ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಪ್ರತಿಯೊಂದಕ್ಕೆ ರೇಟ್ ಕಾರ್ಡ್ ಫಿಕ್ಸ್ ಆಗಿದೆ : ಎಚ್.ಡಿ.ಕುಮಾರಸ್ವಾಮಿ

Update: 2025-01-10 16:10 IST
Photo of  HD Kumaraswamy

ಎಚ್.ಡಿ.ಕುಮಾರಸ್ವಾಮಿ

  • whatsapp icon

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಪ್ರತಿಯೊಂದಕ್ಕೆ ರೇಟ್ ಕಾರ್ಡ್ ಫಿಕ್ಸ್ ಆಗಿದೆ . ಕಂದಾಯ ಇಲಾಖೆಯಲ್ಲಿ ಎಲ್ಲಾ ಪೋಸ್ಟ್‌ಗಳಿಗೂ ರೇಟ್ ನಿಗದಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದರು.

ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, 60 ಪರ್ಸೆಂಟ್‌ ಕಮಿಷನ್ ಆರೋಪವನ್ನು ಪುನರುಚ್ಚರಿಸಿದರು.

ಶೇ.60 ಕಮೀಷನ್ ಆರೋಪಕ್ಕೆ ಕುಮಾರಸ್ವಾಮಿ ದಾಖಲೆ ಕೊಡಲಿ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು, ಗುತ್ತಿಗೆದಾರರೇ ಪರ್ಸಂಟೇಜ್ ಆರೋಪ ಮಾಡುತ್ತಿದ್ದಾರೆ. ಅವರನ್ನು ಪರ್ಸಂಟೇಜ್ ಕೇಳದಿದ್ದರೆ ಅವರು ಯಾಕೆ ಆರೋಪ ಮಾಡುತ್ತಿದ್ದರು. ಸರಕಾರ ಅವರನ್ನೇ ಕೇಳಿ ದಾಖಲೆ ಪಡೆದುಕೊಳ್ಳಬೇಕು ಎಂದರು.

ಸಿದ್ದರಾಮಯ್ಯ ಅವರು ಮಹಾನ್ ನಾಯಕರು. ಪೇ ಸಿಎಂ ಅಂತ ಪೋಸ್ಟರ್ ಅಂಟಿಸಲು ಹೋಗಿದ್ದರು. ಅವರು ಇಲ್ಲಿಯವರೆಗೆ ಯಾವ ದಾಖಲೆ ಇಟ್ಟಿದ್ದಾರೆ ಜನರ ಮುಂದೆ. ಕೆಂಪಣ್ಣ ಹೇಳಿದರು ಕೆಂಪಣ್ಣ ಹೇಳಿದರು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಕೆಂಪಣ್ಣ ಅವರಿಂದ ಸಿದ್ದರಾಮಯ್ಯ ಅವರು ದಾಖಲೆ ಪಡೆದುಕೊಳ್ಳಬೇಕಿತ್ತಲ್ಲವೇ? ಈಗ ಕಂಟ್ರಾಕ್ಟರ್ ಗಳೇ ಶೇ.60 ಕಮಿಷನ್ ವಸೂಲಿ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಅದಕ್ಕಿಂತ ಸಾಕ್ಷಿ ಬೇಕಾ ಇವರಿಗೆ? ಈ ಆಟ ಸರಕಾರ ಬಿಡಬೇಕು ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಕೃಷ್ಣಭೈರೇಗೌಡ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ:

ಮಗ ಸೋತಿರುವುದಕ್ಕೆ ಹತಾಶರಾಗಿ ಕುಮಾರಸ್ವಾಮಿ ಶೇ.60 ಕಮಿಷನ್ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ನಾನು ಮಗ ಸೋತಿರುವುದಕ್ಕೆ ಹತಾಶನಾಗಿದ್ದೇನೋ ಇಲ್ಲವೋ. ಎಂಬುದು ಇರಲಿ. ಅದನ್ನು ಬಿಟ್ಟು ಮೊದಲು ಶೆ.60 ಕಮೀಷನ್ ಬಗ್ಗೆ ಉತ್ತರ ಹೇಳಲಿ ಎಂದು  ಸವಾಲು ಹಾಕಿದರು.

ಕಂದಾಯ ಇಲಾಖೆ ಸತ್ಯ ಮಾರ್ಗದಲ್ಲಿ ನಡೆಯುತ್ತಿದೆಯಾ? ಬೆಂಗಳೂರು ಎಸಿ ಪೋಸ್ಟ್ ಗೆ ಎಷ್ಟು ದುಡ್ಡು ತೆಗೆದುಕೊಳ್ಳುತ್ತಿದ್ದೀರಿ? ಎಷ್ಟು ರೇಟ್ ಫಿಕ್ಸ್ ಮಾಡಿಕೊಂಡಿದ್ದೀರಾ? ಆ ಹಣ ಯಾರು ಯಾರಿಗೆ ಹೋಗುತ್ತದೆ? ಏನೇನು ದಂಧೆ ನಡೆಸುತ್ತಿದ್ದೀರಿ ಎನ್ನುವುದು ನಮಗೆ ಗೊತ್ತಿಲ್ಲವಾ? ಎಂದು ಕಂದಾಯ ಇಲಾಖೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಸಹಿ ಮಾರಾಟಕ್ಕೆ ಇಟ್ಟಿದೆ:

ನಾನು ಕೂಡ ಎರಡು ಸಿಎಂ ಆಗಿ ಅಧಿಕಾರ ನಡೆಸಿದ್ದೇನೆ. ನಾನು ಹರಿಶ್ಚಂದ್ರ ಎಂದು ಎಲ್ಲೂ ಹೇಳಿಲ್ಲ. ವಿಧಾನಸಭೆಯಲ್ಲಿಯೇ ಈ ಮಾತು ಹೇಳಿದ್ದೇನೆ. ಚುನಾವಣೆ ನಡೆಸಬೇಕಾದರೆ ಇನ್ನೊಬ್ಬರ ಹತ್ತಿರ ಕೈ ಚಾಚಲೇಬೇಕು. ಆದರೆ ನಾನು ಅಧಿಕಾರ ನಡೆಸುವಾಗ ನನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ. ಈ ಸರಕಾರ ಪ್ರತಿಯೊಂದಕ್ಕೂ ಸಹಿಯನ್ನು ಮಾರಾಟಕ್ಕೆ ಇಟ್ಟಿದೆ. ಪ್ರತಿಯೊಂದಕ್ಕೂ ಲೂಟಿ ಹೊಡೆದುಕೊಂಡು ಕೂತಿದ್ದಾರೆ. ಈ ಸರಕಾರದಲ್ಲಿ ರೇಟ್ ಕಾರ್ಡ್ ಮೊದಲೇ ಫಿಕ್ಸ್ ಆಗಿ ಹೋಗಿದೆ. ನಾನು ಪ್ರಾರಂಭದಲ್ಲೇ ಈ ಸರಕಾರದ ರೇಟ್ ಕಾರ್ಡ್ ಬಗ್ಗೆ ಹೇಳಿದ್ದೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ದಲಿತ ಶಾಸಕರ ಡಿನ್ನರ್ ಪಾರ್ಟಿ ವಿಚಾರದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿಲ್ಲ, ಅದಕ್ಕೆ ಸಭೆ ಮಾಡುತ್ತಿದ್ದೇವೆ ಎಂದು ಅವರಲ್ಲಿ ಕೆಲವರು ಹೇಳಿದ್ದಾರೆ. ಡಿನ್ನರ್ ಪಾರ್ಟಿಯಲ್ಲಿ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಬಗ್ಗೆ ಚರ್ಚೆ ಮಾಡುವುದಾದರೆ ಕ್ಯಾಬಿನೆಟ್ ಇರುವುದು ಯಾಕೆ? ಎಸ್‌ಸಿ-ಎಸ್‌ಟಿ ಇರಲಿ, ಯಾವುದೇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗದೇ ಇದ್ದರೆ ಕ್ಯಾಬಿನೆಟ್ ನಲ್ಲಿ ಕೂತು ಚರ್ಚೆ ಮಾಡಬೇಕಾ? ಅಥವಾ ಡಿನ್ನರ್ ಪಾರ್ಟಿಯಲ್ಲಿ ಚರ್ಚೆ ಮಾಡಬೇಕಾ? ಎಂದು ಕಟುವಾಗಿ ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News