ಬಡವರು ಒತ್ತುವರಿ ಮಾಡಿದರೆ ಬುಲ್ಡೋಜರ್‌ನಿಂದ ಮನೆ ಒಡೆದು ಹಾಕುತ್ತೀರಿ : ಸರಕಾರದ ವಿರುದ್ಧ ಹೈಕೋರ್ಟ್ ಗರಂ

Update: 2025-03-20 00:00 IST
ಬಡವರು ಒತ್ತುವರಿ ಮಾಡಿದರೆ ಬುಲ್ಡೋಜರ್‌ನಿಂದ ಮನೆ ಒಡೆದು ಹಾಕುತ್ತೀರಿ : ಸರಕಾರದ ವಿರುದ್ಧ ಹೈಕೋರ್ಟ್ ಗರಂ
  • whatsapp icon

ಬೆಂಗಳೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಕುಟುಂಬದ ವಿರುದ್ಧ ಸರಕಾರಿ ಭೂಮಿ ಒತ್ತುವರಿ ಆರೋಪ ವಿಚಾರವಾಗಿ ‘ಗಟ್ಸ್ ಇದ್ರೆ ಜಮೀನು ವಾಪಸ್ ತಗೊಳ್ಳಿ. ಇಲ್ಲವಾದರೆ ಬಿಟ್ಟುಬಿಡಿ. ಭಿಕ್ಷುಕರು, ಬಡವರ ಐದು ಅಡಿ ಜಾಗ ಒತ್ತುವರಿ ಮಾಡಿದರೆ ತೆರವು ಮಾಡುತ್ತೀರಿ. ಬುಲ್ಡೋಜರ್ ತೆಗೆದುಕೊಂಡು ಮನೆ ಒಡೆದು ಹಾಕುತ್ತೀರಿ’ ಎಂದು ಹೈಕೋರ್ಟ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ಚಾಟಿ ಬೀಸಿದೆ.

‘ಸಮಸ್ಯೆ ಹೇಗೆ ಸರಿಪಡಿಸುವುದು ಎಂಬುದನ್ನು ತಿಳಿಸಬೇಕು. ಕೋಟ್ ಹಾಕಿ ಫಿಟ್ ಆದ ಮಾತ್ರಕ್ಕೆ ಪ್ರಯೋಜನವಿಲ್ಲ. ಆ ಗಟ್ಸ್ ಇಲ್ಲ ಅಂದರೆ ಈ ಪ್ರೊಫೆಷನ್‌ನಲ್ಲಿ ಇರಬಾರದು. ವರದಿ ಮೇಲೆ ವರದಿ ಕೊಡುವುದರಿಂದ ಪ್ರಯೋಜನವಿಲ್ಲ’ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾಗೆ ಹೈಕೋರ್ಟ್ ಕ್ಲಾಸ್ ತೆಗೆದುಕೊಂಡಿದೆ.

ರಾಮನಗರದ ಬಿಡದಿಯ ಕೇತಗಾನಹಳ್ಳಿಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಡಿ.ಸಿ.ತಮ್ಮಣ್ಣ ವಿರುದ್ಧದ ಭೂ ಒತ್ತುವರಿ ಆರೋಪ ಸಂಬಂಧ ಒತ್ತುವರಿ ತೆರವು ಮಾಡದ ಸರಕಾರದ ವಿರುದ್ಧ ದಾಖಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಹಾಜರಾಗಿದ್ದರು. ಈ ವೇಳೆ ಸಮಾಜ ಪರಿವರ್ತನಾ ಸಮುದಾಯ ಪರ ಹಿರಿಯ ವಕೀಲ ಎಸ್.ಬಸವರಾಜು, ಗ್ರಾಂಟ್ ಇಲ್ಲದಿದ್ದರೂ 70 ಎಕರೆ ಕಾನೂನುಬಾಹಿರವಾಗಿ ಖರೀದಿಸಿದ್ದಾರೆ. ಕಂದಾಯ ಇಲಾಖೆ ಕೇವಲ 14 ಎಕರೆ ಮಾತ್ರ ಒತ್ತುವರಿ ತೆರವಿಗೆ ಮುಂದಾಗಿದೆ ಎಂದು ಆರೋಪಿಸಿದ್ದರು.

ಎಚ್.ಡಿ.ಕುಮಾರಸ್ವಾಮಿ ಕುಟುಂಬದ ವಿರುದ್ಧದ ಆರೋಪ ಸಂಬಂಧ 86 ಎಕರೆ ಜಮೀನಿನ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ. ಜಮೀನು ಮಂಜೂರಾತಿ ಅಸಲಿಯೇ, ಅಲ್ಲವೇ ಎಂದು ತನಿಖೆ ನಡೆಯುತ್ತಿದೆ. 14 ಎಕರೆ ಜಮೀನು ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ 18 ಎಕರೆಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗುತ್ತಿದೆ. ಕಾನೂನು ಪ್ರಕಾರವೇ ಒತ್ತುವರಿ ತೆರವು ಮಾಡಿಸಲಾಗುವುದು ಎಂದು ಹೈಕೋರ್ಟ್‌ಗೆ ಸರಕಾರದ ಪರ ಎಎಜಿ ಕಿರಣ್ ರೋಣ್ ಹೇಳಿಕೆ ನೀಡಿದರು. ಅಲ್ಲದೆ ಮಂಜೂರಾದ ಜಮೀನು ಖರೀದಿ ಮಾಡಲಾಗಿದೆ. ಮಂಜೂರಾತಿ ಅಸಲಿಯೇ ಇಲ್ಲವೇ ಎಂದು ಸಮಿತಿ ಪರಿಶೀಲಿಸುತ್ತಿದೆ. ಒಂದು ಇಂಚು ಅಕ್ರಮ ಜಮೀನಿಗೂ ಅವಕಾಶ ನೀಡುವುದಿಲ್ಲವೆಂದು ಎಎಜಿ ಮಾಹಿತಿ ನೀಡಿದರು.

ಒಟ್ಟು 110 ಎಕರೆ ಗೋಮಾಳ ಜಮೀನು ಒತ್ತುವರಿಯಾಗಿದೆ. ನಕಲಿ ಭೂಮಂಜೂರಾತಿ ಆಧರಿಸಿ ಖರೀದಿ ಮಾಡಿದ್ದಾರೆ. ಯಾವುದಕ್ಕೂ ಗ್ರಾಂಟ್ ಸರ್ಟಿಫಿಕೇಟ್ ಇಲ್ಲ. 2014ರಲ್ಲೇ ತಹಶೀಲ್ದಾರ್ ಈ ಬಗ್ಗೆ ವರದಿ ನೀಡಿದ್ದಾರೆ. ಈವರೆಗೂ ಸಂಪೂರ್ಣ ಒತ್ತುವರಿ ತೆರವುಗೊಳಿಸಿಲ್ಲ. ನಕಲಿ ಗ್ರಾಂಟ್ ಆಧರಿಸಿ ಖರೀದಿಸಿದ ಜಮೀನು ವಶಪಡಿಸಿಕೊಂಡಿಲ್ಲ. ಗೋಮಾಳ ಜಮೀನನ್ನು ಪ್ರಭಾವಿಗಳು ಖರೀದಿ ಮಾಡಿದ್ದಾರೆ. ಹೀಗಾಗಿ ಸಂಪೂರ್ಣ ಜಮೀನು ಒತ್ತುವರಿ ಎಂದು ಪರಿಗಣಿಸಿ ವಶಪಡಿಸಿಕೊಳ್ಳಬೇಕು. 2014ರ ಲೋಕಾಯುಕ್ತ ವರದಿಯಂತೆ ಕ್ರಮ ಕೈಗೊಳ್ಳಲು ಹಿರಿಯ ವಕೀಲ ಎಸ್.ಬಸವರಾಜು ಮನವಿ ಮಾಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ, ಕೇತಗಾನಹಳ್ಳಿಯಲ್ಲಿ ಎಷ್ಟು ಜಮೀನು ಗ್ರಾಂಟ್ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಕೇತಗಾನಹಳ್ಳಿಯಲ್ಲಿ ಜಮೀನು ಗ್ರಾಂಟ್ ಮಾಡಿದ ದಾಖಲೆ ಇಲ್ಲ. ಹೀಗಾಗಿ ಸಮಿತಿ ರಚನೆ ಮಾಡಿ ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಗ್ರಾಂಟ್ ಸರ್ಟಿಫಿಕೇಟ್‌ಗಳ ಅಸಲಿಯೇ ಎಂಬುದು ಪರಿಶೀಲಿಸಲಾಗುತ್ತದೆ. ಎಫ್‌ಎಸ್‌ಎಲ್‌ನಿಂದಲೂ ಈ ಬಗ್ಗೆ ವರದಿ ಪಡೆಯಲಾಗುತ್ತಿದೆ ಎಂದರು.

14 ಎಕರೆ ಒತ್ತುವರಿ ತೆರವುಗೊಳಿಸಿ ಸ್ವಾಧೀನಪಡಿಸಿಕೊಳ್ಳಲಾಗಿದೆ. 18 ಎಕರೆ ಒತ್ತುವರಿ ತೆರವಿಗೆ ನೋಟಿಸ್ ನೀಡಲಾಗಿದೆ. ಗ್ರಾಂಟ್ ಅಸಲಿತನದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ರಾಜೇಂದ್ರ ಕಠಾರಿಯಾ ಹೇಳಿಕೆ ನೀಡಿದರು. ನಂತರ ಒಂದು ವಾರದಲ್ಲಿ ವರದಿ ಕೊಡಲು ಸಾಧ್ಯವೇ ಎಂದು ಹೈಕೋರ್ಟ್ ಪ್ರಶ್ನಿಸಿತು. ಸಮಿತಿ ಫೊರೆನ್ಸಿಕ್ ಅಭಿಪ್ರಾಯ ಪಡೆಯಬೇಕಿದೆ. ಇದಕ್ಕೆ ಕಾಲಾವಕಾಶ ಬೇಕೆಂದು ರಾಜೇಂದ್ರ ಕಠಾರಿಯಾ ನ್ಯಾಯಪೀಠಕ್ಕೆ ತಿಳಿಸಿದರು.

ಈ ಸಂದರ್ಭದಲ್ಲಿ ಮತ್ತೆ ಮಧ್ಯ ಪ್ರವೇಶಿದ ನ್ಯಾ.ಕೆ.ಸೋಮಶೇಖರ್, ನ್ಯಾ.ಟಿ.ವೆಂಕಟೇಶ ನಾಯಕ್ ಅವರ ಪೀಠ, ಈಗ ದಾಖಲೆ ನಾಪತ್ತೆಯಾಗಿದೆ. ಮುಂದೆ ಜಮೀನು ನಾಪತ್ತೆಯಾಗಬಹುದು ಎಂದು ಹೇಳಿತು. ಜಮೀನಿಂದ ಪಡೆದ ಲಾಭ ರಿಕವರಿಗೂ ಆದೇಶಿಸಬೇಕಾಗಬಹುದು ಎಂದು ಸರಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಎಚ್ಚರಿಕೆ ನೀಡಿತ್ತು. ಅಲ್ಲದೆ ಸಂಪೂರ್ಣ ವರದಿ ಕೊಡಿ ಅರ್ಧಂಬರ್ಧ ವರದಿ ಕೊಡಬೇಡಿ ಎಂದು ಪೀಠ ಹೇಳಿತು. ಕೇತಗಾನಹಳ್ಳಿಯ ಸರ್ವೇ ನಂ 7, 8, 9, 16 ಮತ್ತು 79ರ ಒತ್ತುವರಿ ತೆರವಿನ ಬಗ್ಗೆ 10 ದಿನಗಳಲ್ಲಿ ವರದಿ ಕೊಡಿ ಎಂದು ಎ.3 ರೊಳಗೆ ವರದಿ ನೀಡಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News