ಮತದಾರರಿಗೆ ಆಮಿಷ ಪ್ರಕರಣ | ಡಿಕೆಶಿ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ ಸೂಚನೆ

Update: 2024-04-25 11:22 GMT

ಬೆಂಗಳೂರು: ಆರ್.ಆರ್ ನಗರದಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಆಮಿಷ ಆರೋಪ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ ನೀಡಿದೆ.

ತಮ್ಮ ವಿರುದ್ಧ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಹೈಕೋರ್ಟ್ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲರಾದ ಉದಯ್ ಹೊಳ್ಳ ವಾದ ಮಂಡಿಸಿ, ಚುನಾವಣೆ ಭಾಷಣವನ್ನು ಆಮಿಷವೆಂದು ಆರೋಪಿಸಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚುನಾವಣಾ ಆಯೋಗದ ವಕೀಲರು, ಮತದಾರರಿಗೆ ಡಿ.ಕೆ.ಶಿವಕುಮಾರ್ ಆಮಿಷ ಒಡ್ಡಿದ್ದಾರೆ. ನಾನು ಇಲ್ಲಿ ಬಿಸಿನೆಸ್ ಡೀಲ್ ಗೆ ಬಂದಿದ್ದೇನೆ, ನಿಮಗೆ ಹೆಚ್ಚು ಕಾವೇರಿ ನೀರು ಬೇಕೆಂದು ಕೇಳಿದ್ದೀರಿ. ನಿಮಗೆ ಅಪಾರ್ಟ್ ಮೆಂಟ್ ಪಕ್ಕದ ಸಿಎ ಸೈಟ್ ಬೇಕೆಂದು ಕೇಳಿದ್ದೀರಿ. ನೀವು ನಮಗೆ ಮತ ಹಾಕಿದ 2-3 ತಿಂಗಳಲ್ಲಿ ನಿಮಗೆ ಹಸ್ತಾಂತರಿಸುತ್ತೇನೆ ಎಂದು ಡಿಕೆಶಿ ಹೇಳಿಕೆ ಉಲ್ಲೇಖಿಸಿ ವಕೀಲ ಶರತ್ ದೊಡ್ಡವಾಡ್ ವಾದಿಸಿದರು.

ಈ ವೇಳೆ ಮಧ್ಯ ಪ್ರವೇಶಿದ ನ್ಯಾಯಪೀಠ, ಚುನಾವಣೆ ಪ್ರಚಾರದ ಗುಣಮಟ್ಟ ಕುಸಿತಕ್ಕೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತು. ಅಲ್ಲದೆ ಇದೇ ರೀತಿ ಅರ್ಜಿದಾರರು ಭಾಷಣದ ವೇಳೆ ಇದು ಪುನರಾವರ್ತನೆಯಾಗದಂತೆ ಎಚ್ಚರಿಸಿ ಡಿಕೆಶಿ ಪರ ಹಿರಿಯ ವಕೀಲ ಉದಯ್ ಹೊಳ್ಳ ಅವರಿಗೆ ಕೋರ್ಟ್ ಸೂಚಿಸಿತು. ಅಲ್ಲದೆ ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಡಿಸಿಎಂ ಈ ರೀತಿ ಹೇಳಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News