‘ಜಾತಿಗಣತಿ’ ವರದಿ ಸಂಪುಟದ ಮುಂದೆ ತಂದು ತೀರ್ಮಾನ : ಗೃಹ ಸಚಿವ ಜಿ.ಪರಮೇಶ್ವರ್

Update: 2024-10-06 13:04 GMT

ಬೆಂಗಳೂರು: ರಾಜ್ಯದ ಸಾಮಾಜಿಕ, ಆರ್ಥಿಕ ಸಮೀಕ್ಷಾ (ಜಾತಿಗಣತಿ) ವರದಿಯನ್ನು ಸಚಿವ ಸಂಪುಟದ ಸಭೆ ಮುಂದೆ ತಂದು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ರವಿವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ಸ್ವೀಕಾರ ಮಾಡಿಲ್ಲ ಅಂದರೆ ಮಾಡಿಲ್ಲ ಅಂತಾರೆ. ಮಾಡಿದರೆ ಯಾಕೆ ಈಗ ಮಾಡುತ್ತೀರೆಂದು ವ್ಯಾಖ್ಯಾನ ಮಾಡುತ್ತಾರೆ. ಜನಗಣತಿ ಸ್ವೀಕಾರ ವಿಳಂಬಕ್ಕೂ ಕಾರಣಗಳಿವೆ. ಕ್ಯಾಬಿನೆಟ್‍ನಲ್ಲಿ ಚರ್ಚೆ ಮಾಡಿ ಅಸೆಂಬ್ಲಿಗೆ ತರಬೇಕಾ, ಬೇಡವಾ ಎಂದು ತೀರ್ಮಾನಿಸುತ್ತೇವೆ ಎಂದರು.

ಕೇಂದ್ರ ಜನಗಣತಿ ಕೂಡ ಆಗಲಿ. ಓವರ್ ಲ್ಯಾಪ್ ಆಗಿದ್ದರೆ ಮುಂದೆ ಸರಿಪಡಿಸಿಕೊಳ್ಳಬಹುದು. ಯಾವುದಾದರೂ ಸಮುದಾಯದ ಅಂಕಿ ಸಂಖ್ಯೆ ಹೆಚ್ಚು ಕಡಿಮೆ ಆಗಿದ್ದರೆ ಅನಂತರದಲ್ಲಿ ಸರಿ ಮಾಡಿಕೊಳ್ಳಬಹುದು. ಯಾವಾಗಲೂ ಕೇಂದ್ರ ಸರಕಾರದ ಜನಗಣತಿಯನ್ನೇ ಎಲ್ಲರೂ ಪರಿಗಣಿಸುತ್ತಾರೆ, ಉಪಯೋಗಿಸುತ್ತಾರೆ. ಒಂದು ಸಾರಿ ಕ್ಯಾಬಿನೆಟ್‍ಗೆ ಬಂದು ಚರ್ಚೆಯಾಗಲಿ, ಆಮೇಲೆ ನೋಡೋಣ. ರಾಜ್ಯ ಸರಕಾರ 160 ಕೋಟಿ ರೂ. ಖರ್ಚು ಮಾಡಿದೆ. ಅದಕ್ಕೂ ಲೆಕ್ಕ ಕೊಡಬೇಕು. ನಾಳೆ ಸಿಎಜಿ ಕೂಡ ಇದಕ್ಕೆ ಆಕ್ಷೇಪ ಮಾಡಬಹುದು ಎಂದು ಪರಮೇಶ್ವರ್ ಹೇಳಿದರು.

ರಾಜ್ಯದ ಪ್ರತಿ ಬೆಳವಣಿಗೆ ವಿಚಾರವಾಗಿ ನಮ್ಮ ಪಕ್ಷದ ಅಧ್ಯಕ್ಷರಿಗೆ ಎಐಸಿಸಿ ನಾಯಕರಿಗೆ ನೇರ ಸಂಪರ್ಕ ಇರುತ್ತದೆ. ಸರಕಾರ ಯಾವ ರೀತಿ ನಡೆಯುತ್ತಿದೆ ಎಂಬುದರ ಮಾಹಿತಿಯನ್ನು ಹೈಕಮಾಂಡ್ ಮಾಹಿತಿ ಕಲೆ ಹಾಕುತ್ತಿರಬಹುದು. ಗೃಹ ಸಚಿವನಾಗಿ ನನಗೂ ಮಾಹಿತಿ ಬರುತ್ತದೆ. ರಹಸ್ಯವಾಗಿ ಯಾರೂ ಏನೂ ಮಾಡುತ್ತಿಲ್ಲ. ರಾಜಕೀಯವಾಗಿ ಯಾವುದೇ ಗುಂಪುಗಾರಿಕೆ ಆಗುತ್ತಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಅಹಿಂದ ನಾಯಕ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಟಾರ್ಗೆಟ್ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಸಿದ್ದರಾಮಯ್ಯಗೆ ಕೆಲವೊಂದು ಮಾಹಿತಿ ಇದೆ, ಅದಕ್ಕಾಗಿ ಹೀಗೆ ಹೇಳಿರಬಹುದು. ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪು ಏನಿದೆ?, ಸಮಾಜ ಯಾವ ರೀತಿ ನಡೆದುಕೊಳ್ಳುತ್ತಿದೆ ಅನ್ನೋದನ್ನು ನೋಡುತ್ತಿದ್ದೇವೆ. ಅದನ್ನು ಗಮನಿಸಿಯೇ ಸಿದ್ದರಾಮಯ್ಯ ಹೇಳಿರಬಹುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News