‘ಗೃಹಲಕ್ಷ್ಮಿ ಯೋಜನೆ’| 9,44,155 ಅರ್ಜಿದಾರರಿಗೆ ಪಾವತಿಯಾಗದ ಹಣ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Update: 2023-10-09 15:12 GMT

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು: ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸಲು ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಅಡಿ ಈವರೆಗೆ 9,44,155 ಅರ್ಜಿದಾರರಿಗೆ ಹಣ ಹೋಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಸೋಮವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, 3082 ಅರ್ಜಿದಾರರು ಮರಣ ಹೊಂದಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ. 1,59,356 ಅರ್ಜಿದಾರರ ಡೆಮೋ ದೃಢೀಕರಣ ವಿಫಲವಾಗಿದೆ. ಫಲಾನುಭವಿಗಳ ಆಧಾರ್ ಹಾಗೂ ಬ್ಯಾಂಕ್ ಖಾತೆ ಹೆಸರಿನಲ್ಲಿ ವ್ಯತ್ಯಾಸವಾಗಿದ್ದು ಅವುಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ ಎಂದು ಹೇಳಿದ್ದಾರೆ.

5,96,268 ಫಲಾನುಭವಿಗಳ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿಲ್ಲ. 2,17,536 ಫಲಾನುಭವಿಗಳ ಬ್ಯಾಂಕ್ ಖಾತೆಯನ್ನು ಆಧಾರ್ ನೊಂದಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ. ಉಳಿದ ಫಲಾನುಭವಿಗಳಿಗೂ ಸಿಡಿಪಿಒ ಮಾಹಿತಿ ನೀಡಿ ಆಧಾರ್ ಫೀಡ್ ಮಾಡಿಸಲು ಕ್ರಮ ವಹಿಸಲಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸ ವ್ಯತ್ಯಾಸವಾಗಿದೆ. ಬ್ಯಾಂಕ್ ಗಳ ಮೂಲಕ ಫಲಾನುಭವಿಗಳ ಇ-ಕೆವೈಸಿ ಮಾಡಿಸಲು ಇಲಾಖೆ ಕ್ರಮ ವಹಿಸಿದೆ. ಸೆಪ್ಟಂಬರ್ ತಿಂಗಳಲ್ಲಿ 1.14 ಲಕ್ಷ ಫಲಾನುಭವಿಗಳಿಗೆ 2280 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅ.4ರವರೆಗೆ 93 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂ. ಯಶಸ್ವಿಯಾಗಿ ವರ್ಗಾಯಿಸಲಾಗಿದೆ. 5.5 ಲಕ್ಷ ಫಲಾನುಭವಿಗಳ ಮಾಹಿತಿ ಪರಿಶೀಲಿಸಿ ಡಿಬಿಟಿ ಮೂಲಕ ಹಣ ಪಾವತಿಸಲು ಕ್ರಮ ಕೈಗೊಂಡಿರುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News