ವನ್ಯಜೀವಿ ಅಂಗಾಂಗ ಮರಳಿಸಲು ರಾಜ್ಯ ಸರಕಾರ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

Update: 2024-02-20 15:20 GMT

ಬೆಂಗಳೂರು: ʼವನ್ಯಜೀವಿಗಳಿಗೆ ಸಂಬಂಧಿಸಿದ ಮತ್ತು ಅವುಗಳ ದೇಹದ ಯಾವುದೇ ಭಾಗ ಅಥವಾ ವಸ್ತುಗಳ ಸಂಗ್ರಹ ಕಾನೂನುಬಾಹಿರವಾಗಿದ್ದು, ಅಂತಹ ವಸ್ತುಗಳು ಇದ್ದಲ್ಲಿ ಅವುಗಳನ್ನು ಸ್ಥಳೀಯ ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಬೇಕು’ ಎಂದು ಘೋಷಿಸಿ ರಾಜ್ಯ ಸರಕಾರ ಹೊರಡಿಸಿದ್ದ ಅಧಿಸೂಚನೆ ಹಾಗೂ ಈ ಸಂಬಂಧ ಅರಣ್ಯಾಧಿಕಾರಿಗಳು ಅರ್ಜಿದಾರರಿಗೆ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಅಧಿಸೂಚನೆ ಮತ್ತು ನೋಟಿಸ್‌ ಪ್ರಶ್ನಿಸಿ ಕೊಡಗು ಜಿಲ್ಲೆ ವಿರಾಜಪೇಟೆಯ ಪಿ.ಎ.ರಂಜಿ ಪೂಣಚ್ಚ ಮತ್ತು ನಾಪೋಕ್ಲುವಿನ ಕೆ.ಎ.ಕುಟ್ಟಪ್ಪ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಒಟ್ಟು ಏಳು ಜನ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿರುವ ನ್ಯಾಯಪೀಠ ವಿಚಾರಣೆಯನ್ನು ಮಾರ್ಚ್‌ 18ಕ್ಕೆ ಮುಂದೂಡಿದೆ.

ಪ್ರಕರಣವೇನು?:  ಹುಲಿ ಉಗುರು ಧರಿಸಿದ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದ ರಾಜ್ಯ ಸರ್ಕಾರ 2024ರ ಜನವರಿ 10ರಂದು ಅಧಿಸೂಚನೆಯೊಂದನ್ನು ಹೊರಡಿಸಿತ್ತು. ‘ವನ್ಯಜೀವಿಗಳಿಗೆ ಸಂಬಂಧಿಸಿದ ಮತ್ತು ಅವುಗಳ ದೇಹದ ಯಾವುದೇ ಭಾಗ ಅಥವಾ ವಸ್ತುಗಳ ಸಂಗ್ರಹ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಪ್ರಕಾರ ಶಿಕ್ಷಾರ್ಹ ಅಪರಾಧ. ಒಂದು ವೇಳೆ ಯಾರಾದರೂ ತಮ್ಮ ಬಳಿ ವನ್ಯಜೀವಿಗಳ ದೇಹದ ಭಾಗಗಳನ್ನು ಇದ್ದಲ್ಲಿ ಅವುಗಳನ್ನು ಸಮೀಪದ ಅರಣ್ಯಾಧಿಕಾರಿ ವಶಕ್ಕೆ ಒಪ್ಪಿಸಬೇಕು. ಇವುಗಳ ನಿಖರತೆ ಮತ್ತು ಕಾನೂನು ಬದ್ಧತೆಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿತ್ತು.

ಈ ನಿಟ್ಟಿನಲ್ಲಿ ಪ್ರಕರಣದ ಅರ್ಜಿದಾರರಿಗೆ ಮಡಿಕೇರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ನೋಟಿಸ್‌ ನೀಡಿ, ‘ನೀವು ಮುಖ್ಯ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಉಡುಗೆ–ತೊಡುಗೆ ಜೊತೆಗೆ ಸಾಲು ಸಾಲು ಹುಲಿ ಉಗುರುಗಳನ್ನು ಹೊಂದಿರುವ ಕತ್ತಿಯನ್ನು ನಿಮ್ಮ ಬಳಿ ಹೊಂದಿರುತ್ತೀರಿ. ಈ ಕುರಿತಂತೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಅದಕ್ಕೆ ಸಂಬಂಧಿಸಿದ ಛಾಯಾಚಿತ್ರಗಳೂ ನಮ್ಮ ಬಳಿ ಇವೆ. ಆದ್ದರಿಂದ, ನೀವು ಧರಿಸಿರುವ ಹುಲಿ ಉಗುರುಗಳನ್ನು ತಕ್ಷಣವೇ ಅರಣ್ಯ ಇಲಾಖೆ ಕಚೇರಿಗೆ ತಂದು ಒಪ್ಪಿಸಬೇಕು. ನಿಮ್ಮ ಬಳಿ ಹುಲಿ ಉಗುರುಗಳು ಇಲ್ಲವೆಂಬುದೇ ನಿಮ್ಮ ನಿಲುವಾದಲ್ಲಿ ಕಚೇರಿಗೆ ಹಾಜರಾಗಿ ಛಾಯಾಚಿತ್ರಗಳ ಬಗ್ಗೆ ಸ್ಪಷ್ಟನೆ ನೀಡಲು ಸೂಚಿಸಲಾಗಿದೆ’ ಎಂದು ತಿಳಿಸಿದ್ದರು. ‘ಈ ನೋಟಿಸ್‌ ಮತ್ತು ಸರಕಾರ ಹೊರಡಿಸಿದ ಅಧಿಸೂಚನೆ ಸಂವಿಧಾನದ 14, 19 ಮತ್ತು 21ರ ಸ್ಪಷ್ಟ ಉಲ್ಲಂಘನೆ’ ಎಂದು ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News