ಹೋಮಿಯೋಪಥಿ ವೈದ್ಯರು ಜನರಲ್ಲಿ ವಿಶ್ವಾಸ ಬೆಳೆಸಬೇಕು: ಯು.ಟಿ. ಖಾದರ್

Update: 2024-06-12 18:42 GMT

ಬೆಂಗಳೂರು: ಸಾಮಾನ್ಯ ಜನರಿಗೆ ಹೋಮಿಯೋಪಥಿಯ ಬಗ್ಗೆ ವಿಶ್ವಾಸ ಮೂಡುವ ಹಾಗೆ ವೈದ್ಯರು ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಹೋಮಿಯೋಪಥಿ ಉಳಿಯುತ್ತದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಖಾಸಗಿ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯಗಳ ಆಡಳಿತ ಸಂಘ ಆಯೋಜಿಸಿದ್ದ ‘ವಿಶ್ವ ಹೋಮಿಯೋಪಥಿ ದಿನಾಚರಣೆ’ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇಂದು ಅವಕಾಶಗಳು ಹೆಚ್ಚಾಗಿದ್ದು, ಪ್ರಾಮಾಣಿಕ ಹಾಗೂ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಂಶೋಧನೆಗಳ ಮೂಲಕ ಹೋಮಿಯೋಪಥಿಯನ್ನು ಮುಂದೆ ತೆಗೆದುಕೊಂಡು ಹೋಗಬೇಕು. ಯಾವ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆಗಳು ನಡೆಯುವುದಿಲ್ಲವೋ ಆ ಕ್ಷೇತ್ರ ಬೆಳವಣಿಗೆ ಆಗುವುದಿಲ್ಲ ಎಂದು ಹೇಳಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಹೋಮಿಯೋಪಥಿ ವೈಜ್ಞಾನಿಕವಲ್ಲ ವೆಂದು ಹಲವು ಜನರು ಟೀಕೆ ಮಾಡುತ್ತಾರೆ. ಆದರೆ ಅದು ನೂರಾರು ವರ್ಷಗಳಿಂದ ಇದ್ದು, ಹಲವು ಜನರಿಗೆ ಸಹಾಯಕವಾಗಿದೆ. ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯಗಳ ಆಡಳಿತ ಸಂಘ ಹಲವು ಬೇಡಿಕೆಗಳನ್ನು ಇಟ್ಟಿದ್ದು, ಸಾಧ್ಯವಾದಷ್ಟು ಸಹಾಯ ಮಾಡಲಾಗುತ್ತದೆ. ಹೋಮಿಯೋಪಥಿ ಬ್ರಿಜ್ ಕೋರ್ಸ್ ರಚನೆಯ ಬೇಡಿಕೆಯೂ ಇದ್ದು, ಈ ಕುರಿತು ಚರ್ಚಿಸಲಾಗುದು ಎಂದು ಹೇಳಿದರು.

ಹೋಮಿಯೋಪಥಿ, ಅಲೋಪಥಿ ಎಂದು ನಾವು ಯಾವುದೇ ಬೇಧ ಮಾಡುವುದಿಲ್ಲ. ರಾಜ್ಯದ ಜನರ ಆರೋಗ್ಯದ ದೃಷ್ಠಿಯಿಂದ ವೈಜ್ಞಾನಿಕ, ಕಾನೂನಾತ್ಮಕ ರೂಪುರೇಷೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ರಾಜ್ಯದ ಜನರ ಆರೋಗ್ಯಕ್ಕೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುವುದು ಸರಕಾರದ ಜವಾಬ್ಧಾರಿಯಾಗಿದೆ. ಜತೆಗೆ ಹೋಮಿಯೋಪಥಿಯ ಭವಿಷ್ಯದ ಬಗ್ಗೆಯೂ ಯೋಚನೆ ಮಾಡಬೇಕಿದೆ. ಹೋಮಿಯೋಪಥಿ ಒಂದೇ ಕಡೆ ನಿಲ್ಲದೇ ಪ್ರಗತಿಯಾಗುತ್ತಿರಬೇಕು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಖಾಸಗಿ ಹೋಮಿಯೋಪಥಿಕ್ ವೈದ್ಯಕೀಯ ಮಹಾ ವಿದ್ಯಾಲಯಗಳ ಆಡಳಿತ ಸಂಘದ ಅಧ್ಯಕ್ಷ ವಿನೋದ್ ದೊಡ್ಡಣ್ಣನವರ್, ರಾಷ್ಟ್ರೀಯ ಅಧ್ಯಕ್ಷ ಡಾ.ಆನಂದ ಎ.ಕುಲಕರ್ಣಿ, ಡಾ.ಡಿ.ಟಿ.ಬಾಮನೆ ಮತ್ತಿತರರು ಉಪಸ್ಥಿತರಿದ್ದರು.

ಹೋಮಿಯೋಪಥಿ ವೈದ್ಯರು ಜನರಲ್ಲಿ ವಿಶ್ವಾಸ ಬೆಳೆಸಬೇಕು: ಯು.ಟಿ.ಖಾದರ್ ‘ಇತ್ತೀಚಿನ ದಿನಗಳಲ್ಲಿ ನಕಲಿ ವೈದ್ಯರ ಹಾವಳಿ ವ್ಯಾಪಕವಾಗಿ ಕೇಳಿಬರುತ್ತಿದೆ. ಯಾವುದೇ ವೈದ್ಯಕೀಯ ಕೋರ್ಸ್ ಮುಗಿಸದೆ ಇರುವವರು ಕ್ಲಿನಿಕ್‍ಗಳನ್ನು ತೆರೆದು ಚಿಕಿತ್ಸೆ ನೀಡುತ್ತಾರೆ. ಇದರ ಬಗ್ಗೆ ಸರಕಾರಕ್ಕೆ ಸಾಕಷ್ಟು ದೂರುಗಳು ಬಂದಿವೆ. ಗ್ರಾಮೀಣ ಭಾಗದ ಜನರ ಅಮಾಯಕತೆಯನ್ನು ಕೆಲವರು ದುರುಪಯೋಗ ಪಡಿಸಿಕೊಂಡು ನಕಲಿ ಚಿಕಿತ್ಸೆ ನೀಡುತ್ತಾರೆ. ಇದು ಕಾನೂನು ಬಾಹಿರ ಎಂದು ಗೊತ್ತಿದ್ದರೂ ಕೆಲವರು ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ಮುಂದೆ ಇದಕ್ಕೆ ಕಡಿವಾಣ ಬೀಳಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

ಹೋಮಿಯೋಪತಿ ಹಾಗೂ ಅಲೋಪತಿ ಬ್ರಿಜ್ ಕೋರ್ಸ್ ಬೇಡಿಕೆ ಇಟ್ಟಿದ್ದು, ಇದರ ಬಗ್ಗೆ ಹೋಮಿಯೋಪತಿ ವೈದ್ಯರ ಸಂಘ ರಾಷ್ಟ್ರೀಯ ವೈದ್ಯಕೀಯ ಆಯೋಗ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಕೊಡಬೇಕು ಎಂದು ಅವರು ಸಲಹೆ ನೀಡಿದರು.

ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಹೋಮಿಯೋಪತಿಯ ಪ್ರತಿನಿಧಿಯೊಬ್ಬರನ್ನು ಸಿಂಡಿಕೇಟ್ ಸದಸ್ಯನಾಗಿ ನೇಮಿಸಬೇಕೆಂದು ಹೋಮಿಯೊಪಥಿ ಸಂಘದ ಪ್ರತಿನಿಧಿಯನ್ನು ನೇಮಿಸಬೇಕು ಎನ್ನುವ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ಕುರಿತು ವಿಶ್ವವಿದ್ಯಾನಿಲಯದ ಕುಲಪತಿ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.

‘ನೀಟ್ ಪರೀಕ್ಷಾ ಪದ್ಧತಿ ಉಳ್ಳವರನ್ನು ಮೇಲೆತ್ತಿ ಬಡ ವಿದ್ಯಾರ್ಥಿಗಳನ್ನು ಕೆಳಗೆ ತಳ್ಳವ ವ್ಯವಸ್ಥೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೀಟ್ ವಿರುದ್ಧ ಧ್ವನಿ ಎತ್ತಿರುವುದು ಸ್ವಾಗತಾರ್ಹ. ನೀಟ್‍ನಿಂದ ಎಸ್ಸಿ-ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದೆ’

-ಡಾ. ಕೆ.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ, ಖಾಸಗಿ ಹೋಮಿಯೋಪಥಿಕ್ ವೈದ್ಯಕೀಯ ಮಹಾ ವಿದ್ಯಾಲಯಗಳ ಆಡಳಿತ ಸಂಘ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News