ಗೃಹಲಕ್ಷ್ಮೀ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ ; ಸಿದ್ದರಾಮಯ್ಯ ಬಗ್ಗೆ ಮೆಚ್ಚುಗೆ

Update: 2024-08-25 08:00 GMT

ಚಿಕ್ಕೋಡಿ : ರಾಜ್ಯದ ಮಹಿಳೆಯರು, ಬಡ-ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕಾಗಿ ಮತ್ತು ನಿರುದ್ಯೋಗಿ ಯುವಜನರಿಗೆ ಸಹಾಯ ಮಾಡಲು ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮೀ ಯೋಜನೆಯು ಮನೆ ಯಜಮಾನಿಯರ ಆದಾಯದ ಮೂಲವಾಗಿಯೂ ಗುರುತಿಸಿಕೊಂಡಿದೆ. ಕೆಲವು ಕಡೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂಬ ಗೊಂದಲಗಳ ಮಧ್ಯೆಯೂ, ಮತ್ತೂ ಕೆಲವು ಕಡೆ ಮಹಿಳೆಯರು ಸರಕಾರದ ಯೋಜನೆಯನ್ನು ಕೊಂಡಾಡಿದ್ದಾರೆ.

ಈ ಮಧ್ಯೆ ಬೆಳಗಾವಿ ಜಿಲ್ಲೆಯ ವೃದ್ದೆಯೊಬ್ಬರು ತನಗೆ ಬಂದ ಗೃಹಲಕ್ಷ್ಮಿ ಹಣದಿಂದ ಊರಿನ ಜನರಿಗೆ ಹೋಳಿಗೆ ಊಟ ಹಾಕಿಸಿ ಖುಷಿ ಹಂಚಿಕೊಂಡಿದ್ದಾರೆ. ಇದಕ್ಕೆ ಊರಿನ ಕೆಲವು ಮಹಿಳೆಯರು ಕೂಡ ಸಾಥ್‌ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಅಕ್ಕಾತಾಯಿ ಲಂಗೋಟಿ ಎಂಬ ವೃದ್ದೆ ತನಗೆ ಬಂದ ಗೃಹಲಕ್ಷ್ಮಿ ಹಣದಿಂದ ಊರಿಗೆ ಊಟ ಹಾಕಿಸಿ ಸಂಭ್ರಮಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರತಿ ತಿಂಗಳು ನಮಗೆ ಎರಡು ಸಾವಿರ ಹಣ ನೀಡ್ತಿದ್ದಾರೆ. ರಾಜಕೀಯವಾಗಿ ಸಿದ್ದರಾಮಯ್ಯ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಈ ನಿಟ್ಟಿನಲ್ಲಿ ಗ್ರಾಮದ ದೇವತೆಗೆ ಪೂಜೆ ಸಲ್ಲಿಸಿ, ಊರಿನ ಜನರಿಗೆ ಹೋಳಿಗೆ ಊಟ ಹಾಕಿಸಿದ್ದೇನೆ ಎಂದು ಅಕ್ಕಾತಾಯಿ ಲಂಗೋಟಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News