ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ | ಮುಂದೇನಾಗಬಹುದು ಎಂದು ತಿಳಿಸಿದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು
ಬೆಂಗಳೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಿಚಾರಣೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ವಕೀಲ ಟಿ.ಜೆ.ಅಬ್ರಹಾಂ ಅವರ ದೂರಿನ ಹಿನ್ನೆಲೆಯಲ್ಲಿ ಸಿಎಂ ವಿರುದ್ದದ ವಿಚಾರಣೆಗೆ ಅನುಮತಿ ನೀಡಲಾಗಿದೆ.
ಜೂನ್ 26 ರಂದು ಟಿ.ಜೆ.ಅಬ್ರಹಾಂ ರಾಜ್ಯಪಾಲರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಜೂ.27ರಂದು ರಾಜ್ಯಪಾಲರು ಸಿಎಂಗೆ ಶೋಕಾಸ್ ನೋಟಿಸ್ ನೀಡಿದ್ದರು. ಈ ಶೋಕಾಸ್ ನೋಟಿಸ್ ಸರಿಯಲ್ಲ. ಅದನ್ನು ಹಿಂಪಡೆಯಿರಿ ಎಂದು ರಾಜ್ಯಪಾಲರಿಗೆ ಸಚಿವ ಸಂಪುಟ ಸಲಹೆ ನೀಡಿತ್ತು. ಆದರೆ ಇದನ್ನು ತಿರಸ್ಕರಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನಂತರ ಏನಾಗಬಹುದು ಎಂಬುದನ್ನು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ವಿವರಿಸಿದ್ದಾರೆ.
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತರ ಏನಾಗುತ್ತೆ?
ಅರ್ಜಿದಾರರು ಪ್ರಾಸಿಕ್ಯೂಷನ್ ಅನುಮತಿಯನ್ನು ತೆಗೆದುಕೊಂಡು ಸೆಷನ್ಸ್ ನ್ಯಾಯಾಲಯಕ್ಕೆ ಹೋಗಿ ತನಿಖೆಗೆ ಆದೇಶ ನೀಡುವಂತೆ ಕೋರುತ್ತಾರೆ. ನ್ಯಾಯಾಲಯ ಅರ್ಜಿದಾರರ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಕೋರಿಕೆಯನ್ನು ಪುರಸ್ಕರಿಸಬಹುದು ಇಲ್ಲವೇ ತಿರಸ್ಕರಿಸಬಹುದು. ಪುರಸ್ಕರಿಸಿದರೆ ಪೊಲೀಸರಿಗೆ ಇಲ್ಲವೇ ಲೋಕಾಯುಕ್ತ ತನಿಖೆಗೆ ಒಪ್ಪಿಸಬಹುದು.
ಅಷ್ಟಕ್ಕೆ ಮುಗಿದುಹೋಗುತ್ತಾ? ಮುಖ್ಯಮಂತ್ರಿಗಳ ಮುಂದೆ ಬೇರೆ ಆಯ್ಕೆ ಇರುವುದಿಲ್ಲವೇ?
ಖಂಡಿತ ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ಮುಖ್ಯಮಂತ್ರಿಗಳು ಹೈಕೋರ್ಟ್‌ನಲ್ಲಿ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುತ್ತಾರೆ. ಅಲ್ಲಿಯೂ ಪ್ರಾಸಿಕ್ಯೂಷನ್ ಅನುಮತಿಯನ್ನು ಪುರಸ್ಕರಿಸಿದರೆ, ಪ್ರಕರಣ ಸುಪ್ರೀಂ ಕೋರ್ಟ್‌ಗೆ ಹೋಗಬಹುದು. ಸುಪ್ರೀಂ ಕೋರ್ಟ್ ಕೂಡಾ ಪ್ರಾಸಿಕ್ಯೂಷನ್ ಅನುಮತಿಯನ್ನು ಪುರಸ್ಕರಿಸಿದರೆ ಪೊಲೀಸ್ ಇಲ್ಲವೇ ಲೋಕಾಯುಕ್ತದಿಂದ ತನಿಖೆ ಶುರುವಾಗುತ್ತದೆ.
ಕಾನೂನಿನ ಪ್ರಕ್ರಿಯೆ ಮುಗಿದುಹೋಗಲು ಎಷ್ಟು ಸಮಯ ಬೇಕಾಗಬಹುದು?
ಕಾನೂನಿನ ಪ್ರಕ್ರಿಯೆ ಮುಗಿಯಲು ಎಷ್ಟು ಕಾಲ ಆಗಬಹುದು ಎನ್ನುವುದು ನ್ಯಾಯಾಲಯಗಳಿಗೆ ಬಿಟ್ಟ ವಿಚಾರ. ಆದರೆ 2011ರಲ್ಲಿ ಬಿ.ಎಸ್ ಯಡಿಯೂರಪ್ಪನವರು ಮತ್ತು ಅವರ ಮಕ್ಕಳಿಗೆ ಸಂಬಂಧಿಸಿದ ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ಸಿಕ್ಕ ಹತ್ತು ತಿಂಗಳುಗಳ ನಂತರ ಆರೋಪಪಟ್ಟಿ ಸಲ್ಲಿಕೆಯಾಗಿತ್ತು.
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ನಂತರ ಯಡಿಯೂರಪ್ಪನವರು ರಾಜೀನಾಮೆ ನೀಡಿದ್ದರೇ?
ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬಳಿಕ ರಾಜೀನಾಮೆ ನೀಡಿರಲಿಲ್ಲ. ಯಡಿಯೂರಪ್ಪನವರ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದು 2011ರ ಜನವರಿ 29ರಂದು. ಲೋಕಾಯುಕ್ತ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದು 2011ರ ಅಕ್ಟೋಬರ್ 14ಂದು. ಯಡಿಯೂರಪ್ಪನವರು ಬಂಧನಕ್ಕೀಡಾಗಿದ್ದು 2011ರ ಅಕ್ಟೋಬರ್ 15ರಂದು.
ಯಡಿಯೂರಪ್ಪ ಅವರು ಯಾವಾಗ ರಾಜೀನಾಮೆ ನೀಡಿದ್ದರು?
ನ್ಯಾ.ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವರದಿ ನೀಡಿದ ಪ್ರಕರಣದಲ್ಲಿ 2011ರ ಜುಲೈ ಹನ್ನೊಂದರಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಯಡಿಯೂರಪ್ಪ ಅವರ ಬಂಧನಕ್ಕೀಡಾಗಿದ್ದು, ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಮತ್ತು ಅಕ್ರಮಗಣಿಗಾರಿಕೆ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಿ ಆರೋಪಪಟ್ಟಿಯನ್ನು ಸಲ್ಲಿಸಿದ ನಂತರ 2011ರ ಅಕ್ಟೋಬರ್ 15ರಂದು.