ತೀವ್ರ ಬಿಸಿಲಿನಲ್ಲಿ ಕೆಲಸ ಮಾಡುವ ಪೌರಕಾರ್ಮಿಕರ ರಕ್ಷಣೆಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ರಾಜ್ಯ ಸರ್ಕಾರವು ಬೇಸಿಗೆಯ ತೀವ್ರ ಬಿಸಿಲಿನಲ್ಲಿ ಪೌರಕಾರ್ಮಿಕರು ಮತ್ತು ಹೊರಾಂಗಣದಲ್ಲಿ ಕೆಲಸ ಮಾಡುವ ಇತರ ಕಾರ್ಮಿಕರ ಆರೋಗ್ಯವನ್ನು ರಕ್ಷಿಸಲು ತಕ್ಷಣವೇ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆದೇಶಿಸಿದೆ. ಬಿಸಿಲ ಬೇಗೆಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಸೂಕ್ತ ಕ್ರಮಗಳಿಗಾಗಿ ಸರ್ಕಾರಕ್ಕೆ ನಿರ್ದೇಶನಕ ಕೋರಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (AICCTU) ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಪೌರಕಾರ್ಮಿಕರಿಂದ ಬಿಸಿಲಿನಲ್ಲಿ ಕೆಲಸ ಮಾಡಿಸುವುದನ್ನು ನಿಲ್ಲಿಸಬೇಕೆಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ರಾಜ್ಯ ಸರ್ಕಾರವು ಬೇಸಿಗೆ ದಿನಗಳಲ್ಲಿ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು ಈ ಹಿನ್ನೆಲೆಯಲ್ಲಿ, ಸರ್ಕಾರವು ಮಾರ್ಚ್ 20 ಮತ್ತು ಎಪ್ರಿಲ್ 2 ರಂದು ಎರಡು ಸುತ್ತೋಲೆಗಳನ್ನು ಹೊರಡಿಸಿತ್ತು.
ಸುತ್ತೋಲೆಯ ಮುಖ್ಯ ಅಂಶಗಳು:
► ಮಧ್ಯಾಹ್ನ 12 ರಿಂದ 3ರ ನಡುವೆ ಕಾರ್ಮಿಕರಿಂದ ಕೆಲಸ ಮಾಡಿಸದಂತೆ ಸೂಚನೆ.
► ಸಡಿಲ ಬಟ್ಟೆ, ತಂಪಾದ ಬಣ್ಣದ ಬಟ್ಟೆ ಧರಿಸಲು ಸೂಚನೆ.
► ಕ್ಯಾಪ್, ಸ್ಕಾರ್ಫ್, ಛತ್ರಿ ಮತ್ತು ORS ಬಳಸುವ ಸಲಹೆ.
► ಶಾಖ ಸಂಬಂಧಿತ ಕಾಯಿಲೆಗಳ ಲಕ್ಷಣಗಳನ್ನು ಗಮನಿಸಿ ತಕ್ಷಣ ಚಿಕಿತ್ಸೆ ನೀಡಬೇಕೆಂದು ನಿರ್ದೇಶನ.
► ಬಸ್ ನಿಲ್ದಾಣ, ಮಾರುಕಟ್ಟೆ, ಉದ್ಯಾನವನಗಳಲ್ಲಿ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಬೇಕು.
► ಮಕ್ಕಳಿಗೆ, ವೃದ್ಧರಿಗೆ, ಕಾಯಿಲೆಪೀಡಿತರಿಗೆ ವಿಶೇಷ ಕಾಳಜಿ.
ಮೇಲಿನ ಕ್ರಮಗಳನ್ನು ಶಿಫಾರಸು ಮಾಡಿದಂತೆ, ನಗರಾಭಿವೃದ್ಧಿ ಇಲಾಖೆ ಕೂಡ 2 ಎಪ್ರಿಲ್ 2025 ರಂದು ಮತ್ತೋಂದು ಸುತ್ತೋಲೆಯನ್ನು ಹೊರಡಿಸಿದೆ. ಈ ಮೂಲಕ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ತಮ್ಮ ವ್ಯಾಪ್ತಿಯ ಶಾಖಪೀಡಿತ ಪ್ರದೇಶಗಳನ್ನು ಗುರುತಿಸಿ, ಪೌರಕಾರ್ಮಿಕರ ಕೆಲಸದ ವೇಳೆಯನ್ನು ಬದಲಾಯಿಸಲು ಹಾಗೂ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲು ಸೂಚನೆ ನೀಡಲಾಗಿದೆ.
ಉಚ್ಛ ನ್ಯಾಯಾಲಯವು, ಈ ಎರಡು ಸುತ್ತೋಲೆಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ತಕ್ಷಣವೇ ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಆದೇಶಿಸಿದೆ. ಪೌರಕಾರ್ಮಿಕರ ಆರೋಗ್ಯ ಮತ್ತು ಘನತೆಯನ್ನು ರಕ್ಷಿಸುವುದು ಸರ್ಕಾರದ ಹೊಣೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ತೀರ್ಪನ್ನು AICCTU ಸ್ವಾಗತಿಸಿದ್ದು, ಸರ್ಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಎಲ್ಲ ಕಡೆಗಳಲ್ಲೂ ಈ ಸುತ್ತೋಲೆಗಳನ್ನು ತಕ್ಷಣ ಜಾರಿಗೆ ತರಬೇಕೆಂದು ಹಾಗೂ ಪೌರಕಾರ್ಮಿಕರ ಜೀವ ಮತ್ತು ಆರೋಗ್ಯವನ್ನು ರಕ್ಷಿಸಬೇಕೆಂದು ಎಂದು ಆಗ್ರಹಿಸುತ್ತಿದೆ.