದಿಷ್ಟ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವುದು ಮತ್ತಿತರರ ಕಾರ್ಯಗಳು ಮುಖ್ಯವಾಗಿವೆ. ಪ್ಲಾಟ್‌ ಫಾರಂ ಆಧಾರಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಮೇಲುಸ್ತವಾರಿ, ರಾಜ್ಯ ಸರ್ಕಾರವು ರೂಪಿಸಿದ ಯೋಜನೆಗಳ ಆಧಾರದ ಮೇಲೆ ಸೌಲಭ್ಯಗಳು ಕಾರ್ಮಿಕರಿಗೆ ತಲುಪುತ್ತಿವೆಯೇ ಎಂಬುದನ್ನು ಮಂಡಳಿ ಖಚಿತಪಡಿಸಲಿದೆ.

ಗಿಗ್‌ ಕಾರ್ಮಿಕರಿಗೆ ನಿಧಿ

ಗಿಗ್ ಕಾರ್ಮಿಕರ ಅನುಕೂಲಕ್ಕಾಗಿ ಕರ್ನಾಟಕ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿ ಸ್ಥಾಪಿಸಲಾಗುವುದು. ಇದರ ಮೂಲಕ ಸಾಮಾಜಿಕ ಸೇವಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದರಲ್ಲಿ ಸಂಬಂಧಿತ ಪ್ಲಾಟ್‌ಫಾರಂ ಆಧಾರಿತ ವೇದಿಕೆ ಮತ್ತು ರಾಜ್ಯ ಸರ್ಕಾರದ ಕೊಡುಗೆ ಸೇರಿರುತ್ತದೆ.

ಕ್ಷೇಮಾಭಿವೃದ್ಧಿ ಶುಲ್ಕ

ಅಗ್ರಿಗೇಟರ್‌ ಅಥವಾ ಪ್ಲಾಟ್‌ಫಾರಂ ಆಧಾರಿತ ಸಂಸ್ಥೆಗಳಿಂದ ಕ್ಷೇಮಾಭಿವೃದ್ಧಿ ನಿಧಿಯನ್ನು ಸಂಗ್ರಹಿಸಲಾಗುತ್ತದೆ. ಇದನ್ನು ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ವರ್ಕರ್ಸ್ ವೆಲ್‌ಫೇರ್ ಶುಲ್ಕ ಎಂದು ಕರೆಯಲಾಗುತ್ತದೆ. ಅದು ಶೇ 1 ಕ್ಕಿಂತ ಕಡಿಮೆಯಿಲ್ಲದ ಶೇ 5 ಕ್ಕಿಂತ ಹೆಚ್ಚಿಲ್ಲದಂತೆ ಸಂಗ್ರಹಿಸಲಾಗುವುದು.

ಸಂತೋಷ್‌ ಲಾಡ್‌ ಅವರ ಪರಿಶ್ರಮ

ಈ ಮಂಡಳಿಯನ್ನು ಆರಂಭಿಸಲು ಕಾರ್ಮಿಕ ಸಚಿವರಾದ ಸಂತೋಷ್‌ ಲಾಡ್‌ ಅವರು ಮಹತ್ವದ ಪಾತ್ರ ವಹಿಸಿದ್ದು, ಕಾರ್ಮಿಕರ ಕಲ್ಯಾಣಕ್ಕಾಗಿ ಅವರು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವು ಮಂಡಳಿಯ ಮೂಲಕ ಸಾಮಾಜಿಕ ಸೇವಾ ಸೌಲಭ್ಯಗಳನ್ನು ನೀಡುತ್ತಿದ್ದು ಇದೀಗ ಈ ಸಾಲಿಗೆ ಗಿಗ್‌ ಕಾರ್ಮಿಕರ ಕಲ್ಯಾಣ ಮಂಡಳಿಯೂ ಸೇರಲಿದೆ.

ಅಮೆಝಾನ್, ಫ್ಲಿಪ್ ಕಾರ್ಟ್, ಜೆಪ್ಪೊ, ಬ್ಲಿಂಕಿಟ್‌ ಸೇರಿದಂತೆ ಪ್ಲಾಟ್‌ ಪಾರಂ ಆಧಾರಿತ ಸಂಸ್ಥೆಗಳಲ್ಲಿ ಅಸಂಖ್ಯಾತ ಕಾರ್ಮಿಕರು ಕೆಲಸ ಮಾಡುತಿದ್ದು, ಇವರಿಗಾಗಿ ಈಗಾಗಲೇ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈಗ ಮಂಡಳಿ ರಚನೆಯಾದರೆ ಇನ್ನಷ್ಟು ಅನುಕೂಲವಾಗಲಿದೆ ಎನ್ನಲಾಗುತ್ತಿದೆ. ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲು ಸರಳವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News