ಬೆಂಗಳೂರಿನಲ್ಲಿ ಬಾಂಬ್ ಇಟ್ಟವರು ದೇಶದ್ರೋಹಿಗಳು: ಯು.ಟಿ. ಖಾದರ್

Update: 2024-03-03 12:36 GMT

ಬೆಳಗಾವಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವರು ದೇಶದ್ರೋಹಿಗಳು. ಮನುಷ್ಯತ್ವ, ಕರುಣೆ ಇಲ್ಲದವರನ್ನು ನಾವು ಯಾರೂ ಕೂಡ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.

ರವಿವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ನಾನು ಏನೂ ಮಾತಾಡೋದಿಲ್ಲ. ಕರ್ನಾಟಕ ಜನತೆ, ಕನ್ನಡಿಗರು ಎಲ್ಲರೂ ಒಗ್ಗಟ್ಟಾಗಿ, ಅಣ್ಣ ತಮ್ಮಂದಿರಂತೆ ಜೀವನ ನಡೆಸುತ್ತೇವೆ. ಇದರ ನಡುವೆ ನಮ್ಮನ್ನು ಬೇರ್ಪಡಿಸಲು ಯಾರಿಗೂ ಅವಕಾಶ ನೀಡಬಾರದು ಎಂದರು.

ಶಾಂತಿಯುತ, ನಿರ್ಭಯ ಸಮಾಜದಲ್ಲಿ ಮಾತ್ರ ಅಭಿವೃದ್ಧಿ ಮತ್ತು ಜನ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಶಾಂತಿಯುತ ರಾಜ್ಯವನ್ನು ಹದಗೆಡಿಸಲು ಪ್ರಯತ್ನಿಸಿದವರನ್ನು ಮಟ್ಟ ಹಾಕಲು ಸರ್ಕಾರ ಕ್ರಮ ಕೈಗೊಂಡಿದೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು. ಇದರ ಹಿಂದೆ ಯಾರಿದ್ದಾರೆ? ಅವರ ಉದ್ದೇಶ ಏನಾಗಿತ್ತು ಎಂಬುದನ್ನು ಬಯಲು ಮಾಡಬೇಕು. ಅದೇ ರೀತಿ ಮುಂದೆ ಈ ರೀತಿ ಕೃತ್ಯ ಮಾಡಲು ಯಾರಿಗೂ ಧೈರ್ಯ ಬಾರದಂತಹ ಶಿಕ್ಷೆ ವಿಧಿಸಬೇಕು' ಎಂದು ಆಗ್ರಹಿಸಿದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಶಾಸಕರ ಭವನ ಕಟ್ಟುವ ಪ್ರಶ್ನೆಗೆ ಉತ್ತರಿಸಿದ ಅವರು, ಇಲಾಖೆ ಅಧಿಕಾರಿಗಳ ಜೊತೆಗೆ ಜಿಲ್ಲಾಧಿಕಾರಿ ಚರ್ಚೆ ಮಾಡಿದ್ದಾರೆ. ನಾನು ಮತ್ತು ವಿಧಾನ ಪರಿಷತ್ ಸಭಾಪತಿ ಅವರು ಕುಳಿತು ಚರ್ಚೆ ಮಾಡಿ, ಶಾಸಕರ ಭವನಕ್ಕೆ ಅಂತಿಮ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News