ಗೃಹಲಕ್ಷ್ಮಿ | ತಾಂತ್ರಿಕ ಸಮಸ್ಯೆಗೆ ಶೀಘ್ರವೇ ಪರಿಹಾರ; ದೀಪಾವಳಿ ವೇಳೆ ಫಲಾನುಭವಿಗಳ ಖಾತೆಗೆ ಹಣ: ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ

Update: 2023-11-08 12:50 GMT

ಬೆಂಗಳೂರು, ನ.8: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಶೇ.95ರಷ್ಟು ಮನೆಯ ಒಡತಿಯರಿಗೆ ತಲುಪಿದ್ದು, ತಾಂತ್ರಿಕ ಸಮಸ್ಯೆಗೆ ಶೀಘ್ರವೆ ಪರಿಹಾರ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಬುಧವಾರ ನಗರದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಚೇರಿಯಲ್ಲಿರುವ ಬೆಂಗಳೂರು ಒನ್ ಕೇಂದ್ರದಲ್ಲಿ ನಡೆಯುತ್ತಿರುವ ಗೃಹಲಕ್ಷ್ಮಿ ಯೋಜನೆಯಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ತರಬೇತಿ ಕುರಿತು ಅವರು ಮಾಹಿತಿ ಪಡೆದುಕೊಂಡು, ಗೃಹಲಕ್ಷ್ಮಿ ಯೋಜನೆ ಕುರಿತು ಆಗಿರುವ ತಾಂತ್ರಿಕ ದೋಷಗಳನ್ನು ಶೀಘ್ರವೇ ಬಗೆಹರಿಸಬೇಕೆಂದು ಸಿಡಿಪಿಒಗಳಿಗೆ ಸೂಚನೆ ನೀಡಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಗೃಹಲಕ್ಷ್ಮಿ ಯೋಜನೆ ಇದುವರೆಗೂ ಶೇ.95ರಷ್ಟು ಯಶಸ್ವಿಯಾಗಿದ್ದು, ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪ್ರತಿದಿನ ಮೂರು ಜಿಲ್ಲೆಗಳ ಸಿಡಿಪಿಒಗಳಿಗೆ ತರಬೇತಿ ನೀಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಗೆ ಇದುವರೆಗೂ 1 ಕೋಟಿ 16 ಲಕ್ಷದ 65 ಸಾವಿರ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ ಎಂದರು.

ಈ ಪೈಕಿ ಆಗಸ್ಟ್ ನಲ್ಲಿ ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ 2,119 ಕೋಟಿ ರೂ. ಹಾಕಲಾಗಿದೆ. ಆಗಸ್ಟ್ ತಿಂಗಳಲ್ಲಿ ಐದು ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ ಹಣ ಹೋಗಿಲ್ಲ. ಸೆಪ್ಟೆಂಬರ್ ನಲ್ಲಿ ಶೇ.82ರಷ್ಟು ಕುಟುಂಬಗಳಿಗೆ ಹಣ ಹಾಕಲಾಗಿದ್ದು, 12 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ ಅಥವಾ ಕೆವೈಸಿ ಸಮಸ್ಯೆಯಿಂದ ಹಣ ಬ್ಯಾಂಕ್ ಖಾತೆಯಲ್ಲಿ ಉಳಿದಿದೆ. ಇನ್ನು ಅಕ್ಟೋಬರ್ ನಲ್ಲಿ 2400 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದರು.

ದೀಪಾವಳಿ ವೇಳೆ ಶೇ.100ರಷ್ಟು ಗುರಿ:

ಆ.15ರೊಳಗೆ ನೋಂದಣಿ ಮಾಡಿಕೊಂಡವರಿಗೆ ಇದುವರೆಗೆ ದುಡ್ಡು ಬಾರದೆ ಇದರೆ, ಒಟ್ಟಿಗೆ ಮೂರು ತಿಂಗಳ ಹಣ ಹಾಕಲಾಗುತ್ತದೆ. ಇದುವರೆಗೆ ಹಣ ಬಾರದೆ ಇದ್ದರೂ ಪೂರ್ಣ ಬಾಕಿ ಹಣ ಹಾಕಲಾಗುವುದು. ದೀಪಾವಳಿ ಹಬ್ಬದ ವೇಳೆಗೆ ಫಲಾನುಭವಿಗಳ ಖಾತೆಗೆ 'ಗೃಹ ಲಕ್ಷ್ಮಿ' ಹಣ ಜಮೆ ಹಣ ಹೋಗುವಂತೆ ನೋಡಿಕೊಳ್ಳಲಾಗುವುದು. ಈ ಸಂಬಂಧ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಇನ್ನು 10 ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಎಲ್ಲ ಗೊಂದಲಗಳು ಬಗೆಹರಿಯಲಿವೆ ಎಂದು ಅವರು ಹೇಳಿದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕಿ ಎಂ.ಎಸ್.ಅರ್ಚನಾ, ಇ-ಗವರ್ನೆನ್ಸ್ ಇಲಾಖೆಯ ನಿರ್ದೇಶಕ ದಿಲೀಶ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News