ರಾಜಕೀಯ ದುರುದ್ದೇಶದಿಂದ ಸಿಎಂ ವಿರುದ್ಧ ಇಸಿಐಆರ್ ದಾಖಲು : ಎಚ್.ಕೆ.ಪಾಟೀಲ್

Update: 2024-10-01 15:12 GMT

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಈ.ಡಿ)ವು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜಕೀಯ ದುರುದ್ದೇಶದಿಂದ ಇಸಿಐಆರ್ ದಾಖಲಿಸಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಆರೋಪಿಸಿದ್ದಾರೆ.

ಮಂಗಳವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಮನಿ ಲಾಂಡ್ರಿಂಗ್ ಎಲ್ಲಿದೆ? ಕಾನೂನನ್ನು ತಮ್ಮ ಮನಸ್ಸಿಗೆ ಬಂದಂತೆ ಬಳಸಿಕೊಂಡರೆ ಹೇಗೆ? ಕೇಂದ್ರ ಸರಕಾರ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಕಿಡಿಗಾರಿದರು.

ರಾಜಭವನವನ್ನು ದುರುಪಯೋಗ ಮಾಡಿಕೊಂಡರು. ಈಗ ಈ.ಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕಾನೂನು ಹೋರಾಟ ಮಾಡಲು ನಮಗೆ ಸಾಕಷ್ಟು ಅವಕಾಶಗಳಿವೆ. ಈ ಸಂಬಂಧ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಮುಡಾದಿಂದ ತಮಗೆ ಹಂಚಿಕೆಯಾಗಿದ್ದ ನಿವೇಶನಗಳನ್ನು ಹಿಂದಿರುಗಿಸಿ ಬರೆದಿರುವ ಪತ್ರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಯ ಪತ್ನಿ ಬರೆದಿರುವ ಪತ್ರದಲ್ಲಿರುವ ವಿವರಗಳನ್ನು ನೋಡಿದರೆ, ಒಬ್ಬ ಗೃಹಿಣಿಗೆ ಯಾವ ರೀತಿ ಮಾನಸಿಕ ಆಘಾತ ಆಗಿದೆ ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು.

ಅಪಪ್ರಚಾರ, ರಾಜಕೀಯ ದುರುದ್ದೇಶದಿಂದ ಒಬ್ಬರ ಮೇಲೆ ಗೂಬೆ ಕೂರಿಸಬಾರದು. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯ ಪತ್ನಿ ನಡೆದುಕೊಂಡಿರುವ ರೀತಿ ಮೆಚ್ಚುಗೆ ವ್ಯಕ್ತಪಡಿಸುವಂತಹದ್ದು, ಅವರು ನಿವೇಶನಗಳನ್ನು ಹಿಂದಿರುಗಿಸುವ ಕುರಿತು ತೆಗೆದುಕೊಂಡಿರುವ ನಿರ್ಣಯ ಸೂಕ್ತವಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅವರ ಬೆನ್ನಿಗೆ ಹೈಕಮಾಂಡ್, ರಾಜ್ಯದ ಜನ ಹಾಗೂ ನಾವೆಲ್ಲ ಶಾಸಕರು, ಸಚಿವರು ಇದ್ದೇವೆ. ಚುನಾಯಿತ ಸರಕಾರವನ್ನು ಅಸ್ಥಿರಗೊಳಿಸಲು ನಡೆಯುತ್ತಿರುವ ಈ ಕೃತ್ಯಗಳನ್ನು ಜನ ಗಮನಿಸುತ್ತಿದ್ದಾರೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News