‘ಜನತಾ ದರ್ಶನ’ಕ್ಕೆ ಉತ್ತಮ ಪ್ರತಿಕ್ರಿಯೆ; ರಾಜ್ಯಾದ್ಯಂತ 6,684 ಅಹವಾಲು, ಮನವಿ ಸ್ವೀಕೃತ

Update: 2023-09-25 17:59 GMT

ಬೆಂಗಳೂರು, ಸೆ. 25: ಮುಖ್ಯಮಂತ್ರಿ ಸಿದ್ದರಾಮಯ್ಯರ ಸೂಚನೆಯ ಹಿನ್ನೆಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲ ಜಿಲ್ಲೆಗಳಲ್ಲಿ ನಡೆದ ‘ಜನತಾ ದರ್ಶನ’ಕ್ಕೆ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ಮತ್ತು ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿದ್ದು, ಎರಡು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲೂ ಜನತಾದರ್ಶನ ಯಶಸ್ವಿಯಾಗಿ ನಡೆದಿದೆ.

ರಾಜ್ಯಾದ್ಯಂತ 6,684 ಅಹವಾಲುಗಳು ಸ್ವೀಕೃತಗೊಂಡು 21ಕ್ಕೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ. ಉಳಿದಂತೆ 6,663 ಅರ್ಜಿ, ಅಹವಾಲುಗಳು ದಾಖಲಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ರವಾನೆಯಾಗಿವೆ.

ಸಿಂಹಪಾಲು: ಸ್ವೀಕರಿಸಲಾಗಿರುವ ಅಹವಾಲುಗಳಲ್ಲಿ ಕಂದಾಯ ಇಲಾಖೆಯದ್ದೆ ಸಿಂಹಪಾಲು ಆಗಿವೆ. ಸಂಜೆ 6 ಗಂಟೆಯ ವರೆಗೂ ಸಿಕ್ಕಿರುವ ಅಂಕಿ-ಅಂಶಗಳ ಪ್ರಕಾರ 2,100ಕ್ಕೂ ಹೆಚ್ಚು ಅಹವಾಲುಗಳು ಕಂದಾಯ ಇಲಾಖೆಗೆ ಸೇರಿದ್ದಾಗಿವೆ. ನಂತರದ ಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೇರಿದ್ದಾಗಿದ್ದ ಸಾವಿರಕ್ಕೂ ಅಧಿಕ ಅಹವಾಲುಗಳು ಈ ಇಲಾಖೆಗೆ ಸಂಬಂಧಿಸಿದ್ದಾಗಿವೆ. 3ನೆ ಅತಿಹೆಚ್ಚು ಅಹವಾಲುಗಳು ನಗರಾಡಳಿತ ಇಲಾಖೆಕ್ಕೆ ಸಂಬಂಧಿಸಿದ್ದಾಗಿವೆ ಎಂದು ತಿಳಿಸಲಾಗಿದೆ.

ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎದುರಿಗೆ ಅತಿ ಹೆಚ್ಚು ಸಮಸ್ಯೆಗಳು ಮತ್ತು ಅಹವಾಲುಗಳು ಸಲ್ಲಿಕೆಯಾಗಿವೆ. ಉಳಿದಂತೆ ಜಿಲ್ಲಾಧಿಕಾರಿಗಳ ಮುಂದೆ ಸಲ್ಲಿಕೆಯಾದವುಗಳಾಗಿವೆ. ಜಿಲ್ಲಾ ರಕ್ಷಣಾಧಿಗಳ ಎದುರಿಗೆ ಕೆಲವು ಜಿಲ್ಲೆಗಳನ್ನು ಹೊರತು ಪಡಿಸಿದರೆ ಹೆಚ್ಚಿನ ಕಡೆ ಅತಿಕಡಿಮೆ ಅಹವಾಲುಗಳು ಸಲ್ಲಿಕೆ ಆಗಿರುವುದು ಆಶ್ಚರ್ಯದ ಜತೆಗೆ ವಿಶ್ಲೇಷಣೆ ಮಾಡಬೇಕಾದ ಸಂಗತಿಯಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಹವಾಲುಗಳು ದಾಖಲಾಗಿವೆ. 774 ಅಹವಾಲುಗಳ ಮೂಲಕ ಹಾಸನ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, 432ಅಹವಾಲುಗಳ ಮೂಲಕ ಹಾಸನ 2ನೆ ಸ್ಥಾನದಲ್ಲಿ, 423 ಅಹವಾಲುಗಳ ಮೂಲಕ ಕೋಲಾರ ಜಿಲ್ಲೆ 3ನೆ ಸ್ಥಾನದಲ್ಲಿದೆ. ಒಟ್ಟು ಅರ್ಜಿ ರೂಪದಲ್ಲಿ ಬಂದ ಅಹವಾಲುಗಳನ್ನು ದಾಖಲಿಸಿಕೊಳ್ಳುವ ಮತ್ತು ಸ್ಥಳದಲ್ಲೇ ಪರಿಹಾರಕ್ಕೆ ಪ್ರಕ್ರಿಯೆ ಒಂದು ಕಡೆ ನಡೆದಿದೆ. ಮತ್ತೊಂದು ಕಡೆ ಅರ್ಜಿ ಇಲ್ಲದೆ ಮೌಖಿಕವಾಗಿ ಬಂದ ಅಹವಾಲುಗಳನ್ನೂ ದಾಖಲಿಸಿಕೊಳ್ಳುವ ಜತೆಗೆ ಸ್ಥಳದಲ್ಲೆ ಪರಿಹಾರ ಒದಗಿಸಲಾಗಿದೆ.

 

ಮೌಖಿಕವಾಗಿ ದೂರು ಕೊಡಲು ಬಂದವರನ್ನು ಕೂರಿಸಿ ಅಧಿಕಾರಿ ಮತ್ತು ಸಿಬ್ಬಂದಿಯೇ ಅಹವಾಲುಗಳನ್ನು ಬರೆದು, ಬಳಿಕ ಅದನ್ನು ಓದಿಹೇಳಿ ಅರ್ಜಿದಾರರಿಂದ ಸಹಿ ಪಡೆದು ದಾಖಲಿಸಿಕೊಳ್ಳುವ ಪ್ರಯತ್ನಗಳೂ ನಡೆದಿವೆ.

‘ರಾಜ್ಯಾದ್ಯಂತ ಏಕ ಕಾಲಕ್ಕೆ ನಡೆಸಿದ ಜನತಾ ದರ್ಶನ ನಮಗೂ ಮೊದಲ ಅನುಭವ. ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ರೀತಿಯ ಪ್ರತಿಕ್ರಿಯೆ ಸಾರ್ವಜನಿಕರಿಂದ ಸಿಕ್ಕಿದೆ. ಅಧಿಕಾರಿಗಳ ಸ್ಪಂದನೆ ಸಮಾಧಾನಕರವಾಗಿದೆ. ಇವತ್ತಿನ ಅನುಭವದ ಹಿನ್ನೆಲೆಯಲ್ಲಿ ಮುಂದಿನ ಜನತಾ ದರ್ಶನದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನ ಮಾಡುತ್ತೇವೆ ಎನ್ನುವ ಅಭಿಪ್ರಾಯಗಳು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಿಂದ ವ್ಯಕ್ತವಾಗಿದೆ.

-ಅನಿವಾರ್ಯ ಕಾರಣಗಳಿಂದ ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿಂದು ಜನತಾ ದರ್ಶನ ನಡೆಯಲಿಲ್ಲ. ಬೆಳಗಾವಿಯಲ್ಲಿ ನಾಳೆ (ಸೆ.26ರ ಮಂಗಳವಾರ) ನಡೆಯಲಿದೆ.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News