ಕಿಯೋನಿಕ್ಸ್ ವೆಂಡರ್ಸ್ ಬಿಲ್ ಬಾಕಿ; ಪ್ರಿಯಾಂಕ್ ಖರ್ಗೆಗೆ ಎಚ್.ಡಿ.ಕುಮಾರಸ್ವಾಮಿ ತರಾಟೆ
ಬೆಂಗಳೂರು : ಬಾಕಿ ಬಿಲ್ ಪಾವತಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೆಂಡರ್ಸ್ ಪತ್ರ ಬರೆದಿರುವ ಪ್ರಕರಣ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಉಡಾಫೆ ಮಾತನ್ನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉಡಾಫೆ ಮಾತುಗಳನ್ನಾಡುವುದು ಬಿಟ್ಟು ಮೊದಲು ಕಿಯೋನಿಕ್ಸ್ ವೆಂಡರ್ಸ್ ಗಳ ಬಾಕಿ ಬಿಲ್ ಗಳನ್ನು ಚುಕ್ತಾ ಮಾಡಲಿ ಎಂದರು.
ಈ ಸರಕಾರ ಗುತ್ತಿಗೆದಾರರು ಹಾಗೂ ವೆಂಡರ್ಸ್ ಗಳ ಬಿಲ್ ಪಾವತಿಸಲು ಮೀನಾಮೇಷ ಎಣಿಸುತ್ತಿದೆ. ಸರಕಾರದ ಆಂತರ್ಯ ಏನೆಂಬುದು ಎಲ್ಲರೂ ಬಲ್ಲ ವಿಷಯ. ತಮಗೆ ಬಿಡುಗಡೆ ಆಗಬೇಕಿರುವ ಬಿಲ್ ಗಳನ್ನು ಪಾವತಿಸಿ ಎಂದು ಗುತ್ತಿಗೆದಾರರು ಧೈರ್ಯದಿಂದ ಕೇಳಬೇಕು. ಅವರೇನೂ ಭಿಕ್ಷುಕರಲ್ಲ, ಸಣ್ಣ ಪ್ರಮಾಣದ ಗುತ್ತಿಗೆದಾರರು ತಮ್ಮ ಮನೆ ಹೆಣ್ಣುಮಕ್ಕಳ ಒಡವೆಗಳನ್ನು ಒತ್ತೆ ಇಟ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಮಾಡಿರುವ ಸಾಲಗಳನ್ನು ತೀರಿಸಲಾಗದೆ ಬೀದಿಗೆ ಬಂದಿದ್ದಾರೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಖರ್ಗೆ ಸಬೂಬು ಹೇಳುವುದು ಬಿಡಬೇಕು:
ಎಲ್ಲರ ಮೇಲೆ ಬೇಕಾಬಿಟ್ಟಿ ಮಾತನಾಡುವ ಖರ್ಗೆ ಅವರು ಸಬೂಬು ಹೇಳುವುದು ಬಿಡಬೇಕು. ಈವರೆಗೆ ಗುತ್ತಿಗೆದಾರರ ಎಲ್ ಓಸಿಗಳನ್ನು ಬಿಡುಗಡೆ ಮಾಡುವುದಕ್ಕೆ ಈ ಸರಕಾರಕ್ಕೆ ಸಾಧ್ಯವಾಗಿಲ್ಲ. ಸಚಿವರು ಹಿಂದಿನ ಸರಕಾರದ ಮೇಲೆ ಗೂಬೆ ಕೂರಿಸುವ ಬದಲು ಗುತ್ತಿಗೆದಾರರ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ಕೇಂದ್ರ ಸಚಿವರು ಒತ್ತಾಯ ಮಾಡಿದರು.
ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ಯಾವತ್ತೂ ಯಾರಿಗೂ ತೊಂದರೆ ಕೊಡುವ ಕೆಲಸ ಮಾಡಿಲ್ಲ. ಗುತ್ತಿಗೆದಾರರಿಗೆ ಒಂದು ಮನವಿ ಮಾಡುತ್ತೇನೆ. ಮೊದಲು ಒಗ್ಗಟ್ಟಾಗಿ, ನಿಮ್ಮ ನಿಮ್ಮಲ್ಲಿಯೇ ಗುಂಪುಗಳನ್ನು ಮಾಡಿಕೊಂಡರೆ ಅದನ್ನು ಸರಕಾರ ದುರುಪಯೋಗ ಮಾಡಿಕೊಳ್ಳುತ್ತದೆ. ನಿಮ್ಮಲ್ಲಿ ಒಡಕು ಬರಬೇಕು ಎಂದು ಸರಕಾರ ಬಯಸುತ್ತದೆ. ಇದನ್ನು ನೀವು ಅರ್ಥ ಮಾಡಿಕೊಳ್ಳಿ. ಒಂದು ವರ್ಷ ಯಾರು ಕೆಲಸ ಮಾಡಬೇಡಿ. ಅಕ್ಕಪಕ್ಕದ ರಾಜ್ಯಗಳವರನ್ನು ಕರೆದುಕೊಂಡು ಬಂದು ಕೆಲಸ ಮಾಡಿಸಲಿ. ಬರಲಿ, ಯಾರು ಬಂದು ಕೆಲಸ ಮಾಡುತ್ತಾರೋ ನೋಡೋಣ. ಹೇಗೂ ಇವರು ಕೆಲಸವನ್ನು ಕೊಡುತ್ತಿಲ್ಲ. ನೀವು ಕೇಳುತ್ತಿರುವುದು ಹಿಂದಿನ ದುಡ್ಡು ಕೇಳುತ್ತಿದ್ದೀರಿ ಎಂದು ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು.
ಯಾರೇ ಆಗಲಿ ಧೃತಿಗೆಡುವ ಅಗತ್ಯವಿಲ್ಲ:
ಯಾರೇ ಆಗಲಿ ಧೃತಿಗೆಡುವ ಅಗತ್ಯವಿಲ್ಲ. ಸರಕಾರ ನಿಮ್ಮ ಹಣ ನಿಮಗೆ ಕೊಡಲೇಬೇಕು. ಆತ್ಮಹತ್ಯೆಗೆ ಶರಣಾಗಬೇಡಿ. ದಯಾಮರಣಕ್ಕೆ ಯಾಕೆ ಅರ್ಜಿ ಹಾಕಿಕೊಳ್ಳುತ್ತೀರಾ? ನೀವು ತಪ್ಪು ಮಾಡಿಲ್ಲ, ತಪ್ಪು ಮಾಡಿರುವುದು ಸರಕಾರ. ಸರಕಾರದ ವಿರುದ್ಧ ಹೋರಾಟ ಮಾಡುವ ಧೈರ್ಯ ಮಾಡಿ ಎಂದರು.
ಇನ್ನೂ ಸಾಕ್ಷ್ಯ ಬೇಕೆ? :
60 ಪರ್ಸೆಂಟ್ ಕಮಿಷನ್ ಬಗ್ಗೆ ಮುಖ್ಯಮಂತ್ರಿಗಳು ದಾಖಲೆ ಕೊಡಿ ಎಂದು ನನ್ನನ್ನು ಹೇಳಿದ್ದರು. ಗುತ್ತಿಗೆದಾರರ ಸಂಘದ ಹಂಗಾಮಿ ಅಧ್ಯಕ್ಷರು ಎಷ್ಟೆಷ್ಟು ಪರ್ಸೆಂಟೇಜ್ ಎಂದು ಅವರೇ ಪಟ್ಟಿ ಮಾಡಿ ಹೇಳಿದ್ದಾರೆ. ಇದಕ್ಕಿಂತ ದಾಖಲೆ ಬೇಕಾ ಮುಖ್ಯಮಂತ್ರಿಗಳಿಗೆ? ಎಂದು ಕುಮಾರಸ್ವಾಮಿ ಅವರು ಸಿಎಂಗೆ ತಿರುಗೇಟು ನೀಡಿದರು.
ಒಕ್ಕಲಿಗ, ಲಿಂಗಾಯತರನ್ನು ಡಿ ಗ್ರೇಡ್ ಮಾಡುತ್ತಿದ್ದಾರೆ :
ಜಾತಿ ಗಣತಿ ವರದಿ ಇಟ್ಟುಕೊಂಡು ಒಕ್ಕಲಿಗ, ಲಿಂಗಾಯತರನ್ನು ಡಿ ಗ್ರೇಡ್ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.
ಜಾತಿ ಜನಗಣತಿ ವರದಿಯನ್ನು ಸಂಪುಟದಲ್ಲಿ ಚರ್ಚೆ ಮಾಡುತ್ತಾರಂತೆ. ಇದು ಕೇವಲ ಎರಡು ಸಮುದಾಯಗಳ ಪ್ರಶ್ನೆ ಅಲ್ಲ. ಇಷ್ಟು ದಿನ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಅವರು ಶೋಷಿತ ಸಮುದಾಯಗಳಿಗೆ ಏನು ಮಾಡಿದ್ದಾರೆ ಏನುವುದನ್ನು ಹೇಳಬೇಕು ಎಂದು ಅವರು ಒತ್ತಾಯ ಮಾಡಿದರು.
ಯಾವ ಯಾವ ಜಾತಿಯಲ್ಲಿ ಎಷ್ಟು ಜನ ಇದ್ದಾರೆ ಎನುವುದಕ್ಕಿಂತ ಎಷ್ಟು ಜನ ಬಡವರು ಇದ್ದಾರೆ ಎಂಬುದನ್ನು ಗಮನಿಸಬೇಕು. ಇಷ್ಟು ದಿನ ಸರಕಾರದ ಸೌಲಭ್ಯಗಳು ಯಾರಿಗೆ ಸಿಕ್ಕಿವೆ, ಯಾರಿಗೆ ಸಿಕ್ಕಿಲ್ಲ ಎಂಬುದರ ಮೇಲೆ ಸರಕಾರ ಬೆಳಕು ಚೆಲ್ಲಬೇಕು ಎಂದು ಅವರು ಹೇಳಿದರು.